Connect with us

Districts

ಕೊರೊನಾ ಸಂಕಷ್ಟದಲ್ಲಿ ಕೃಷಿಗಾಗಿ ಕೆರೆ ಅಭಿವೃದ್ಧಿಗೆ ಮುಂದಾದ ಕೆಜಿಎಫ್ ಶಾಸಕಿ

Published

on

ಕೋಲಾರ: ಕೊರೊನಾ ಮಹಾಮಾರಿಗೆ ಹೆದರಿ ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಲಕ್ಷಾಂತರ ಜನರು ಮತ್ತೆ ತಮ್ಮ ಊರುಗಳಿಗೆ ವಾಪಸ್ ಬಂದಿದ್ದಾರೆ. ಆದರೆ ಊರುಗಳಿಗೆ ಹಿಂತಿರುಗಿರುವ ಯುವಕರನ್ನು ಮತ್ತೆ ಬೆಂಗಳೂರಿಗೆ ತೆರಳದಂತೆ ಹಳ್ಳಿಗಳಲ್ಲೇ ಕಟ್ಟಿಹಾಕಲು ಸದ್ದಿಲ್ಲದೆ ಕೋಲಾರದಲ್ಲಿ ಒಂದು ಭರ್ಜರಿ ಸಿದ್ಧತೆ ಮಾಡಲಾಗುತ್ತಿದೆ.

ಬೃಹತ್ತಾದ ಕೆರೆಯಲ್ಲಿ ಹತ್ತಾರು ಜೆಸಿಬಿಗಳ ಅಬ್ಬರದ ಮಧ್ಯೆ ಕೆರೆಯನ್ನು ಕ್ಲೀನ್ ಮಾಡುತ್ತಿರುವ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್, ಅವರ ಜೊತೆಗೆ ಸಾವಿರಾರು ಬೆಂಬಲಿಗರು ಇಂಥಾದೊಂದು ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ. ಹೌದು ಕೋಲಾರ ಜಿಲ್ಲೆಯಲ್ಲೇ ಅತಿ ದೊಡ್ಡ ಕೆರೆ ಎಂಬ ಖ್ಯಾತಿ ಹೊಂದಿರುವ ಬೇತಮಂಗಲ ಕೆರೆ ಸುಮಾರು 1,000 ಎಕ್ರೆ ವಿಸ್ತೀರ್ಣ ಹೊಂದಿದೆ. ಸುಮಾರು 50 ರಿಂದ 60 ಗ್ರಾಮಗಳ ರೈತರು ಈ ಕೆರೆಯ ಮೇಲೆ ಅವಲಂಭಿತರಾಗಿದ್ದಾರೆ. ಇಂತಹ ಕೆರೆ ಕಳೆದ ಹಲವು ವರ್ಷಗಳಿಂದ ನೀರು ಬಾರದೆ ಗಿಡ ಗಂಟೆಗಳಿಂದ ತುಂಬಿ ಹೋಗಿತ್ತು.

ಆದರೆ ಈ ಸಮಯದಲ್ಲಿ ಕೊರೊನಾಗೆ ಹೆದರಿ ಸಾವಿರಾರು ಜನ ಯುವಕರು ಮತ್ತೆ ತಮ್ಮ ಗ್ರಾಮಗಳತ್ತ ಮುಖಮಾಡಿದ್ದಾರಲ್ಲದೆ ಹೆಚ್ಚಾಗಿ ಕೃಷಿಯಲ್ಲಿ ಆಸಕ್ತಿ ವಹಿಸುತ್ತಿದ್ದಾರೆ. ಅದಕ್ಕಾಗಿ ಬೆಂಗಳೂರಿನಿಂದ ತಮ್ಮೂರಿಗೆ ಬಂದಿರುವ ಯುವಕರನ್ನು ಇಲ್ಲೇ ಉಳಿಸಿಕೊಳ್ಳಬೇಕೆಂದ ನಿರ್ಧಾರ ಮಾಡಿರುವ ಶಾಸಕಿ ರೂಪಕಲಾ ತಮ್ಮ ಸ್ವಂತ ಹಣದಿಂದ ಬೇತಮಂಗಲ ಕೆರೆ ಕ್ಲೀನ್ ಮಾಡಿಸುತ್ತಿದ್ದಾರೆ. ಕೆಸಿ ವ್ಯಾಲಿ ನೀರು ಸಹ ಹರಿಸುವ ಜೊತೆಗೆ ಮಳೆಗಾಲ ಆರಂಭವಾಗುತ್ತಿದ್ದು ಕೆರೆಗೆ ನೀರು ಬಂದರೆ ಬೆಂಗಳೂರು ತೊರೆದು ಬಂದಿರುವ ಯುವಕರು ಹಳ್ಳಿಗಳಲ್ಲೇ ಇದ್ದು ಕೃಷಿ ಕಾರ್ಯದಲ್ಲಿ ತೊಡಗುತ್ತಾರೆ ಅನ್ನೋದು ಇವರ ಪ್ಲಾನ್ ಅಗಿದೆ. ಅದಕ್ಕಾಗಿಯೇ ಕೆರೆ ಕ್ಲೀನ್ ಮಾಡೋದಕ್ಕೆ ಸರ್ಕಾರ ಅಥವಾ ಜಿಲ್ಲಾಡಳಿತದ ಮೊರೆ ಹೋದರೆ ಕೆಲಸ ನಿಧಾನವಾಗುತ್ತದೆ ಎಂದು ತಮ್ಮ ಸ್ವಂತ ಹಣದಿಂದಲೇ ಕೆರೆ ಶುದ್ಧೀಕರಣ ಕಾರ್ಯಕ್ಕೆ ನಿಂತಿದ್ದಾರೆ.

ಕೆಜಿಎಫ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸುಮಾರು ನೂರಾರು ಹಳ್ಳಿಗಳು ಬರುತ್ತವೆ ಆ ಪೈಕಿ ಸುಮಾರು 50ಕ್ಕೂ ಹೆಚ್ಚು ಹಳ್ಳಿಗಳಿಗೆ ಈ ಕೆರೆ ಮತ್ತು ರಾಮಸಾಗರ ಕೆರೆ ನೀರಿನ ಮೂಲವಾಗಿದೆ. ಅದಕ್ಕಾಗಿಯೇ ಮಳೆಗಾಲದ ಸಮಯಕ್ಕೆ ಸರಿಯಾಗಿ ಕೆರೆ ಕ್ಲೀನ್ ಆಗಿ ಒಂದಷ್ಟು ನೀರು ಬಂದಿದ್ದೇ ಅದಲ್ಲಿ ಕೃಷಿ ಚಟುವಟಿಕೆ ಜೊತೆಗೆ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೂ ಅನುಕೂಲವಾಗುತ್ತದೆ ಅನ್ನೋದು ರೂಪಕಲಾ ಅವರ ಪ್ಲಾನ್ ಆಗಿದೆ.

ಹಾಗಾಗಿ ಸ್ಥಳೀಯರ ಸಹಕಾರದೊಂದಿಗೆ ಕೆರೆ ಕ್ಲೀನ್ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಇನ್ನು ಕಳೆದ ಇಪ್ಪತ್ತು ವರ್ಷಗಳಿಂದ ಕೆರೆ ಕ್ಲೀನ್ ಮಾಡುವ ಕೆಲಸ ಹಲವು ಕಾರಣಗಳಿಂದ ನೆನೆಗುದಿಗೆ ಬಿದ್ದಿತ್ತು. ಆದರೆ ಈ ಸಂದರ್ಭದಲ್ಲಿ ಶಾಸಕಿ ಯುವಕರನ್ನು ಹಳ್ಳಿಗಳಲ್ಲೇ ಕಟ್ಟಿಹಾಕಬೇಕೆಂಬ ಉದ್ದೇಶದಿಂದ ಕೆರೆ ಶುದ್ಧೀಕರಣ ಕಾರ್ಯಕ್ಕೆ ಕೈಹಾಕಿರುವುದಕ್ಕೆ ಹಲವರು ಸಾಥ್ ನೀಡುತ್ತಿದ್ದಾರೆ. ಜೊತೆಗೆ ಶಾಸಕಿಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *