ದರೋಡೆಗೆ ಖಾರದ ಪುಡಿ ಸಿದ್ಧಗೊಳಿಸುತ್ತಿದ್ದಾಗ ಸಿಕ್ಕಿಬಿದ್ರು 6 ಜನ ಖದೀಮರು

– ಆರೋಪಿಗಳಿಂದ 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಕೋಲಾರ: ಕುಖ್ಯಾತ 8 ಜನ ದರೋಡೆಕೋರರ ತಂಡದ ಆರು ಖದೀಮರನ್ನು ಕೋಲಾರದ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಕೋಲಾರ ತಾಲೂಕಿನ ಕೂತಾಂಡಹಳ್ಳಿ ಗ್ರಾಮದ ಧನಂಜಯ್ (20), ವಕ್ಕಲೇರಿ ಗ್ರಾಮದ ದೀಕ್ಷಿತ್ (22), ಗುರುಪ್ರಸಾದ್ (21), ರಾಮನಗರ ಜಿಲ್ಲೆಯ ಬಿಡದಿ ಬಳಿಯ ಭದ್ರಾಪುರ ಗ್ರಾಮದ ಚಂದ್ರಶೇಖರ್ (24), ಬೆಂಗಳೂರು ಮೂಲದ ಯತೀಶ್ ಹಾಗೂ ಬಸವರಾಜ್ ಬಂಧಿತ ಆರೋಪಿಗಳು. ಬಂಧಿತರು ರಾಜ್ಯದ ವಿವಿಧೆಡೆ ಬೈಕ್ ಹಾಗೂ ಸರಗಳ್ಳತನ ಪ್ರಕರಣಗಳಲ್ಲಿ ತೊಡಗಿದ್ದರು. ಈ ಗ್ಯಾಂಗ್ ಪೈಕಿ ಇನ್ನೂ ಇಬ್ಬರು ತಪ್ಪಿಸಿಕೊಂಡಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಸ್‍ಪಿ ಕಾರ್ತಿಕ್ ರೆಡ್ಡಿ ಅವರು, ದರೋಡೆಕೋರರು ನಗರದ ಸಮೀಪದ ಬೆಟ್ಟಬೇನಜೇನಹಳ್ಳಿ ಗೇಟ್ ಬಳಿ ಬೈಕ್ ನಿಲ್ಲಿಸಿದ್ದರು. ರಸ್ತೆ ಬಳಿಯ ಲಾಂಗ್, ಮಚ್ಚು ಹಿಡಿದುಕೊಂಡು ಖಾರದ ಪುಡಿ ಸಿದ್ಧಗೊಳಿಸುತ್ತಿದ್ದರು. ಇದನ್ನು ಗಮನಿಸಿದ ಕೋಲಾರ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 6 ಜನರ ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಲಾಗುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದರು.

ಬಂಧಿತರಿಂದ 12 ಲಕ್ಷ ಮೌಲ್ಯದ 150 ಗ್ರಾಂ ಚಿನ್ನಾಭರಣ ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆಗೆ ಪ್ರಶಂಸೆ ಪತ್ರದೊಂದಿಗೆ 10 ಸಾವಿರ ರೂ. ನಗದನ್ನು ಬಹುಮಾನ ನೀಡಲಾಗಿದೆ. ಇನ್ನೂ ಇಬ್ಬರು ಪರಾರಿಯಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಕಾರ್ತಿಕ್ ರೆಡ್ಡಿ ಮಾಹಿತಿ ನೀಡಿದರು.

ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಈ ದರೋಡೆಕೋರ ಗ್ಯಾಂಗ್ ವಿರುದ್ಧ 18  ಪ್ರಕರಣಗಳು ದಾಖಲಾಗಿವೆ. ಆರೋಪಿಗಳು ಬೆಂಗಳೂರು ಗ್ರಾಮಾಂತರ, ರಾಮನಗರ, ಬೆಂಗಳೂರು ನಗರ, ದೊಡ್ಡಬಳ್ಳಾಪುರ, ಕೋಲಾರದ ಮಾಲೂರು, ಮಾಸ್ತಿ ಸೇರಿದಂತೆ ವಿವಿಧ ಪ್ರದೇಶದಲ್ಲಿ ತಮ್ಮ ಕೈ ಚಳಕ ತೋರಿಸಿ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದ್ದರು ಎಂದು ತಿಳಿಸಿದರು.

ಮನೆಗಳ್ಳತನದ ಆರೋಪಿ ಕೋಲಾರ ಮೂಲದ ಅಡುಗೆ ಶಂಕರ್ ಅಲಿಯಾಸ್ ಶಂಕರ್ ನನ್ನು ಕೋಲಾರದ ನಗರ ಪೊಲೀಸರು ಬಂಧಿಸಿದ್ದಾರೆ. ಕೋಲಾರದ ನಾಲ್ಕು ಕಡೆ ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಶಂಕರ್ ನಿಂದ 150 ಗ್ರಾಂ ಬಂಗಾರ, 1 ಕೆಜಿ ಬೆಳ್ಳಿಯನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ.

Leave a Reply

Your email address will not be published. Required fields are marked *