Connect with us

Crime

ಮದ್ಯದ ಮತ್ತಿನಲ್ಲಿ 50 ವರ್ಷದ ಮಹಿಳೆಯ ರೇಪ್‍ಗೆ ಯತ್ನಿಸಿದ ಯುವಕ

Published

on

ಕೋಲಾರ: ಮದ್ಯದ ಮತ್ತಿನಲ್ಲಿ ಯುವಕನೊಬ್ಬ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ನಡೆದಿದೆ.

ಬೂದಿಕೋಟೆ ಗ್ರಾಮದ ಮುನಿರಾಜು (25) ಅತ್ಯಾಚಾರಕ್ಕೆ ಯತ್ನಿಸಿದ್ದ ಯುವಕ. ಅದೇ ಗ್ರಾಮದ ರುಕ್ಮಿಣಿಯಮ್ಮ (50) ಮುನಿರಾಜುನಿಂದ ಹಲ್ಲೆಗೊಳಗಾದ ಮಹಿಳೆ. ಭಾನುವಾರ ಸಂಜೆ ಗ್ರಾಮದ ಬಳಿಯ ಜಮೀನಿನಲ್ಲಿ ಘಟನೆ ನಡೆದಿದೆ.

ಕೂಲಿ ಕೆಲಸ ಮಾಡುತ್ತಿದ್ದ ಆರೋಪಿ ಮುನಿರಾಜು ಭಾನುವಾರ ಕೆಲಸಕ್ಕೆ ರಜೆ ಇದ್ದಿದ್ದರಿಂದ ಮದ್ಯ ಸೇವಿಸಿ ಗ್ರಾಮದಿಂದ ಸ್ವಲ್ಪ ದೂರ ಬಂದಿದ್ದ. ಈ ವೇಳೆ ಕುರಿ ಮೇಯಿಸುತ್ತಿದ್ದ ರುಕ್ಮಿಣಿಯಮ್ಮ ಅವರನ್ನು ನೋಡಿದ್ದಾನೆ. ಸುತ್ತಮುತ್ತ ಯಾರು ಇಲ್ಲದಿರುವುದನ್ನು ಗಮನಿಸಿ, ರುಕ್ಮಿಣಿಯಮ್ಮ ಅವರ ಮುಖಕ್ಕೆ ಹೊಡೆದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಮುನಿರಾಜುನಿಂದ ತಪ್ಪಿಸಿಕೊಂಡ ರುಕ್ಮಿಣಿಯಮ್ಮ ಗ್ರಾಮಕ್ಕೆ ಹೋಗಿ ಸಂಬಂಧಿಕರಿಗೆ ಘಟನೆಯನ್ನು ತಿಳಿಸಿದ್ದಾರೆ. ತಕ್ಷಣವೇ ಘಟನಾ ಸ್ಥಳಕ್ಕೆ ಬಂದ ರುಕ್ಮಿಣಿಯಮ್ಮ ಅವರ ಸಂಬಂಧಿಕರು ಹಾಗೂ ಗ್ರಾಮಸ್ಥರು ಮುನಿರಾಜುಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿ, ಆರೋಪಿಯನ್ನು ಒಪ್ಪಿಸಿದ್ದಾರೆ.

ಈ ಸಂಬಂಧ ಬಂಗಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮುನಿರಾಜುನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ರುಕ್ಮಿಣಿಯಮ್ಮ ಅವರನ್ನು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.