Connect with us

Bengaluru City

ಕೆಎಂಎಫ್ ಅಧ್ಯಕ್ಷ ಚುನಾವಣೆ- ಬಾಲಚಂದ್ರ ಜಾರಕಿಹೊಳಿ ಆಯ್ಕೆ ಬಹುತೇಕ ಖಚಿತ

Published

on

ಬೆಂಗಳೂರು: ಕೆಎಂಎಫ್ ಅಧ್ಯಕ್ಷ ಚುನಾವಣೆಯ ಹಿನ್ನೆಲೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕವಾಗಿ ಖಚಿತವಾಗಿದೆ.

ಸುಮಾರು 11 ನಿರ್ದೇಶಕರು ಬಾಲಚಂದ್ರ ಜಾರಕಿಹೊಳಿ ಬೆಂಬಲಕ್ಕೆ ನಿಂತಿದ್ದಾರೆ. ಕಾಂಗ್ರೆಸ್ ಬೆಂಬಲಿತ 6, ಜೆಡಿಎಸ್ 1, ಬಿಜೆಪಿಯ ಓರ್ವ ನಿರ್ದೇಶಕರು ಸೇರಿದಂತೆ ಮೂವರು ಅಧಿಕಾರಿಗಳ ಬೆಂಬಲ ಜಾರಕಿಹೊಳಿಗೆ ಇದೆ. ಈ ಮೂಲಕ ಒಟ್ಟು 12 ಮತಗಳು ಬಾಲಚಂದ್ರ ಬಳಿಯಿವೆ.

ಜುಲೈ 29 ರಂದು ನಡೆಯಬೇಕಾದ ಚುನಾವಣೆ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ಬಾಲಚಂದ್ರ ಜಾರಕಿಹೊಳಿಗೆ ಈ ಅದೃಷ್ಟ ಒಲಿದು ಬಂದಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಮಾಜಿ ಸಚಿವ ರೇವಣ್ಣ ಅವರಿಗೆ ಬೆಂಬಲ ಇಲ್ಲದ ಪರಿಣಾಮ ನಾಮಪತ್ರ ವಾಪಸ್ ಪಡೆಯುವ ಸಾಧ್ಯತೆಯಿದೆ.

ಈಗಾಗಲೇ ಕಳೆದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿರುವ ರೇವಣ್ಣ ಅವರ ನಾಮಪತ್ರವನ್ನು ಈ ಚುನಾವಣೆಯಲ್ಲಿ ಪರಿಗಣಿಸಲಾಗುವುದು. ಹೊಸದಾಗಿ ನಾಮಪತ್ರ ಸಲ್ಲಿಸಬೇಕು ಎಂದೇನಿಲ್ಲ. ರೇವಣ್ಣರವರು ನಾಮಪತ್ರ ಹಿಂಪಡೆದರೆ ಬಾಲಚಂದ್ರ ಜಾರಕಿಹೋಳಿಯವರು ಅವಿರೋಧ ಆಯ್ಕೆಯಾಗುತ್ತಾರೆ. ನಾಮಪತ್ರ ಹಿಂಪಡೆಯದೆ ಇದ್ದರೆ ಎಂದಿನಂತೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿದೆ. ಸೀಕ್ರೆಟ್ ವೋಟಿಂಗ್ ಮಾಡಲಾಗುತ್ತದೆ. ಬ್ಯಾಲೆಟ್ ಮೂಲಕ ಮತದಾನ ಪ್ರಕ್ರಿಯೆ ಆಗುತ್ತದೆ ಎಂದು ಚುನಾವಣಾಧಿಕಾರಿ ರವಿ ಕುಮಾರ್ ಹೇಳಿದ್ದಾರೆ.

ಇದೇ ವೇಳೆ ಬೆಂಗಳೂರು ಡೈರಿ ಅಧ್ಯಕ್ಷ ಆನಂದ್ ಕುಮಾರ್ ಪ್ರತಿಕ್ರಿಯಿಸಿ, ಡಿಕೆಶಿ ನಿರ್ದೇಶನದಂತೆ ನಾವೆಲ್ಲ ನಡೆಯುತ್ತಿದ್ದೇವೆ. ಸರ್ಕಾರ ಯಾವುದು ಇದೆಯಾ ಹಾಗೆಯೇ ಕೇಳಿ. ಸಂಸ್ಥೆಯ ಬೆಳವಣಿಗೆ ಮುಖ್ಯ ಎಂದು ಪಕ್ಷದಿಂದ ಸೂಚನೆ ಸಿಕ್ಕಿದೆ. ಹೀಗಾಗಿ ಸದ್ಯ ನಾವು ಸರ್ಕಾರ ಜಾರಕಿಹೊಳಿ ಅವರನ್ನ ಸೂಚಿಸಿದೆ. 13 ಜನ ನಿರ್ದೇಶಕರು ಜಾರಕಿಹೊಳಿ ಪರ ಇದ್ದೇವೆ. ಯಾವುದೇ ಅನುಮಾನ ಬೇಡ ಮತದಾನವಾದ್ರೂ ಗೆಲ್ಲಿಸುತ್ತೇವೆ. ಯಾವುದೇ ಆಮಿಷ ಬಿಜೆಪಿ ಒಡ್ಡಿಲ್ಲ. ಮಾರುತಿ ಕಾಶಂಪೂರ್, ಭೀಮಾನಾಯ್ಕ್, ರೇವಣ್ಣ ಮಾತ್ರ ಬೇರೆಯಾಗಿದ್ದಾರೆ. ಉಳಿದಂತೆ ಎಲ್ಲರೂ ಜಾರಕಿಹೊಳಿ ಪರ ಇದ್ದೇವೆ ಎಂದರು.

ಬಿಜೆಪಿಯಿಂದ ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ನಾನು ನಾಮಪತ್ರ ಸಲ್ಲಿಸುತ್ತೇನೆ. 13 ನಿರ್ದೇಶಕರು ನನ್ನ ಬಳಿಯಿದ್ದಾರೆ ನನ್ನನ್ನು ಬೆಂಬಲಿಸಿದ್ದಾರೆ. ಭೀಮಾನಾಯ್ಕ ಮತ್ತು ರೇವಣ್ಣನವರು ಸಹಕಾರ ಕೋರುತ್ತೇನೆ. ಮಧ್ಯಾಹ್ನ 1 ಗಂಟೆವರೆಗೆ ಚುನಾವಣೆ ನಡೆಯಲಿದೆ. ನಾನು ಅವಿರೋಧವಾಗಿ ಆಯ್ಕೆಯಾಗುತ್ತೇನೆ. ಎಚ್.ಡಿ.ರೇವಣ್ಣ ಹಿಂದೆ ನಾಮಪತ್ರ ಸಲ್ಲಿಸಿದ್ದಾರೆ. ಅವರ ಸಹಕಾರದಿಂದ ಅವಿರೋಧವಾಗಿ ಆಯ್ಕೆಯಾಗುವ ವಿಶ್ವಾಸವಿದೆ ಎಂದರು.

ಇತ್ತ ಜಾರಕಿಹೊಳಿಗೆ ಬೆಂಬಲಿಸಿ ಶಾಸಕ ಭೀಮಾನಾಯ್ಕ್ ನಾಮಪತ್ರ ಸಲ್ಲಿಸದಿರಲು ತೀರ್ಮಾನ ಮಾಡಿದ್ದಾರೆ. ಈ ಮೂಲಕ ಭೀಮಾನಾಯಕ್ ಅಧ್ಯಕ್ಷರಾಗೋದನ್ನು ತಪ್ಪಿಸಿದ್ದ ಹೆಚ್ ಡಿ ರೇವಣ್ಣಗೆ ಟಾಂಗ್ ನೀಡಿದ್ದಾರೆ ಎನ್ನಲಾಗಿದೆ. ಕೆಎಂಎಫ್ ಚುನಾವಣೆಯಲ್ಲಿ 17 ಮತ ಚಲಾವಣೆಯಾಗಲಿದ್ದು, ಅದರಲ್ಲಿ 13 ಹಾಲು ಒಕ್ಕೂಟಗಳ ಅಧ್ಯಕ್ಷರು ಸಹಕಾರ ಸಂಘಗಳ ನಿಬಂಧಕರು, ಪಶು ಮತ್ತು ಮಿನುಗಾರಿಕಾ ಇಲಾಖೆ ಕಾರ್ಯದರ್ಶಿಗಳು ಮತ ಚಲಾಯಿಸಲಿದ್ದಾರೆ.

ಜುಲೈ 29 ಕ್ಕೆ ಮುಂದೂಡಲಾಗಿದ್ದ ಚುನಾವಣೆಯನ್ನ ಅದೇ ಹಂತದಿಂದ ಮುಂದುವರಿಸುವಂತೆ ನ್ಯಾಯಾಲಯದ ಆದೇಶಿಸಿದೆ. ಮಧ್ಯಾಹ್ನ 1 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಇದೆ. 1 ಗಂಟೆಯಿಂದ 1:10 ನಿಮಿಷದವರೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 1:10 ರಿಂದ 1:40 ರವರೆಗೆ ನಾಮಪತ್ರ ವಾಪಸ್ ಪಡೆಯಲು ಕಾಲವಕಾಶ ನೀಡಲಾಗಿದೆ. ನಂತರ ಅಗತ್ಯ ಬಿದ್ದರೆ ಚುನಾವಣೆ ನಡೆಯಲಿದ್ದು, ಇಲ್ಲದಿದ್ದರೆ ಅವಿರೋಧ ಆಯ್ಕೆ ನಡೆಯಲಿದೆ.