Connect with us

Latest

ಪರೀಕ್ಷೆ ಮುಗಿಸಿ ಬರುತ್ತಿದ್ದ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದ ಕಾರು – ಡಿಕ್ಕಿಯ ರಭಸಕ್ಕೆ ಕಾಲುವೆಗೆ ಬಿದ್ದ ಬಾಲಕಿಯರು

Published

on

– ಸಿಸಿಟಿಯಲ್ಲಿ ದೃಶ್ಯ ಸೆರೆ
– ಬೈಕ್‌ನಲ್ಲಿ ಕುಳಿತಿದ್ದ ತಂದೆ, ಮಗಳಿಗೂ ಗುದ್ದಿದ ಕಾರು

ತಿರುವನಂತಪುರ: ಪರೀಕ್ಷೆ ಮುಗಿಸಿ ಶಾಲೆಯಿಂದ ತಮ್ಮ ಪಾಡಿಗೆ ರಸ್ತೆ ಬದಿಯಲ್ಲಿ ಬರುತ್ತಿದ್ದ ಮೂವರು ವಿದ್ಯಾರ್ಥಿನಿಯರಿಗೆ ಎದುರಿನಿಂದ ಬಂದ ಕಾರೊಂದು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಘಟನೆ ಕೇರಳದ ಅಲೆಪ್ಪಿಯ ಪೂಚಕ್ಕಲ್‍ನಲ್ಲಿ ನಡೆದಿದೆ.

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮೂವರು ವಿದ್ಯಾರ್ಥಿನಿಯರು ರಸ್ತೆ ಪಕ್ಕದಲ್ಲಿದ್ದ ಕಾಲುವೆಗೆ ಬಿದ್ದಿದ್ದಾರೆ. ಅಷ್ಟೇ ಅಲ್ಲದೆ ಇದೇ ರಸ್ತೆಯಲ್ಲಿ ಸೈಕಲ್ ಮೇಲೆ ಬರುತ್ತಿದ್ದ ವಿದ್ಯಾರ್ಥಿನಿಗೂ ಕಾರು ಡಿಕ್ಕಿ ಹೊಡೆದು ಹೋಗಿದೆ. ಹಾಗೆಯೇ ರಸ್ತೆ ಬದಿಯಲ್ಲಿ ಬೈಕ್‌ನಲ್ಲಿ ಕುಳಿತ್ತಿದ್ದ ತಂದೆ, ಮಗಳಿಗೂ ಕಾರು ಗುದ್ದಿದೆ. ಈ ಎಲ್ಲಾ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗಾಯಗೊಂಡ ಬಾಲಕಿಯರು ಪೂಚಕ್ಕಲ್‍ನ ಶ್ರೀಕಂಠೇಶ್ವರಂ ಶಾಲೆಯ ವಿದ್ಯಾರ್ಥಿನಿಯಾಗಿದ್ದಾರೆ. ಅನಕಾ, ಚಂದನ, ಸಾಹಿ, ಅರ್ಚನಾ ಗಾಯಗೊಂಡ ವಿದ್ಯಾರ್ಥಿನಿಯರು ಎಂದು ಗುರುತಿಸಲಾಗಿದೆ. ಹಾಗೆಯೇ ಗಾಯಗೊಂಡ ತಂದೆಯನ್ನು ಅನೀಶ್(36) ಹಾಗೂ ಮಗಳನ್ನು ವೇದು(4) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿಯರು ಪರೀಕ್ಷೆ ಮುಗಿಸಿಕೊಂಡು ಶಾಲೆಯಿಂದ ಮನೆ ಕಡೆಗೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಒಬ್ಬರ ನಂತರ ಒಬ್ಬರನ್ನು ಡಿಕ್ಕಿ ಹೊಡೆಯುತ್ತ ಸಾಗಿದ ಕಾರು ಕೊನೆಗೆ ಕಾಂಕ್ರೀಟ್ ಪೋಸ್ಟ್ ಗೆ ಡಿಕ್ಕಿ ಹೊಡೆದು ನಿಂತಿದೆ. ಈ ವೇಳೆ ಕಾರಿನಲ್ಲಿದ್ದ ಮನೋಜ್ ಹಾಗೂ ಅನಂದ್ ತೀವ್ರ ಗಾಯಗೊಂಡಿದ್ದಾರೆ. ಇತ್ತ ವಿದ್ಯಾರ್ಥಿನಿಯರ ಕಾಲು ಹಾಗೂ ಕೈ ಮುರಿದಿದ್ದು ಆಸ್ಪತ್ರೆಯಲ್ಲಿ ಅವರೆಲ್ಲಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಕಾರು ಡಿಕ್ಕಿ ಹೊಡೆದಿದ್ದ ತಂದೆ, ಮಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ಮಂಗಳವಾರ ಈ ಘಟನೆ ನಡೆದಿದೆ. ಕಾರನ್ನು ನಾವು ವಶಕ್ಕೆ ಪಡೆದಿದ್ದೇವೆ. ಗಾಯಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಆದರೆ ಈ ಘಟನೆ ನಡೆದ ವೇಳೆ ಚಾಲಕ ಮದ್ಯ ಸೇವಿಸಿದ್ದನು ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈಗಾಗಲೇ ಚಾಲಕನ ರಕ್ತದ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಿದ್ದೇವೆ. ವರದಿ ಬಂದ ಬಳಿಕ ಮಾಹಿತಿ ಸಿಗಲಿದೆ ಎಂದು ಹೇಳಿದರು.