Monday, 16th December 2019

ಕೇರಳದಲ್ಲಿ ಮುಂದುವರಿದ ಮಳೆಯ ರೌದ್ರನರ್ತನ: ಮೃತರ ಸಂಖ್ಯೆ 97ಕ್ಕೆ ಏರಿಕೆ

ತಿರುವನಂತಪುರ: ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಹುತೇಕ ಎಲ್ಲಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮಳೆಯಿಂದಾಗಿ ರಾಜ್ಯಾದ್ಯಂತ ಮೃತಪಟ್ಟವರ ಸಂಖ್ಯೆ 97ಕ್ಕೆ ಏರಿಕೆಯಾಗಿದೆ.

ಗುರುವಾರ ಸುರಿದ ಮಳೆಯಿಂದಾಗಿ ರಾಜ್ಯಾದ್ಯಂತ 30 ಮಂದಿ ಮೃತಪಟ್ಟಿದ್ದು, ಇಲ್ಲಿಯವರೆಗೂ ಸುಮಾರು 97 ಮಂದಿ ಮಹಾಮಳೆಗೆ ಆಹುತಿಯಾಗಿದ್ದಾರೆ. ವರದಿಗಳ ಪ್ರಕಾರ ಅಧಿಕೃತವಾಗಿ ಸಾವನ್ನಪ್ಪಿರುವವರ ಸಂಖ್ಯೆ 97 ಆಗಿದೆ. ಆದರೆ ಅನಧಿಕೃತ ಮಾಹಿತಿಗಳ ಪ್ರಕಾರ ಸಾವಿನ ಸಂಖ್ಯೆ ಇನ್ನೂ ಜಾಸ್ತಿಯಾಗಿರುವ ಶಂಕೆ ವ್ಯಕ್ತವಾಗಿದೆ.

ರಾಜ್ಯದಲ್ಲಿ ಕಂಡು ಕೇಳರಿಯದ ಮಳೆ ಸುರಿಯುತ್ತಿದ್ದು, ರಾಜ್ಯದ ಬಹುತೇಕ ನದಿಗಳು ತುಂಬಿದ ಪರಿಣಾಮ 26 ಜಲಾಶಯಗಳ ಪೈಕಿ 25 ಜಲಾಶಯಗಳಿಂದ ಭಾರೀ ಪ್ರಮಾಣ ನೀರನ್ನು ಹೊರಕ್ಕೆ ಬಿಡಲಾಗಿದೆ. ಸುರಿಯುತ್ತಿರುವ ಮಳೆಯಿಂದಾಗಿ ಕೊಚ್ಚಿ ಅಂತರಾಷ್ಟ್ರೀಯ ನಿಲ್ದಾಣವನ್ನು ಆಗಸ್ಟ್ 26ರವರೆಗೆ ಸಂಪೂರ್ಣ ಬಂದ್ ಮಾಡಲಾಗಿದೆ. ಅಲ್ಲದೇ ದಕ್ಷಿಣ ರೈಲ್ವೇ ಹಾಗೂ ಕೊಚ್ಚಿ ಮೆಟ್ರೋ ಸಂಚಾರವು ಸಹ ತಾತ್ಕಾಲಿಕವಾಗಿ ಬಂದ್ ಆಗಿದೆ. ಈ ಮಧ್ಯೆ ರಾಜ್ಯದಲ್ಲಿ ಓಣಂ ಹಾಗೂ ಪ್ರವಾಹದ ಕಾರಣದಿಂದ ಆಗಸ್ಟ್ 26ರವರೆಗೆ ಎಲ್ಲಾ ಶಾಲಾ-ಕಾಲೇಜುಗಳಿಗೆ ಸರ್ಕಾರ ರಜೆ ಘೋಷಣೆ ಮಾಡಿದೆ.

ಗುರುವಾರದಿಂದಲೂ ಸರಾಸರಿ ಮಳೆಗಿಂತ ಸುಮಾರು 10 ಪಟ್ಟು ಮಳೆಯ ಪ್ರಮಾಣ ಹೆಚ್ಚಾಗಿದ್ದು, ಶುಕ್ರವಾರವೂ ಸಹ ಭಾರೀ ಮಳೆ ಸುರಿಯುತ್ತದೆಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *