Connect with us

Column

ಕ್ಯಾಪ್ಟನ್ ರಾಹುಲ್.. ವೈಸ್ ಕ್ಯಾಪ್ಟನ್ ಕೊಹ್ಲಿ..!

Published

on

ನು? ಕ್ಯಾಪ್ಟನ್ ಕೆಎಲ್ ರಾಹುಲ್ಲಾ? ವೈಸ್ ಕ್ಯಾಪ್ಟನ್ ವಿರಾಟ್ ಕೊಹ್ಲಿನಾ? ಟೈಟಲ್ ನೋಡಿದ ಕೂಡ್ಲೇ ಎಲ್ಲರಿಗೂ ಬರೋ ಡೌಟ್ ಇದು. ಹೌದು ಸಾರಥಿ ರಾಹುಲ್ ಅವ್ರೇ. ರಾಹುಲ್‍ನನ್ನು ಕ್ಯಾಪ್ಟನ್ ಆಗಿ ನೇಮಕ ಮಾಡಿದ್ದು ಮಾತ್ರ ಬಿಸಿಸಿಐ ಅಲ್ಲ. ಆ ತಂಡ ಟೀಂ ಇಂಡಿಯಾ ಕೂಡ ಅಲ್ಲ. ತಂಡದಲ್ಲಿರುವ ಎಲ್ಲಾ ಆಟಗಾರರು ಭಾರತೀಯರು ಕೂಡ ಅಲ್ಲ.. ಹಾ. ಗೊತ್ತಾಯ್ತು. ಗೊತ್ತಾಯ್ತು. ಐಪಿಎಲ್‍ನ ಪಂಜಾಬ್ ಕಿಂಗ್ಸ್ ಇಲೆವನ್ ಟೀಂ ಬಗ್ಗೆ ಹೇಳ್ತಿದ್ದೀವಿ. ಅಂದ್ಕೊಂಡ್ರಾ.? ಹಾಗಾದ್ರೆ, ಆರ್‌ಸಿಬಿಯ ವಿರಾಟ್ ಕೊಹ್ಲಿ, ಪಂಜಾಬ್ ಕಿಂಗ್ಸ್ ಎಲೆವೆನ್‍ಗೆ ಹೋದ್ರು ಅನ್ನೋ ಪ್ರಶ್ನೆ ಏಳುತ್ತೆ ಅಲ್ವಾ? ಒಂದು ಕ್ಷಣ ನಿಲ್ಲಿ. ನಿಮ್ಮೆಲ್ಲಾ ಅನುಮಾನಗಳನ್ನು ಪಕ್ಕಕ್ಕೆ ಇಡಿ. ನಿಮ್ಮ ಕುತೂಹಲ ತಣಿಯಲು ನೀವು ಈ ಸ್ಟೋರಿ ಓದಲೇಬೇಕು.

ಐಪಿಎಲ್ ಹರಾಜು ಮುಗಿದ ಕೂಡ್ಲೇ ಕೆಎಲ್ ರಾಹುಲ್‍ರನ್ನು ಕ್ಯಾಪ್ಟನ್ ಮಾಡ್ತೀವಿ ಅಂತಾ ಕಿಂಗ್ಸ್ ಇಲೆವೆನ್ ಘೋಷಿಸಿತ್ತು. ಆದ್ರೆ, ಐಪಿಎಲ್ ಶುರುವಾಗೋದವರೆಗೂ ರಾಹುಲ್ ಕ್ಯಾಪ್ಟೆನ್ಸಿಯನ್ನು ನೋಡೋಕೆ ಆಗಲ್ಲ. ಮತ್ತೆ ಈ ಕನ್ನಡಿಗ ದಾಂಡಿಗನನ್ನು ಕ್ಯಾಪ್ಟನ್ ಆಗಿಸಿದ್ದು ಯಾರಪ್ಪಾ? ಯಾವ ತಂಡಕ್ಕೆ ? ಅನ್ನೋ ಸಂದೇಹ ಬರುತ್ತೆ. ಇದು ಬೇರೆಲ್ಲೂ ಅಲ್ಲ. ಇಂಟರ್ನೆಟ್‍ನಲ್ಲಿ ನಡೆಯೋ ಫ್ಯಾಂಟಸಿ ಕ್ರಿಕೆಟ್‍ನಲ್ಲಿ. ನೂರು ರೂ. ಖರ್ಚು ಮಾಡಿದ್ರೆ ಸಾವಿರದಿಂದ ಲಕ್ಷ ರೂಪಾಯಿವರೆಗೂ ಜಾಕ್‍ಪಾಟ್ ಹೊಡೆಯೋ ಚಾನ್ಸ್ ಇರೋದ್ರಿಂದ ಹೆಚ್ಚಿನ ಯುವಕರು ಫ್ಯಾಂಟಸಿ ಕ್ರಿಕೆಟ್ ಮೊರೆ ಹೋಗ್ತಿದ್ದಾರೆ. ತಮ್ಮ ಬುದ್ಧಿಮತ್ತೆ ಪ್ರದರ್ಶಿಸಿಕೊಳ್ತಿದ್ದಾರೆ. ಇಎಸ್‍ಪಿಎನ್ ಕ್ರಿಕ್‍ಇನ್ಫೋ, ಸ್ಟಾರ್ ಇಂಡಿಯಾದಿಂದ ಹಿಡಿದು ಎನ್‍ಡಿಟಿವಿವರೆಗೂ ಹಲವು ಸಂಸ್ಥೆಗಳು ಫ್ಯಾಂಟಸಿ ಕ್ರಿಕೆಟ್‍ನ್ನು ನಿರ್ವಹಿಸ್ತಿವೆ.

ಡ್ರೀಮ್ 11, ಮೈಟೀಂ 11, ಹಾಲ್ ಪ್ಲೇ, ಪ್ಲೇಯರ್ಸ್‍ಸ್ಪಾಟ್, ಭಲ್ಲೆಬಾಜಿ, ಫ್ಯಾನ್ ಮಾಜಾ, 11 ವಿಕೆಟ್ಸ್, ಫ್ಯಾನ್ ಫೈಟ್‍ನಂತಹ ಹಲವು ಫ್ಯಾಂಟಸಿ ಕ್ರಿಕೆಟ್ ಆ್ಯಪ್‍ಗಳನ್ನು, ವೆಬ್‍ಸೈಟ್‍ಗಳನ್ನು ಕ್ರಿಕೆಟ್ ಪ್ರಿಯರು ಬಳಸುತ್ತಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್, ವಿಶ್ವಕಪ್ ಸಿಕ್ಸರ್ ಹೀರೋ ಯುವರಾಜ್ ಸಿಂಗ್, ಮಾಜಿ ನಾಯಕ ಮಿಸ್ಟರ್ ಕೂಲ್ ಮಹೇಂದ್ರ ಸಿಂಗ್ ಧೋನಿ ಸೇರಿ ಹಲವು ಖ್ಯಾತನಾಮರು ಇವುಗಳ ಪೈಕಿ ಕೆಲವೊಂದಕ್ಕೆ ಪ್ರಚಾರ ರಾಯಭಾರಿಗಳಾಗಿದ್ದಾರೆ. ಫ್ಯಾಂಟಸಿ ಕ್ರಿಕೆಟ್ ಜನಪ್ರಿಯ ಆಗಲು ಇವರ ಪ್ರಚಾರ ತುಂಬಾನೆ ಕೆಲಸ ಮಾಡಿದೆ. ಹೀಗಾಗಿಯೇ ಈ ಸಂಸ್ಥೆಗಳ ಆದಾಯ ಕೋಟಿಗಳಲ್ಲಿದೆ.

ಮೈದಾನದಲ್ಲಿ ಎರಡು ತಂಡಗಳ ನಡ್ವೆ ಮಾತ್ರ ಫೈಟ್ ನಡೆಯುತ್ತೆ. ಆದ್ರೆ ಈ ಫ್ಯಾಂಟಸಿ ಕ್ರಿಕೆಟ್‍ನಲ್ಲಿ ಫೈಟ್ ಮಾಡೋ ತಂಡಗಳ ಸಂಖ್ಯೆ ಲಕ್ಷ, ಕೋಟಿಗಳಲ್ಲಿ ಇರುತ್ತದೆ. ಕ್ರಿಕೆಟ್ ಟೂರ್ನಿಗಳ ಸಂದರ್ಭದಲ್ಲಿ ಈ ಕ್ರಿಕೆಟ್ ಆ್ಯಪ್‍ಗಳನ್ನು ಬಳಸಿ ಕ್ರಿಕೆಟ್ ಅಭಿಮಾನಿಗಳು ತುಂಬಾ ಎಚ್ಚರಿಕೆಯಿಂದ ತಮ್ಮ ಸ್ವಂತ ತಂಡಗಳನ್ನು ಪ್ರಕಟಿಸುತ್ತಾರೆ. ಕ್ಯಾಪ್ಟನ್, ವೈಸ್ ಕ್ಯಾಪ್ಟನ್, ವಿಕೆಟ್ ಕೀಪರ್, ಓಪನರ್ಸ್, ಬ್ಯಾಟ್ಸ್‍ಮನ್, ಬೌಲರ್, ಆಲ್‍ರೌಂಡರ್ಸ್ ವಿಭಾಗದಲ್ಲಿ ಒಟ್ಟು 11 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಮೊದಲು ನಿಮ್ಮ ಹಣಕ್ಕೆ ಪ್ರತಿಯಾಗಿ ನೀಡಲಾಗುವ ಇಂತಿಷ್ಟು ಪಾಯಿಂಟ್‍ಗಳನ್ನು ವಿನಿಯೋಗಿಸಿಕೊಳ್ಳಬೇಕು. ಒಬ್ಬೊಬ್ಬ ಆಟಗಾರರನಿಗೆ ಆತನ ಸಾಮರ್ಥ್ಯವನ್ನು ಆಧರಿಸಿ ಪಾಯಿಂಟ್‍ಗಳನ್ನು ಫಿಕ್ಸ್ ಮಾಡಲಾಗಿರುತ್ತದೆ. ಒಂದ್ವೇಳೆ ಹಣ ಮುಗಿದ್ರೆ, ಮತ್ತೆ ಹಣ ಖರ್ಚು ಮಾಡಿ ಪಾಯಿಂಟ್‍ಗಳನ್ನು ಖರೀದಿ ಮಾಡಬಹುದು.

ಆಟಗಾರನ ದಾಖಲೆ, ರನ್‍ಗಳು, ಈ ಮೈದಾನದಲ್ಲಿ ಆ ಯುವ ಕ್ರಿಕೆಟಿಗನ ಸರಾಸರಿ ಎಷ್ಟು ಹೀಗೆ ಎಲ್ಲವನ್ನು ವಿಶ್ಲೇಷಿಸಿ ತಂಡಗಳನ್ನು ರಚಿಸಿ ಬಂಡವಾಳ ಹೂಡುತ್ತಾರೆ. ಇತ್ತೀಚಿಗೆ ನಡೆದ ನ್ಯೂಜಿಲೆಂಡ್ ವರ್ಸಸ್ ಇಂಡಿಯಾ ನಡುವಿನ ಟಿ-20 ಮತ್ತು ಏಕದಿನ ಸರಣಿಗಳಲ್ಲಿ ಶೇಕಡಾ 95ರಷ್ಟು ಮಂದಿ ಫುಲ್ ಫಾರ್ಮ್‍ನಲ್ಲಿದ್ದ ಕೆಎಲ್ ರಾಹುಲ್‍ರನ್ನು ಕ್ಯಾಪ್ಟನ್ ಆಗಿ, ವೈಸ್ ಕ್ಯಾಪ್ಟನ್ ಆಗಿ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಕ್ರಿಕೆಟ್ ಅಭಿಮಾನಿಗಳು ಆಯ್ಕೆ ಮಾಡಿದ ತಂಡದಲ್ಲಿನ ಆಟಗಾರರು ಆನ್ ಫೀಲ್ಡ್‌ನಲ್ಲಿ ಮಿಂಚಿದಷ್ಟು ಲಾಭ ಹರಿದುಬರುತ್ತದೆ. ಕೆಲವರಿಗೆ ಲಕ್ಷಗಳಲ್ಲಿ ಜಾಕ್‍ಪಾಟ್ ಹೊಡೆಯುತ್ತೆ. ತುಂಬಾ ಮಂದಿ ಹಣ ಕಳೆದುಕೊಳ್ತಾರೆ.

ರಾಹುಲ್ ನಾಮ ಸಂವತ್ಸರ:
ಫೆಬ್ರವರಿ ತಿಂಗಳು ಇನ್ನೂ ಮುಗಿದಿಲ್ಲ. ಆಗಲೇ 2020ನ್ನು ರಾಹುಲ್ ನಾಮ ಸಂವತ್ಸರ ಎಂದು ಕ್ರಿಕೆಟ್ ಅಭಿಮಾನಿಗಳು ಕರೆಯಲು ಶುರು ಮಾಡಿದ್ದಾರೆ. ಕನ್ನಡಿಗ ರಾಹುಲ್ ಆರ್ಭಟಿಸುವ ರೀತಿ ಹಾಗಿದೆ. ಬ್ಯಾಟಿಂಗ್ ಆರ್ಡರ್, ಪಿಚ್, ದೇಶ.. ಹೀಗೆ ಯಾವುದನ್ನು ನೋಡದೇ ರನ್ ಹೊಳೆ ಹರಿಸ್ತಿದ್ದಾರೆ. ಈ ಸ್ಪೀಡ್ ನೋಡಿಯೇ ಫ್ಯಾಂಟಸಿ ಕ್ರಿಕೆಟ್‍ನಲ್ಲಿ ಎಲ್ಲರೂ ರಾಹುಲ್‍ರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಿಕೊಳ್ತಿದ್ದಾರೆ. ಈ ಎರಡು ತಿಂಗಳಲ್ಲಿ 6 ಏಕದಿನ ಪಂದ್ಯ ಆಡಿರುವ ರಾಹುಲ್ ಶೇಕಡಾ 70ರ ಸರಾಸರಿಯಲ್ಲಿ 350 ರನ್ ಗಳಿಸಿದ್ದಾರೆ. ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದಿದ್ದಾರೆ.

ಸ್ಥಿರ ಆಟಕ್ಕೆ ಹೆಸರಾದ ಕೊಹ್ಲಿ, ಆರು ಏಕದಿನ ಪಂದ್ಯಗಳಿಂದ ಶೇಕಡಾ 43ರ ಸರಾಸರಿಯಲ್ಲಿ 258 ರನ್ ಗಳಿಸಿ ನಾಲ್ಕನೇ ಸ್ಥಾನದಲ್ಲಿ ಇದ್ದಾರೆ. ಇನ್ನು 7 ಟಿ-20 ಇನ್ನಿಂಗ್ಸ್ ಆಡಿರುವ ರಾಹುಲ್ ಶೇಕಡಾ 54ರ ಸರಾಸರಿಯಲ್ಲಿ 323 ರನ್ ಗಳಿಸಿದ್ದಾರೆ. ರನ್ ಗಳಿಸಿದವರ ಲಿಸ್ಟ್‌ನಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ವಿರಾಟ್ ಕೊಹ್ಲಿ 6 ಇನ್ನಿಂಗ್ಸ್ ಆಡಿದ್ದು, ಶೇಕಡಾ 32ರ ಸರಾಸರಿಯಲ್ಲಿ 166 ರನ್ ಗಳಿಸಿದ್ದಾರೆ. ಇದು ಕ್ಯಾಪ್ಟನ್ ರಾಹುಲ್, ವೈಸ್ ಕ್ಯಾಪ್ಟನ್ ಕೊಹ್ಲಿ ಕಹಾನಿ! ಅಂದ ಹಾಗೇ, ಕ್ರಿಕೆಟ್ ಫ್ಯಾಂಟಸಿ ಕೂಡ ಒಂದರ್ಥದಲ್ಲಿ ಜೂಜೇ.
– ಶ್ರೀನಿವಾಸ್ ಪೊನ್ನಸಮುದ್ರ