Sunday, 19th May 2019

ಬರೋಬ್ಬರಿ 10 ವರ್ಷಗಳ ನಂತ್ರ ಬಾಲಿವುಡ್ ಲೆಜೆಂಡ್ ಜೊತೆ ಕಿಚ್ಚ

ಬೆಂಗಳೂರು: ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಬರೋಬ್ಬರಿ 10 ವರ್ಷಗಳ ನಂತರ ಬಾಲಿವುಡ್ ಲೆಜೆಂಡ್, ಬಿಗ್-ಬಿ ಅಮಿತಾಬ್ ಬಚ್ಚನ್ ಅವರ ಜೊತೆ ಬೆಳ್ಳಿ ತೆರೆ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಕಿಚ್ಚ ಸುದೀಪ್ ತೆಲುಗಿನ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಅಮಿತಾಬ್ ಬಚ್ಚನ್, ತಮಿಳು ನಟ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣದ ಬಿಡುವಿನ ಸಮಯದಲ್ಲಿ ಸುದೀಪ್ ಅವರು ಅಮಿತಾಬ್ ಬಚ್ಚನ್ ಜೊತೆ ಫೋಟೋ ತೆಗೆದುಕೊಂಡು ಟ್ವಿಟ್ಟರಿನಲ್ಲಿ ಹಾಕಿದ್ದಾರೆ.

ಸುದೀಪ್ ತನ್ನ ಟ್ವಿಟ್ಟರಿನಲ್ಲಿ, “‘ರಣ್’ ಚಿತ್ರದ ಚಿತ್ರೀಕರಣ ನಂತರ ಬರೋಬ್ಬರಿ 10 ವರ್ಷಗಳ ಬಳಿಕ ನನಗೆ ದೊಡ್ಡ ಐಕಾನ್ ಹಾಗೂ ಲೆಜೆಂಡ್ ಜೊತೆ ಮತ್ತೆ ಬೆಳ್ಳಿ ತೆರೆ ಹಂಚಿಕೊಳ್ಳಲು ಅವಕಾಶ ಸಿಕ್ಕಿದೆ. ಇವರು ತಮ್ಮ ಇಡೀ ಜೀವನವನ್ನು ಸಿನಿಮಾಕ್ಕಾಗಿ ಹಾಗೂ ನಮ್ಮನ್ನು ಮನರಂಜನೆ ನೀಡುವ ಸಲುವಾಗಿ ಮೀಸಲಿಟ್ಟಿದ್ದಾರೆ. ನನಗೆ ಈ ಅದ್ಭುತ ಕ್ಷಣವನ್ನು ಉಡುಗೊರೆಯಾಗಿ ನೀಡಿದ ಸೈರಾ ಚಿತ್ರತಂಡಕ್ಕೆ, ರಾಮ್ ಚರಣ್ ಹಾಗೂ ಸುರೇಂದರ್ ಗೆ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ.

ಮೆಗಾ ಸ್ಟಾರ್ ಚಿರಂಜೀವಿ ನಾಯಕನಾಗಿರೋ ಈ ಚಿತ್ರ ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲುವಾಡ ನರಸಿಂಹ ರೆಡ್ಡಿಯ ಕಥೆಯಾಧಾರಿತವಾಗಿದೆ. ಮೆಗಾ ಸ್ಟಾರ್ ರೆಡ್ಡಿಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಸುದೀಪ್ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಸೆಣಸಾಡುವ ಅವುಕು ಪ್ರಾಂತ್ಯದ ರಾಜನಾಗಿ ಕಾಣಿಸಿಕೊಳ್ಳಲಿದ್ದಾರೆ. ಇತಿಹಾಸದಲ್ಲಿಯೂ ಕೂಡಾ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಈ ಅವುಕು ರಾಜನ ಕ್ರಾಂತಿಯ ಬಗ್ಗೆ ಉಲ್ಲೇಖಗಳಿವೆ. ಈ ಮೂಲಕ ಸುದೀಪ್ ಐತಿಹಾಸಿಕ ಚಿತ್ರದಲ್ಲಿನ ಖದರು ತುಂಬಿರೋ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

ಕಿಚ್ಚ ಸುದೀಪ್ 2010ರಲ್ಲಿ ಬಿಡುಗಡೆಯಾದ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ರಣ್’ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಜೊತೆ ನಟಿಸಿದ್ದರು. ಈ ಸಿನಿಮಾದ ಬಿಡುಗಡೆಯಾಗಿ ಬರೋಬ್ಬರಿ 10 ವರ್ಷಗಳ ನಂತರ ಸುದೀಪ್ ಮತ್ತೊಮ್ಮೆ ಸೈರಾ ನರಸಿಂಹ ರೆಡ್ಡಿ ಚಿತ್ರದ ಮೂಲಕ ಅಮಿತಾಬ್ ಬಚ್ಚನ್ ಜೊತೆ ಸಿಲ್ವರ್ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *