ಇಂದಿನಿಂದ ಪ್ರವಾಸಿಗರಿಗೆ ಜಮ್ಮು ಕಾಶ್ಮೀರ ಮುಕ್ತ

-2 ತಿಂಗಳ ಬಳಿಕ ನಿಷೇಧ ತೆರವು

ನವದೆಹಲಿ: ಇಂದಿನಿಂದ ಪ್ರವಾಸಿಗರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಬಹುದು. ಎರಡು ತಿಂಗಳ ಬಳಿಕ ಪ್ರವಾಸಿಗರಿಗೆ ಹೇರಿದ್ದ ನಿರ್ಬಂಧವನ್ನು ಗುರುವಾರ ತೆರವುಗೊಳಿಸಲಾಗಿದೆ.

370ನೇ ವಿಧಿಯನ್ನು ರದ್ದು ಪಡಿಸಿದ ಬಳಿಕ ಭದ್ರತಾ ದೃಷ್ಟಿಯಿಂದ ಕಣಿವೆ ರಾಜ್ಯದಲ್ಲಿದ್ದ ಪ್ರವಾಸಿಗರನ್ನು ಹೊರ ಕಳಿಸಲಾಗಿತ್ತು. ಹೀಗಾಗಿ ಕಳೆದ ಎರಡು ತಿಂಗಳುಗಳಿಂದ ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರಿಗೆ ನಿಷೇಧ ಹೇರಲಾಗಿತ್ತು. ಆದರೆ ಈ ನಿಷೇಧವನ್ನು ಸರ್ಕಾರ ತೆರವುಗೊಳಿಸಿದ್ದು, ಇಂದಿನಿಂದ ಕಾಶ್ಮೀರ ಪ್ರವಾಸಿಗರಿಗೆ ಮುಕ್ತವಾಗಿದೆ.

 

ನಿಷೇಧಾಜ್ಞೆಯಿಂದ ಕಳೆದ ಎರಡು ತಿಂಗಳಿನಿಂದ ಕಾಶ್ಮೀರ ಪ್ರವಾಸಿಗರಿಲ್ಲದೆ ಬಿಕೋ ಎನಿಸುತ್ತಿತ್ತು. ಮಂಗಳವಾರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಕಣಿವೆ ರಾಜ್ಯದಲ್ಲಿ ಪ್ರವಾಸಿಗರಿಗೆ ಹೇರಿದ್ದ ನಿಷೇಧವನ್ನು ಹಿಂಪಡೆಯುವುದಾಗಿ ತಿಳಿಸಿದ್ದರು. ಸೋಮವಾರ ಸತ್ಯಪಾಲ್ ಮಲಿಕ್ ಅವರು ಜಮ್ಮು ಕಾಶ್ಮೀರ ರಾಜ್ಯದ ಭದ್ರತಾ ಸಲಹೆಗಾರ ಹಾಗೂ ಮುಖ್ಯ ಕಾರ್ಯದರ್ಶಿಗಳ ಜೊತೆ ಕಣಿವೆ ರಾಜ್ಯದಲ್ಲಿ ಪ್ರವಾಸಿಗರ ರಕ್ಷಣೆ ಕುರಿತು ಚರ್ಚೆ ನಡೆಸಿದ್ದರು.

2019ರ ಮೊದಲ ಏಳು ತಿಂಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಜುಲೈ ತಿಂಗಳಲ್ಲಿ ಸುಮಾರು 3,40,000 ಯಾತ್ರಿಕರು ಆಗಮಿಸಿದ್ದರು. ಆದರೆ ಆಗಸ್ಟ್ 5ರ ಬಳಿಕ ಕೇವಲ 150 ವಿದೇಶಿ ಪ್ರಯಾಣಿಕರು ಮಾತ್ರ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಅಮರನಾಥ ಯಾತ್ರೆಗೆ ಬರುವ ಯಾತ್ರಿಕರ ಮೇಳೆ ಉಗ್ರರು ದಾಳಿ ಮಾಡಲು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಹೀಗಾಗಿ ಯಾತ್ರಿಕರ ಭದ್ರತಾ ದೃಷ್ಟಿಯಿಂದ ಕಳೆದ ಆಗಸ್ಟ್ 2ರಂದು ಅಮರನಾಥ ಯಾತ್ರಿಕರು ಮತ್ತು ಪ್ರವಾಸಿಗರು ಕಾಶ್ಮೀರವನ್ನು ಕೂಡಲೇ ತೊರೆದು ಹೋಗಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿ, ಆಗಸ್ಟ್ 5ರಂದು ಜಮ್ಮುಕಾಶ್ಮೀರವನ್ನು ರಾಜ್ಯವನ್ನಾಗಿ ಘೋಷಿಸಿ ಲಡಾಖ್ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು. ಈ ನಿರ್ಧಾರ ಕೈಗೊಳ್ಳುವ ಮೂರು ದಿನಗಳ ಹಿಂದೆಯೇ ಕಣಿವೆ ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರಿಗೆ ನಿಷೇಧ ಹೇರಲಾಗಿತ್ತು.

Leave a Reply

Your email address will not be published. Required fields are marked *