Connect with us

Districts

ಕೊರೊನಾ ಎಫೆಕ್ಟ್ – ಕೋಲಾರದ ಆಲೂಗೆಡ್ಡೆಗೆ ಈಗ ಬಂಗಾರದ ಬೆಲೆ

Published

on

– ಬಿತ್ತನೆ ಬೀಜಕ್ಕೂ ಭಾರೀ ಬೇಡಿಕೆ
– 15 ವರ್ಷಗಳಲ್ಲಿ ಬೆಲೆ ದುಬಾರಿ

ಕೋಲಾರ : ಜಿಲ್ಲೆಯ ಪಾಲಿಗೆ ಆಲೂಗೆಡ್ಡೆ ವಿಶಿಷ್ಟ ಬೆಳೆಯಾಗಿದೆ. ಈ ಅಪರೂಪದ ಬೆಳೆಗೆ ಬಂಗಾರದ ಬೆಲೆ ಬಂದಿದೆ. ಬೆಲೆ ಗಗನಕ್ಕೇರಿದ್ದು ಪೊಟಾಟೋ ಬೆಳೆ ಬೆಳೆದ ರೈತರು ಪುಲ್ ಖುಷಿಯಾಗಿದ್ದಾರೆ. ಮತ್ತೊಂದೆಡೆ ಬಿತ್ತನೆ ಬೀಜಕ್ಕೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಯಾಗಿದೆ. ಈಗ ಆಲೂಗಡ್ಡೆ ಬಿತ್ತನೆ ಮಾಡುತ್ತಿರುವ ರೈತರಿಗೆ ಬಿಸಿ ತುಪ್ಪ ಬಾಯಿಗೆ ಬಿದ್ದಂತಾಗಿದೆ.

ಕೋಲಾರ ಬಂಗಾರಪೇಟೆ ಎಪಿಎಂಸಿ ಮಾರುಕಟ್ಟೆಯಲ್ಲಿ ಅಪರೂಪಕ್ಕೆ ಅಪರೂಪ ಎನ್ನುವಂತೆ ಅಲೂಗಡ್ಡೆ ಬೆಲೆ ಗಗನಕ್ಕೇರಿದೆ. ಐವತ್ತು ಕೆಜಿ ಬಿತ್ತನೆ ಆಲೂಗಡ್ಡೆಗೆ ಮಾರುಕಟ್ಟೆಯಲ್ಲಿ 5000 ದಿಂದ 6000 ರೂಪಾಯಿಗೆ ಮಾರಾಟವಾಗುತ್ತಿದೆ. ಇದು ಹದಿನೈದು ವರ್ಷಗಳಲ್ಲೇ ಅತಿ ಹೆಚ್ಚಿನ ಐತಿಹಾಸಿಕ ಬೆಲೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಆಲೂಗಡ್ಡೆಗೆ ಇಂಥಾದೊಂದು ಬೇಡಿಕೆ ಸೃಷ್ಟಿಯಾಗೋದಕ್ಕೆ ಕಾರಣ ಕೊರೊನಾ.

ರೈತರು ಕೊರೊನಾ ಕಾಲದಲ್ಲಿ ಹೆಚ್ಚಾಗಿ ಆಲೂಗಡ್ಡೆ ಬೆಳೆದಿಲ್ಲ, ಕಾರಣ ಪಂಜಾಬ್‍ನ ಜಲಂಧರ್‍ನಿಂದ ಬಿತ್ತನೆ ಆಲೂಗಡ್ಡೆ ತರಿಸೋದಕ್ಕೆ ಸರಿಯಾದ ವ್ಯವಸ್ಥೆಗಳಿಲ್ಲದೆ ವ್ಯಾಪಾರಸ್ಥರು ಕೂಡಾ ಸುಮ್ಮನಾಗಿದ್ದರು. ಐದಾರು ತಿಂಗಳ ಕಾಲ ಎಲ್ಲೂ ಕೂಡಾ ಆಲೂಗಡ್ಡೆ ಬಿತ್ತನೆಯಾಗಿಲ್ಲ. ಆದ್ದರಿಂದ ಈಗ ದೇಶದ ವಿವಿಧೆಡೆ ಆಲೂಗಡ್ಡೆ ಬಿತ್ತನೆ ಮಾಡಲು ಶುರುಮಾಡಿದ್ದರಿಂದ ಬಿತ್ತನೆ ಆಲೂಗಡ್ಡೆಗೆ ಸಹಜವಾಗಿಯೇ ಬೇಡಿಕೆ ಶುರುವಾಗಿದೆ. ಅದರ ಜೊತೆಗೆ ಮಾರುಕಟ್ಟೆಯಲ್ಲಿ ಆಲೂಗಡ್ಡೆಗೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗಿದ್ದು 50 ಕೆಜಿ ಮೂಟೆ ಆಲೂಗಡ್ಡೆ 3000 ಸಾವಿರ ರೂಪಾಯಿಗೆ ಏರಿಕೆಯಾಗಿದೆ. ಇದೆ ಮೊದಲು ಆಲೂಗಡ್ಡೆಗೆ ದಾಖಲೆ ಬೆಲೆ ಬಂದಿರುವುದು ಎನ್ನುತ್ತಾರೆ ರೈತ ಮುಖಂಡರು.

ಬಂಗಾರಪೇಟೆ ಎಪಿಎಂಸಿ ಮಾರುಕಟ್ಟೆಯಲ್ಲಿ ಬಿತ್ತನೆ ಆಲೂಗಡ್ಡೆ ಮಾರಾಟಕ್ಕೆ ಯಾರೊಬ್ಬರೂ ಅನುಮತಿ ಪಡೆದಿಲ್ಲ, ಎಲ್ಲರೂ ಜಲಂಧರ್ ಆಲೂಗಡ್ಡೆ ಎಂಬ ಹೆಸರಲ್ಲಿ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡುತ್ತಾರೆ. ಮೊದಲು ಎರಡೂವರೆ ಸಾವಿರದಿಂದ ಮೂರು ಸಾವಿರಕ್ಕೆ ಒಂದು ಮೂಟೆ ಬಿತ್ತನೆ ಆಲೂಗಡ್ಡೆ ಸಿಗುತ್ತಿತ್ತು, ಆದರೆ ಕೊರೊನಾ ಎಫೆಕ್ಟ್‍ನಿಂದ ಈಗ ಏಕಾಏಕಿ ಜಲಂಧರ್ ಆಲೂಗಡ್ಡೆಗೆ ಐದಾರು ಸಾವಿರ ರೂಪಾಯಿ ಬೆಲೆ ಏರಿಕೆಯಾಗಿ, ಕೆಲವು ರೈತರು ಹಾಗೂ ಕೆಲವು ಸಂಘಟನೆಗಳು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ವ್ಯಾಪಾರಸ್ಥರೇ ಉದ್ದೇಶಪೂರ್ವಕವಾಗಿ ಹೆಚ್ಚಿನ ಬೆಲೆಗೆ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡುತ್ತಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

1 ಮೂಟೆ ಬಿತ್ತನೆ ಆಲೂಗಡ್ಡೆಗೆ 3925 ರೂ ಬೆಲೆ ನಿಗದಿ ಮಾಡಿ, ಯಾರೂ ಹೆಚ್ಚಿನ ಬೆಲೆಗೆ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡದಂತೆ ಸೂಚನೆ ನೀಡಿದ್ದಾರೆ. ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದೆ ಆದಲ್ಲಿ ರಶೀದಿ ಸಮೇತ ದೂರು ನೀಡುವಂತೆ ಮಾರುಕಟ್ಟೆಯಲ್ಲಿ ಬ್ಯಾನರ್ ಹಾಕಿದ್ದಾರೆ. ಆದರೆ ಈವರೆಗೂ ಯಾರೂ ದೂರು ನೀಡಲು ಮುಂದೆ ಬಂದಿಲ್ಲ. ಕಾರಣ ಮಾರುಕಟ್ಟೆಯಲ್ಲಿ ಬಿತ್ತನೆ ಆಲೂಗಡ್ಡೆಗೆ ಇರುವ ಡಿಮ್ಯಾಂಡ್ ರೀತಿಯಲ್ಲೇ ರೈತರು ಬೆಳೆದ ಆಲೂಗಡ್ಡೆ ಬೆಲೆ ಕೂಡಾ ಸರ್ವಕಾಲಿಕ ಏರಿಕೆ ಕಂಡಿದೆ. ಹಾಗಾಗಿ ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಲೂಗಡ್ಡೆ ಹಾಗೂ ಬಿತ್ತನೆ ಆಲೂಗಡ್ಡೆ ಎರಡಕ್ಕೂ ಮಾರುಟಕ್ಟೆಯಲ್ಲಿ ಬೆಲೆ ಏರಿಕೆಯಾಗಿದೆ. ಸದ್ಯ ಬಿತ್ತನೆ ಆಲೂಗಡ್ಡೆ ಮಾರುವ ವ್ಯಾಪಾರಸ್ಥರು, ಬೆಳೆದ ರೈತರಿಗೂ ಬಂಪರ್ ಆಗಿದ್ದು ಇದು ಹೀಗೆ ಮುಂದುವರೆದರೆ ಜಿಲ್ಲೆಯ ರೈತರಷ್ಟೆ ಅಲ್ಲ ವ್ಯಾಪಾರಸ್ಥರಿಗೂ ಲಾಟರಿ ಹೊಡೆದಂತಾಗಿದೆ.

Click to comment

Leave a Reply

Your email address will not be published. Required fields are marked *

www.publictv.in