Corona
ಕೋಲಾರ ಅನಾಥಾಶ್ರಮದ 27 ಮಕ್ಕಳಿಗೆ ಕೊರೊನಾ- ಗಾರ್ಮೆಂಟ್ಸ್ ನಲ್ಲಿ ಮಹಾಮಾರಿ ನರ್ತನ

ಕೋಲಾರ: ಗಡಿ ಜಿಲ್ಲೆ ಕೋಲಾರದಲ್ಲೂ ಕೊರೊನಾ ಆರ್ಭಟ ಮತ್ತೆ ಶುರುವಾಗಿದೆ. ಕಳೆದ ಒಂದು ವಾರದಿಂದ ಕೊರೊನ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ವೈರಸ್ನ ಸೆಕೆಂಡ್ ಇನ್ನಿಂಗ್ಸ್ ಈಗ ಅನಾಥಾಶ್ರಮ, ಗಾರ್ಮೆಂಟ್ಸ್ಗಳಿಗೆ ವಕ್ಕರಿಸಿದ್ದು ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
ಇಷ್ಟು ದಿನ ಒಬ್ಬೊಬ್ಬರಲ್ಲಿ ಕಾಣಿಸಿಕೊಳುತ್ತಿದ್ದ ಕೊರೊನಾ ಈಗ ಸಾಮೂಹಿಕವಾಗಿ ಕಾಣಿಸಿಕೊಳ್ಳುತ್ತಿದೆ. ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಅತ್ತಿಗಿರಿಕೊಪ್ಪ ಗ್ರಾಮದ ಬಳಿ ಇರುವ ಬಸೇರಾ ಅನಾಥಾಶ್ರಮದ 27 ಮಕ್ಕಳಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿದೆ.
ಮೊದಲಿಗೆ ಪ್ರಥಮ ಪಿಯು ವಿದ್ಯಾರ್ಥಿನಿಗೆ ಜ್ವರ, ಶೀತ ಕಾಣಿಸಿಕೊಂಡ ಹಿನ್ನೆಲೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ವಿದ್ಯಾರ್ಥಿನಿಗೆ ಸೋಂಕು ಖಚಿತವಾಗ್ತಿದ್ದಂತೆ ಅನಾಥಾಶ್ರಮದಲ್ಲಿರುವ 65 ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿಲಾಗಿತ್ತು. ಈ ವೇಳೆ ಒಟ್ಟು 27 ಮಕ್ಕಳಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಸದ್ಯ ಎಲ್ಲರನ್ನು ಐಸೋಲೆಷನ್ ನಲ್ಲಿರಿಸಲಾಗಿದೆ.
ಬಹುತೇಕರು ಕೋಲಾರ, ಬಂಗಾರಪೇಟೆಯ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಾಗಿದ್ದು, ಸೋಂಕು ಮತ್ತಷ್ಟು ಹರಡುವ ಆತಂಕ ಎದುರಾಗಿದೆ. ಸದ್ಯ ಪಾಸಿಟಿವ್ ಇರುವ ಮಕ್ಕಳನ್ನು ಬೇರ್ಪಡಿಸಿ ಅನಾಥಾಶ್ರಮದ ಕಟ್ಟಡದಲ್ಲಿಯೇ ಕ್ವಾರಂಟೈನ್ ಮಾಡಲಾಗಿದ್ದು, ಇಡೀ ಬಸೇರಾ ಸಂಸ್ಥೆಯ ಕಟ್ಟಡವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ.
ಜಿಲ್ಲೆಯ ಶಾಹಿ ಗಾರ್ಮೆಂಟ್ನ 30 ಮಂದಿ ಕಾರ್ಮಿಕರಲ್ಲಿ ಸಹ ಕೊರೊನಾ ಸೊಂಕು ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಕೊರೊನ ಆತಂಕ ಹೆಚ್ಚಾಗಲು ಕಾರಣವಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಜಯ್ ಕುಮಾರ್, ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ವಸತಿ ಶಾಲೆಗಳು, ಗಾರ್ಮೆಂಟ್ ಗಳ ಮೇಲೆ ಹೆಚ್ಚಿನ ನಿಗಾ ವಹಿಸಿ ಕಟ್ಟೆಚ್ಚರ ವಹಿಸಲಾಗಿದೆ.
