Connect with us

Districts

ಅಬಕಾರಿ ಸಚಿವ ನಾಗೇಶ್ ವಿರುದ್ಧ ಮೋದಿಗೆ ದೂರು

Published

on

ಕೋಲಾರ: ರಾಜ್ಯದ ಬಿಜೆಪಿ ಸರ್ಕಾರದಲ್ಲಿ ವರ್ಗಾವಣೆ ದಂಧೆ ಜೋರಾಗಿದೆಯಾ ಅನ್ನೋ ಅನುಮಾನ ಇದೀಗ ಮೂಡಿದೆ. ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅಬಕಾರಿ ಸಚಿವ ಹೆಚ್ ನಾಗೇಶ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದು, ಸಚಿವರ ವಿರುದ್ದದ ದೂರು ನೇರವಾಗಿ ಪ್ರಧಾನ ಮಂತ್ರಿ ಕಚೇರಿಗೆ ತಲುಪಿದೆ.

ಹೌದು. ಅಧಿಕಾರಿಯೊಬ್ಬರ ವರ್ಗಾವಣೆಗೆ ಒಂದು ಕೋಟಿ ರುಪಾಯಿ ಲಂಚಕ್ಕೆ ಒತ್ತಾಯಿಸಿರುವ ಸಚಿವ ಹೆಚ್.ನಾಗೇಶ ವಿರುದ್ಧ ದೇಶದ ಪ್ರಧಾನಿ ಕಾರ್ಯಾಲಯಕ್ಕೆ ನೇರವಾಗಿ ದೂರು ದಾಖಲಾಗಿದೆ. ಅಷ್ಟೆ ಅಲ್ಲ ರಾಜ್ಯದ ಇ-ಜನಸ್ಪಂದನ ವಿಭಾಗದಲ್ಲಿಯೂ ಅಧಿಕೃತವಾಗಿ ದೂರು ದಾಖಲಾಗಿದೆ.

ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಉನ್ನತ ಅಧಿಕಾರಿಯೊಬ್ಬರ ಪುತ್ರಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಬೆಂಗಳೂರಿನ ಜಂಟಿ ಆಯುಕ್ತರ ಹುದ್ದೆಗೆ ವರ್ಗಾವಣೆ ಬಯಸಿದ್ದಾರೆ. ಜುಲೈ ತಿಂಗಳ ಅವಧಿಯಲ್ಲಿ ಬೆಂಗಳೂರಲ್ಲಿ ಖಾಲಿಯಿದ್ದ ಜಂಟಿ ಆಯುಕ್ತರ ಹುದ್ದೆಗಾಗಿ ಸಚಿವರ ಬಳಿ ತಮ್ಮ ಮನವಿ ಮಾಡಿದ್ದಾರೆ. ನಿವೃತ್ತಿಯ ಅಂಚಿನಲ್ಲಿದ್ದ ಈ ಅಧಿಕಾರಿ ಆರೋಗ್ಯದ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ. ಈ ಬಗ್ಗೆ ಮನವಿ ಮಾಡಿದಾಗ ಅಬಕಾರಿ ಸಚಿವ ಹೆಚ್ ನಾಗೇಶ್ ಒಂದು ಕೋಟಿ ರೂಪಾಯಿ ಲಂಚಕ್ಕಾಗಿ ಬೇಡಿಕೆಯಿಟ್ಟಿದ್ದರು. ಲಂಚ ಕೊಡುವುದಕ್ಕೆ ಅಧಿಕಾರಿಯು ನಿರಾಕರಿಸಿದ್ದಕ್ಕಾಗಿ ರಜೆ ಮೇಲೆ ತೆರಳಲು ಸಚಿವ ಹೆಚ್.ನಾಗೇಶ್  ಅವರು ಬಲವಂತ ಮಾಡಿದರು ಎಂದು ಅಧಿಕಾರಿಯ ಪುತ್ರಿ ಬೆಂಗಳೂರು ವಾಸಿ ಸ್ನೇಹಾ ಎಂಬವರು ದೂರಲ್ಲಿ ವಿವರಿಸಿದ್ದಾರೆ.

ಸಚಿವ ಹೆಚ್.ನಾಗೇಶ್ ಅವರ ಲಂಚಗುಳಿತನ ಬಗ್ಗೆ ಡಿಸಿಎಂ ಅಶ್ವತ್ಥನಾರಾಯಣ್ ಅವರಿಗೆ ಮಾಹಿತಿಯನ್ನು ಕೊಟ್ಟರೂ ಪ್ರಯೋಜನವಾಗಲಿಲ್ಲ. ಕಳೆದ ಒಂದು ತಿಂಗಳಿನಿಂದಲೂ ಅಬಕಾರಿ ಇಲಾಖೆಯಲ್ಲಿ ಲಂಚದ ಹಣವನ್ನು ಪಡೆದುಕೊಳ್ಳುವ ಮೂಲಕವೇ ಆರು ನೂರಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆಯು ಆಗಿದೆ. ಕೋಲಾರದ ಮೂಲದ ಎಲ್.ಎ ಮಂಜುನಾಥ್ ಮತ್ತು ಶಿವಮೊಗ್ಗ ಮೂಲದ ಕಚೇರಿಯ ಸಿಬ್ಬಂದಿ ಹರ್ಷ ಎನ್ನುವ ದಲ್ಲಾಳಿಗಳನ್ನು ಇರಿಸಿಕೊಂಡು ಸಚಿವರು ಅಕ್ರಮ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ತಮ್ಮ ಆದರ್ಶಗಳನ್ನು ಪಾಲಿಸುತ್ತಿರುವ ನಾನು ಇದೀಗ ತಮ್ಮ ಮೇಲೆ ಕೊನೆಯ ಭರವಸೆಯನ್ನು ಇರಿಸಿಕೊಂಡು ಈ ಪತ್ರವನ್ನು ಬರೆಯುತ್ತಿದ್ದೇನೆ ಎಂದು ಅಧಿಕಾರಿಯ ಪುತ್ರಿ ಸ್ನೇಹ ಎಂಬುವರು ಪತ್ರ ಬರೆದಿದ್ದಾರೆ. ಪ್ರಧಾನಿ ಕಚೇರಿಗೆ ದೂರನ್ನು ಬರೆದಿರುವ ಸ್ನೇಹ ಅವರು ರಾಜ್ಯದ ಸಚಿವರುಗಳಿಗೆ, ವಿರೋಧ ಪಕ್ಷದ ಮುಖಂಡರಿಗೆ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಹ ಪತ್ರವನ್ನು ಟ್ಯಾಗ್ ಮಾಡಿದ್ದಾರೆ.

ಒಟ್ಟಿನಲ್ಲಿ ವರ್ಗಾವಣೆ ದಂಧೆ ಎನ್ನುವುದು ಸರ್ಕಾರಗಳಿಗೆ ಕಾಡುವ ಭೂತ, ಈಗ ರಾಜ್ಯದಲ್ಲಿ ಅಧಿಕಾರಾರೂಢ ಬಿಜೆಪಿ ಸರ್ಕಾರಕ್ಕೂ ಆರೋಪದ ಸರದಿ ಬಂದಿದ್ದು, ಅದರಲ್ಲೂ ದೂರು ನೇರವಾಗಿ ಪ್ರದಾನಿ ಮೋದಿಯವರಿಗೆ ತಲುಪಿದ್ದು, ಅಬಕಾರಿ ಸಚಿವ ಮತ್ತು ಸರ್ಕಾರದ ಮುಖ್ಯಸ್ಥರಾಗಿ ಮುಖ್ಯಮಂತ್ರಿಗಳೆ ಇದಕ್ಕೆ ಉತ್ತರ ನೀಡಬೇಕಿದೆ.

Click to comment

Leave a Reply

Your email address will not be published. Required fields are marked *

www.publictv.in