Connect with us

Districts

16 ದಿನದಲ್ಲಿ ಒಂದೇ ಗ್ರಾಮದ 11 ಜನರ ನಿಗೂಢ ಸಾವು- ಗ್ರಾಮಸ್ಥರಲ್ಲಿ ಶುರುವಾಯ್ತು ಆತಂಕ

Published

on

ಕೋಲಾರ: ಗ್ರಾಮದಲ್ಲಿ ಕಳೆದ 16 ದಿನಗಳಿಂದ ನಡೆಯುತ್ತಿರುವ ಸರಣಿ ನಿಗೂಢ ಸಾವು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದ ಘಟನೆ ಮುಳಬಾಗಿಲು ತಾಲೂಕಿನಲ್ಲಿ ನಡೆದಿದೆ.

ಆಂಧ್ರಪ್ರದೇಶ ಗಡಿಭಾಗಕ್ಕೆ ಹೊಂದಿಕೊಂಡಿರುವ ಚಮಕಲಹಳ್ಳಿಯಲ್ಲಿ 16 ದಿನದಲ್ಲಿ 11 ಜನರು ನಿಗೂಢವಾಗಿ ಮೃತಪಟ್ಟಿದ್ದಾರೆ. ಆರೋಗ್ಯವಾಗಿದ್ದ ಜನರೇ ಕೆಲವು ದಿನಗಳ ಹಿಂದೆ ಕಾಣಿಸಿಕೊಂಡ ಸಣ್ಣ-ಪುಟ್ಟ ಕಾಯಿಲೆ ನೆಪ ಹೇಳಿಕೊಂಡು ಆಸ್ಪತ್ರೆಗಳಿಗೆ ಹೋಗುವ ಮುನ್ನವೇ ಜನರು ಸಾವನ್ನಪ್ಪುತ್ತಿದ್ದಾರೆ.

ಮುಳಬಾಗಿಲು ತಾಲೂಕಿನಲ್ಲಿ ಚಮಕಲಹಳ್ಳಿಯ ನಿವಾಸಿ ನಿಸ್ಸಾರ್ (38), ಖಾದರ್ (46), ಶಹೀದಾ (23), ಅಕ್ಬರ್ ಬೇಗ್ (40), ಮಂಜುನಾಥ್ (28), ಹೈದರ್ (90), ಅಮೀನ್ ತಾಜ್ (95), ಖಾದರ್ ಪಾಷಾ (65), ನಜೀಬ್ (68), ನವಾಜ್ ಬೇಗ್ (52), ಫಯಾಜ್ (37) ಮೃತ ದುರ್ದೈವಿಗಳು. ಈ ಪೈಕಿ ಕೆಲವರು ಹೊಟ್ಟೆನೋವು ಬಂದು ಪ್ರಾಣಬಿಟ್ಟರೆ, ಮತ್ತೆ ಕೆಲವರು ವಾಂತಿ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಇಬ್ಬರು ದೀರ್ಘಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಗ್ರಾಮದಲ್ಲಿ ನಡೆಯುತ್ತಿರುವ ನಿಗೂಢ ಸರಣಿ ಸಾವಿನಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಯಾವಾಗ ಯಾರ ಮನೆಯಲ್ಲಿ ಸಾವು ಸಂಭವಿಸುತ್ತದೆಯೋ ಎನ್ನುವ ಭಯದಲ್ಲಿ ಜೀವನ ಕಳೆಯುತ್ತಿದ್ದಾರೆ. ಸಂಜೆಯಾದರೆ ಮನೆಯಿಂದ ಹೊರಗೆ ಹೋಗಲು ಚಮಕಲಹಳ್ಳಿಯ ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿಗಳು, ವೈದ್ಯರು ಹಾಗೂ ಸಿಬ್ಬಂದಿ ಚಮಕಲಹಳ್ಳಿಯ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ನಾಗೇಶ್ ಅವರ ಕ್ಷೇತ್ರವಾದ ಚಮಕಲಹಳ್ಳಿ ಗ್ರಾಮದಲ್ಲಿ ಸುಮಾರು 800 ಮನೆಗಳಿವೆ. ಅಲ್ಪಸಂಖ್ಯಾತರೆ ಹೆಚ್ಚಿರುವ ಈ ಗ್ರಾಮದಲ್ಲಿ, ಮೃತಪಟ್ಟವರಲ್ಲಿ ಹೆಚ್ಚಿನ ಜನರು ಕೂಡ ಮುಸ್ಲಿಂ ಸಮುದಾಯದವರೇ ಆಗಿದ್ದಾರೆ.

ಗ್ರಾಮದಲ್ಲಿ ಸ್ವಚ್ಛತೆ ಕೊರತೆ ಅಥವಾ ಬೇರೆ ಯಾವುದೋ ಸಾಂಕ್ರಾಮಿಕ ರೋಗದಿಂದ ಸಾವು ಸಂಭವಿಸುತ್ತಿರಬಹುದು ಎಂಬ ಶಂಕೆ ವ್ಯಕ್ತವಾಗಿಲ್ಲ. ಈ ವಿಷಯ ತಿಳಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್ ಸೇರಿದಂತೆ ವೈದ್ಯರ ತಂಡ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ ಗ್ರಾಮದಲ್ಲಿ ಸಣ್ಣ ಪುಟ್ಟ ರೋಗ ಲಕ್ಷಣ ಇರುವವರ ರಕ್ತ ಹಾಗೂ ನೀರಿನ ಮಾದರಿಗಳನ್ನು ಸಂಗ್ರಹಿಸಿಕೊಂಡು ಹೋಗಿದ್ದಾರೆ. ಜೊತೆಗೆ ನಾಳೆಯಿಂದ ಗ್ರಾಮದಲ್ಲಿ ವೈದ್ಯರ ತಂಡ ಕಳಿಸಿ ಸಂಪೂರ್ಣ ಪರೀಕ್ಷೆ ನಡೆಸುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.