Connect with us

Latest

ಅಮಿತ್ ಶಾ ವಿರುದ್ಧ ಎಫ್‍ಐಆರ್ ದಾಖಲು – ಬಿಜೆಪಿಯಿಂದ ಪ್ರತಿಭಟನೆ

Published

on

ಕೋಲ್ಕತ್ತಾ: ಮಂಗಳವಾರ ಸಂಜೆಯ ರೋಡ್ ಶೋ ವೇಳೆ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ಪಶ್ಚಿಮ ಬಂಗಾಳ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಬಿಜೆಪಿಯ ಹಲವು ಕಾರ್ಯಕರ್ತರ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೆಹಲಿಯ ಬಿಜೆಪಿ ವಕ್ತಾರ ತಾಜಿಂದರ್ ಬಗ್ಗಾ ಅವರನ್ನು ಪೊಲೀಸರು ಮಧ್ಯರಾತ್ರಿ ವಶಕ್ಕೆ ಪಡೆದಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅಮಿತ್ ಶಾ, ಲೋಕಸಭೆಯ 6 ಹಂತಗಳ ಚುನಾವಣೆಯಲ್ಲಿ ಯಾವ ರಾಜ್ಯದಲ್ಲಿ ಹಿಂಸಾಚಾರ ನಡೆದಿಲ್ಲ. ಪಶ್ಚಿಮ ಬಂಗಾಳದಲ್ಲಿ ಮಾತ್ರ ಹಿಂಸಾಚಾರ ನಡೆಯುತ್ತಿದೆ. ಟಿಎಂಸಿಯ ಕುಮ್ಮಕ್ಕಿನಿಂದಲೇ ಹಿಂಸಾಚಾರ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಒಂದು ವೇಳೆ ನನ್ನ ರೋಡ್ ಶೋ ನಡೆಯುವಾಗ ಸಿಆರ್ಪಿಎಫ್​ ಯೋಧರು ಸ್ಥಳದಲ್ಲಿ ಇಲ್ಲದೇ ಇದ್ದರೆ ನಾನು ಅಲ್ಲಿಂದ ಬರುವುದೇ ಕಷ್ಟವಾಗುತಿತ್ತು. ಟಿಎಂಸಿಯ ಗೂಂಡಾಗಳು ಏನು ಬೇಕಾದರೂ ಮಾಡುವ ಸಾಧ್ಯತೆ ಇತ್ತು. ಆದರೆ ಅದೃಷ್ಟ ನನ್ನ ಜೊತೆ ಇದ್ದ ಕಾರಣ ನಾನು ಸ್ಥಳದಿಂದ ಪಾರಾದೆ ಎಂದು ತಿಳಿಸಿದರು.

ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಅಗತ್ಯವಿಲ್ಲ. ಅಲ್ಲಿನ ಜನರೇ ರಾಜ್ಯ ಸರ್ಕಾರವನ್ನು ಮೇ 23 ರಂದು ಕಿತ್ತು ಹಾಕುತ್ತಾರೆ ಎಂದು ಅಮಿತ್ ಶಾ ಹೇಳಿದರು. ಪ್ರಚಾರಕ್ಕೆ ಅಡ್ಡಿ ಪಡಿಸಿದ್ದನ್ನು ಖಂಡಿಸಿ ಬಿಜೆಪಿ ನಾಯಕರು ದೆಹಲಿಯಲ್ಲಿ ಮಮತಾ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ಟಿಎಂಸಿ ನಾಯಕರು ಸಾಮಾಜಿಕ ಜಾಲತಾಣದಲ್ಲಿ ವಿದ್ಯಾಸಾಗರ್ ಅವರ ಭಾವಚಿತ್ರವನ್ನು ಪ್ರಕಟಿಸುವ ಮೂಲಕ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಆಗಿದ್ದು ಏನು?
ಮಂಗಳವಾರ ನಡೆದ ರೋಡ್ ಶೋ ವೇಳೆ ಕಾರ್ಯಕರ್ತರು ಮೋದಿ, ಜೈಶ್ರೀರಾಮ್ ಘೋಷಣೆ ಕೂಗುತ್ತಿದ್ದರು. ಈ ಸಂದರ್ಭದಲ್ಲಿ ವಿದ್ಯಾಸಾಗರ್ ಕಾಲೇಜಿನ ಒಳಗಡೆ ಇದ್ದ ಟಿಎಂಸಿ ಕಾರ್ಯಕರ್ತರು ಎನ್ನಲಾದ ಗುಂಪೊಂದು ಬಿಜೆಪಿ ಕಾರ್ಯಕರ್ತರತ್ತ ಕಲ್ಲು ತೂರಿತ್ತು. ಪ್ರತಿಯಾಗಿ ಕೇಸರಿ ಟೀಶರ್ಟ್ ಧರಿಸಿದ್ದ ಬಿಜೆಪಿ ಕಾರ್ಯಕರ್ತರು ಕಲ್ಲಲ್ಲೇ ಪ್ರತಿದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ಮಾರಾಮಾರಿ ನಡೆದಿದ್ದು ವಾಹನಗಳೂ ಬೆಂಕಿಗಾಹುತಿಯಾಗಿದೆ. ಕಾಲೇಜಿನಲ್ಲಿದ್ದ ವಿದ್ಯಾಸಾಗರ್ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು.

ಪೊಲೀಸರು ಮಧ್ಯಪ್ರವೇಶಿಸಿ ಲಾಠಿ ಬೀಸಿದ್ದಾರೆ. ಈ ಹಿಂಸಾಚಾರಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ, ಮಮತಾ ಬ್ಯಾನರ್ಜಿ ಅವರ ಕಾಯಕರ್ತರು ನನ್ನ ಮೇಲೆ ದಾಳಿ ನಡೆಸಲು ಮುಂದಾಗಿದ್ದರು. ರೋಡ್ ಶೋ ನಡೆಸಿ ಹಿಂಸಾಚಾರ ಮಾಡಲು ಟಿಎಂಸಿ ಪ್ಲಾನ್ ಮಾಡಿಕೊಂಡಿತ್ತು. ಪೊಲೀಸರು ಮೌನ ಪ್ರೇಕ್ಷಕರಾಗಿದ್ದರು ಎಂದು ದೂರಿದ್ದರು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಮಿತ್ ಶಾ ಅವರನ್ನು ಗೂಂಡಾ ಎಂದು ಕರೆದಿದ್ದು, ಬಿಜೆಪಿ ಕಾರ್ಯಕರ್ತರು ಹಿಂಸಾಚಾರ ಮಾಡಿದ್ದು, ಅವರೇ ವಿದ್ಯಾಸಾಗರ್ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿದ್ದರು.

ವಿದ್ಯಾಸಾಗರ್ ಪ್ರತಿಮೆ ಕಾಲೇಜಿನ ಕ್ಯಾಂಪಸ್ ಒಳಗಡೆ ಇದೆ. ಕ್ಯಾಂಪಸ್ ಒಳಗಡೆ ರೋಡ್ ಶೋ ನಡೆಸಲು ಅನುಮತಿ ಇಲ್ಲ. ಅಷ್ಟೇ ಅಲ್ಲದೇ ಬಿಜೆಪಿ ಕಾರ್ಯಕರ್ತರು ಕ್ಯಾಂಪಸ್ ಒಳಗಡೆ ಹೋಗಿಲ್ಲ. ಕ್ಯಾಂಪಸ್ ಒಳಗಡೆ ಇದ್ದ ಟಿಎಂಸಿ ಕಾರ್ಯಕರ್ತರೇ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಆರೋಪಿಸಿದ್ದಾರೆ.