Crime
ತಂದೆ, ಚಿಕ್ಕಪ್ಪ ಸೇರಿ ಮಗಳ ಪತಿಯನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ್ರು!

– ಮಗಳ ಮದುವೆಗೆ ವಿರೋಧ
ತಿರುವನಂಪುರಂ: ಅಪ್ಪ ಮತ್ತು ಚಿಕ್ಕಪ್ಪ ಸೇರಿ ಮಗಳ ಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಘಟನೆ ಕೇರಳದ ಪಾಲಕ್ಕಾಡ್ನಲ್ಲಿ ನಡೆದಿದೆ.
ಮೃತನನ್ನು ಅನೀಶ್(27) ಎಂದು ಗುರುತಿಸಲಾಗಿದೆ. ಮೂರು ತಿಂಗಳ ಹಿಂದೆ ವಿವಾಹವಾಗಿದ್ದ ಯುವಕ ಪತ್ನಿಯ ಅಪ್ಪ ಮತ್ತು ಚಿಕ್ಕಪ್ಪನಿಂದ ಹಲ್ಲೆ ಗೊಳಗಾಗಿ ಸಾವನ್ನಪ್ಪಿದ್ದಾನೆ.
ಅನೀಶ್ನನ್ನು ಪತ್ನಿ ತಂದೆ ಹಾಗೂ ಚಿಕ್ಕಪ್ಪ ಸೇರಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಅನೀಶ್ನನ್ನು ಕೊಂದ ಆರೋಪದ ಮೇಲೆ, ಅನೀಶ್ನ ಪತ್ನಿಯ ತಂದೆ ಪ್ರಭುಕುಮಾರ್ ಮತ್ತು ಚಿಕ್ಕಪ್ಪ ಸುರೇಶ್ನನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನೀಶ್ ಮದುವೆಯಾಗಿರುವ ಹುಡುಗಿ ಶ್ರೀಮಂತ ಕುಟುಂಬಕ್ಕೆ ಸೇರಿದವಳು. ಇಬ್ಬರೂ ಮೂರು ತಿಂಗಳ ಹಿಂದೆ ವಿವಾಹವಾಗಿದ್ದರು. ಆದರೆ ಹುಡುಗಿಯ ಪೋಷಕರು ಅವಳ ಮದುವೆಯನ್ನು ನಿರಂತರವಾಗಿ ವಿರೋಧಿಸುತ್ತಿದ್ದರು. ಈ ಕಾರಣದಿಂದಾಗಿ ಕಳೆದ ಹಲವು ದಿನಗಳಿಂದ ವಿವಾದ ನಡೆಯುತ್ತಿತ್ತು. ನಂತರ ಪೊಲೀಸರು ಬಂದು ಹುಡುಗಿಯ ಪೋಷಕರನ್ನು ಒಪ್ಪಿಸಿದ್ದರು. ಆದರೆ ಒಂದು ದಿನ ಅನೀಶ್ ಮನೆಯ ಹಿಂದೆ ಒಬ್ಬನೇ ಇದ್ದ ವೇಳೆ ಬಂದ ಪತ್ನಿಯ ಅಪ್ಪ ಮತ್ತು ಚಿಕ್ಕಪ್ಪ ಅಳಿಯನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.
ಘಟನೆಯಿಂದ ಗಾಯಗೊಂಡಿದ್ದ ಅನೀಶ್ನನ್ನು ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅನೀಶ್ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಗಾಗಲೇ ಅನೀಶ್ ಪತ್ನಿಯ ಚಿಕ್ಕಪ್ಪ ಮತ್ತು ಅಪ್ಪನನ್ನು ಬಂಧಿಸಿದ್ದಾರೆ. ಈ ಪ್ರಕರಣದ ಕುರಿತಾಗಿ ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.
