Connect with us

ಕೊರೊನಾ ಸಮರ್ಥವಾಗಿ ನಿಭಾಯಿಸಿದ್ದ ಶೈಲಜಾರಿಗೆ ಕೊಕ್- ಕೇರಳ ಸಿಎಂ ಹೊಸ ಕ್ಯಾಬಿನೆಟ್

ಕೊರೊನಾ ಸಮರ್ಥವಾಗಿ ನಿಭಾಯಿಸಿದ್ದ ಶೈಲಜಾರಿಗೆ ಕೊಕ್- ಕೇರಳ ಸಿಎಂ ಹೊಸ ಕ್ಯಾಬಿನೆಟ್

– ಕಳೆದ ಬಾರಿಯ ಎಲ್ಲ ಸಚಿವರು ಔಟ್, ಹೊಸಬರು, ಯುವಕರಿಗೆ ಆದ್ಯತೆ

ತಿರುವನಂತಪುರಂ: ಕೇರಳದಲ್ಲಿ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್(ಎಲ್‍ಡಿಎಫ್) ಸರ್ಕಾರ ಪೂರ್ಣ ಬಹುಮತದಿಂದ ಮತ್ತೆ ಅಧಿಕಾರಕ್ಕೆ ಬಂದಿದ್ದು, ಎರಡನೇ ಬಾರಿ ಪಿಣರಾಯಿ ವಿಜಯನ್ ಮುಖ್ಯಮಂತ್ರಿಯಾಗುತ್ತಿದ್ದಾರೆ. ಆದರೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಎರಡು ದಿನ ಇರುವಾಗಲೇ ಕ್ಯಾಬಿನೆಟ್ ಕುರಿತು ಅಚ್ಚರಿಯ ವಿಷಯ ಹೊರಗೆ ಬಿದ್ದಿದೆ. ಕೊರೊನಾ ಸಮರ್ಥವಾಗಿ ನಿರ್ವಹಿಸುವ ಮೂಲಕ ವಿಶ್ವಸಂಸ್ಥೆ ಸೇರಿದಂತೆ ವಿವಿಧ ಗಣ್ಯರ ಮೆಚ್ಚುಗೆಗೆ ಪಾತ್ರವಾಗಿದ್ದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರನ್ನು ಈ ಬಾರಿ ಕ್ಯಾಬಿನೆಟ್‍ನಿಂದ ಹೊರಗಿಡಲಾಗುತ್ತಿದೆ.

ಕಳೆದ ಬಾರಿಯ ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದಲ್ಲಿ ಆರೋಗ್ಯ ಸಚಿವೆಯಾಗಿದ್ದ ಕೆ.ಕೆ.ಶೈಲಜಾ ಅವರು 2021ರ ವಿಧಾನಸಭೆ ಚುನಾವಣೆಯಲ್ಲಿ ಬರೋಬ್ಬರಿ 60 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಅಲ್ಲದೆ ಕಳೆದ ಬಾರಿ ಆರೋಗ್ಯ ಸಚಿವೆಯಾಗಿದ್ದಾಗ ಕೊರೊನಾ ಸಮರ್ಥವಾಗಿ ನಿಭಾಯಿಸಿದ್ದರು. ಈ ಬಗ್ಗೆ ವಿಶ್ವಸಂಸ್ಥೆಯಾದಿಯಾಗಿ ಪ್ರಮುಖ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೂ ಈ ಬಾರಿಯ ಕ್ಯಾಬಿನೆಟ್‍ನಲ್ಲಿ ಇವರನ್ನು ಕೈ ಬಿಡಲಾಗಿದೆ.

ಈ ಕುರಿತು ಸಿಪಿಐ(ಎಂ) ರಾಜ್ಯ ಸಮಿತಿ ಹೇಳಿಕೆ ನೀಡಿದ್ದು, ಆರೋಗ್ಯ ಸಚಿವೆ ಶೈಲಜಾ ಸೇರಿ ಪ್ರಸ್ತುತ ಈಗಿರುವ ಎಲ್ಲ ಮಂತ್ರಿಗಳನ್ನು ಕೈ ಬಿಡಲಾಗಿದೆ. ಪಕ್ಷವು ಎಂ.ಬಿ.ರಾಜೇಶ್ ಅವರನ್ನು ಸ್ಪೀಕರ್ ಅಭ್ಯರ್ಥಿಯಾಗಿ ಘೋಷಿಸಿದೆ. ಶೈಲಜಾ ಅವರನ್ನು ಸರ್ಕಾರದ ಮುಖ್ಯ ಸಚೇತಕರಾಗಿ (ವಿಪ್) ಮಾಡಲಾಗಿದೆ. ಟಿ.ಪಿ.ರಾಮಕೃಷ್ಣನ್ ಅವರನ್ನು ಪಕ್ಷದ ಶಾಸಕಾಂಗ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ ಎಂದು ಪಕ್ಷ ಸ್ಪಷ್ಟಪಡಿಸಿದೆ.

ಪಿಣರಾಯಿ ವಿಜಯನ್ ಅವರನ್ನು ಸಿಎಂ ಹಾಗೂ ಶಾಸಕಾಂಗ ಪಕ್ಷದ ನಾಯಕರಾಗಿ, ಎಂ.ವಿ.ಗೋವಿಂದನ್, ಕೆ.ರಾಧಾಕೃಷ್ಣನ್, ಕೆ.ಎನ್.ಬಾಲಗೋಪಾಲ್, ಪಿ.ರಾಜೀವ್, ವಿ.ಎನ್.ವಾಸವನ್, ಸಾಜಿ ಚೆರಿಯನ್, ವಿ.ಶಿವಂಕುಟ್ಟಿ, ಮೊಹಮ್ಮದ್ ರಿಯಾಜ್, ಡಾ.ಆರ್.ಬಿಂದು, ವೀಣಾ ಜಾರ್ಜ್ ಹಾಗೂ ವಿ.ಅಬ್ದುಲ್ ರೆಹ್ಮಾನ್ ಅವರನ್ನು ಸಚಿವರಾಗಿ ಘೋಷಿಸಲಾಗಿದೆ ಎಂದು ಸಿಪಿಐ(ಎಂ) ತಿಳಿಸಿದೆ.

ಶೈಲಜಾ ಅವರನ್ನು ಕ್ಯಾಬಿನೆಟ್‍ನಿಂದ ಹೊರಗಿರಿಸಿದ್ದಕ್ಕೆ ಶಾಸಕ ಎ.ಎನ್.ಶಮ್ಸೀರ್ ಪ್ರತಿಕ್ರಿಯಿಸಿ, ಇದು ನಮ್ಮ ಪಕ್ಷದ ನಾಯಕರು ಕೈಗೊಂಡಿರುವ ಸಾಮೂಹಿಕ ನಿರ್ಧಾರವಾಗಿದೆ. ಒಬ್ಬ ವ್ಯಕ್ತಿಯನ್ನು ಪಕ್ಷದಿಂದ ಹೊರಗಿಟ್ಟು ನೋಡಬೇಡಿ, ಈ ಕುರಿತು ಪಕ್ಷದ ನಾಯಕರನ್ನೇ ಪ್ರಶ್ನಿಸಬೇಕು. ಹೊಸ ಕ್ಯಾಬಿನೆಟ್‍ನಲ್ಲಿ ಪಿಣರಾಯಿ ವಿಜಯನ್ ಹೊರತುಪಡಿಸಿ ಬೇರೆ ಯಾವ ಸಚಿವರೂ ಇಲ್ಲ. ಎಲ್ಲ ಹೊಸಬರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಇದು ಯುವಕರ ಹಾಗೂ ಹಿರಿಯರ ಮಿಶ್ರಣವಾಗಿದೆ ಎಂದು ವಿವರಿಸಿದ್ದಾರೆ.

ಎಲ್‍ಡಿಎಫ್ ವಕ್ತಾರ ಎ.ವಿಜಯರಾಘವನ್ ಈ ಕುರಿತು ಸೋಮವಾರವೇ ಮಾಹಿತಿ ನೀಡಿದ್ದು, ಮೇ 20ರಂದು ಪಿಣರಾಯಿ ವಿಜಯನ್ ಸೇರಿ 21 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರಲ್ಲಿ 12 ಜನ ಸಿಪಿಐ(ಎಂ), ನಾಲ್ವರು ಸಿಪಿಐ, ಕೇರಳ ಕಾಂಗ್ರೆಸ್(ಎಂ), ಜೆಡಿಎಸ್ ಹಾಗೂ ಎನ್‍ಸಿಪಿಯಿಂದ ತಲಾ ಒಬ್ಬರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಉಳಿದಂತೆ ನಾಲ್ಕು ಏಕ ಶಾಸಕರ ಪಕ್ಷಗಳು ಎರಡು ಕ್ಯಾಬಿನೆಟ್ ಹುದ್ದೆಗಳನ್ನು ಹಂಚಿಕೊಳ್ಳಲಿದ್ದು, ಪ್ರತಿ ಪಕ್ಷವು ತಲಾ 2.5 ವರ್ಷಗಳ ಅವಧಿಯನ್ನು ಪಡೆಯುತ್ತದೆ ಎಂದು ತಿಳಿಸಿದ್ದರು.