Connect with us

Districts

ಖಾಸಗಿ ಆಸ್ಪತ್ರೆಯಿಂದ ಪಾಸಿಟಿವ್, ನೆಗೆಟಿವ್ ಕಳ್ಳಾಟ – ಎರಡೆರಡು ರಿಪೋರ್ಟ್ ನೋಡಿ ವ್ಯಕ್ತಿ ಆತಂಕ

Published

on

ಕಾರವಾರ: ಕೊರೊನಾ ಹೆಮ್ಮಾರಿ ಉಳ್ಳವರು-ಇಲ್ಲದವರು ಹೀಗೆ ಯಾರನ್ನೂ ಬಿಡದೇ ಹಿಂಡಿ ಹಿಪ್ಪೆ ಮಾಡ್ತಿದೆ. ಸ್ವತಃ ಚಿಕಿತ್ಸೆ ನೀಡುವ ವೈದ್ಯರು ಕೂಡ ಚೀನಿ ವೈರಸ್ ಇಕ್ಕಳದಲ್ಲಿ ಸಿಲುಕಿ ನಲುಗ್ತಿದ್ದಾರೆ. ಹೀಗಿದ್ದರೂ ಅವರೇ ದೋಖಾ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಖಾಸಗಿ ಆಸ್ಪತ್ರೆಯೊಂದು ಕೊರೊನಾ ಟೆಸ್ಟ್‍ಗೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಆಂಟಿ ಬಾಡಿ ಸ್ಕ್ರೀನಿಂಗ್ ಟೆಸ್ಟ್ ಮಾಡಿದೆ. ಅಸಲಿಗೆ ಈತನಿಗೆ ಪಾಸಿಟಿವ್ ಇರಲಿಲ್ಲ, ಆದರೆ ಪಾಸಿಟಿವ್ ವರದಿ ನೀಡಿ ಆಸ್ಪತ್ರೆಗೆ ದಾಖಲಾಗುವಂತೆ ಹೇಳಿ ಹಣ ಪೀಕಿದೆ.

ಸಿದ್ದಾಪುರ ತಾಲೂಕಿನ ತ್ಯಾಗಳಿ ಶೀಗೇಹಳ್ಳಿ ನಿವಾಸಿ ರಾಘವೇಂದ್ರ ಸದಾನಂದ ಹೆಗಡೆ ಎಂಬವರಿಗೆ ಅಕ್ಟೋಬರ್ 1ರಂದು ಜ್ವರ ಹಾಗೂ ಕಫದಿಂದಾಗಿ ಆರೋಗ್ಯ ಏರುಪೇರಾಗಿತ್ತು. ಹಿಗಾಗಿ ತಮ್ಮ ಮಗನೊಂದಿಗೆ ಶಿರಸಿಯ ಮಹಾಲಕ್ಷ್ಮಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವೈದ್ಯ ರಮೇಶ್ ಹೆಗಡೆ ಬಳಿ ತೋರಿಸಿದ್ರು. ಕಫ, ಜ್ವರ ಹೆಚ್ಚಾದ್ದರಿಂದ ಬಾಡಿ ಸ್ಕ್ಯಾನಿಂಗ್ ಮಾಡಿದ್ದು ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಿದ್ದರು. ಆದರೆ ಇದೇ ಆಸ್ಪತ್ರೆ ಕೋವಿಡ್ ಚಿಕಿತ್ಸಾ ಕೇಂದ್ರವಾಗಿದ್ದರಿಂದ ಇದೇ ವೈದ್ಯರ ಶಿಫಾರಸ್ಸಿನ ಮೇಲೆ ಶಿರಸಿಯ ಮಾರಿಕಾಂಬಾ ಆಸ್ಪತ್ರೆಗೆ ದಾಖಲಿಸಿದ್ದು, ಈ ವೇಳೆ ಅವರ ರಕ್ತ ಮಾದರಿ ಹಾಗೂ ಸ್ಕ್ಯಾನಿಂಗ್ ಆಧಾರದಲ್ಲಿ ಕೊರೊನಾ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ.

ಈ ವೇಳೆ ಬ್ಲಡ್ ಟೆಸ್ಟ್ ಗಾಗಿ 4,100ರೂ ಶುಲ್ಕ ವಿಧಿಸಿದ್ದಾರೆ. ಇದರ ಜೊತೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಬೇಕು. 5-8 ದಿನಗಳ ಕಾಲ ಅಬ್ಸರ್ವೇಶನ್‍ನಲ್ಲಿರಬೇಕು. ಇದಕ್ಕೆಲ್ಲಾ ದಿನಕ್ಕೆ 25,000 ರೂ. ಆಗುತ್ತೆ. ಜೊತೆಗೆ ಜಿಎಸ್‍ಟಿ ಕಟ್ಟಿ. ಊಟ, ತಿಂಡಿ ಎಲ್ಲಾನೂ ಆಸ್ಪತ್ರೆ ವತಿಯಿಂದಲೇ ನೀಡಲಾಗುವುದು ಎಂದು ಹೇಳಿದ್ದಾರೆ. ಆದರೆ ರಾಘವೇಂದ್ರ ಹೆಗಡೆ ರವರ ಮಗನಿಗೆ ಅನುಮಾನ ಬಂದು ಮರುದಿನ ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ತಂದೆಯವರಿಗೆ ಗಂಟಲು ದ್ರವ ತೆಗೆಸಿ ಕೊರೊನಾ ಟೆಸ್ಟ್ ಮಾಡಿಸಿದ್ದು ಅಕ್ಟೋಬರ್ 5ರಂದು ನೆಗಟೀವ್ ವರದಿ ಬಂದಿದೆ.

ಸರ್ಕಾರ  ರ‍್ಯಾಪಿಡ್‌ ಟೆಸ್ಟ್ ಗೆ 1500ರೂ. ಮಾಡಿದ್ದರೂ, ಶಿರಸಿಯ ಮಾರಿಕಾಂಬ ಆಸ್ಪತ್ರೆಯವರು ಮಾತ್ರ 4,100ರೂ. ಶುಲ್ಕ ವಸೂಲಿ ಮಾಡುತಿದ್ದಾರೆ. ಜೊತೆಗೆ ಕಫ, ಜ್ವರ ಎಂದು ಬಂದವರಿಗೆ ಕೊರೊನಾ ಭಯ ಹುಟ್ಟಿಸಿ ದಿನ ಒಂದಕ್ಕೆ 25 ಸಾವಿರ ದುಬಾರಿ ಶುಲ್ಕ ವಸೂಲಿಗೆ ಇಳಿದಿದ್ದಾರೆ. ಕೊರೊನಾ ಇಲ್ಲದಿದ್ದವರಿಗೂ ಆಂಟಿ ಬಾಡಿ ಸ್ಕ್ರೀನಿಂಗ್ ಟೆಸ್ಟ್, ರಕ್ತ ಮಾದರಿ ಪರೀಕ್ಷೆ ಎಂದು ಸಾವಿರಾರು ರುಪಾಯಿ ಪೀಕುತ್ತಿದ್ದು ಇದಕ್ಕೆ ಹಲವು ಖಾಸಗಿ ಆಸ್ಪತ್ರೆಯವರು ಜೊತೆಯಾಗಿದ್ದಾರೆ. ಸದ್ಯ ತಮಗಾದ ಮೋಸವನ್ನ ರಾಘವೇಂದ್ರ ಅವರ ಮಗ ದಾಖಲೆ ಸಮೇತವಾಗಿ ತೆರೆದಿಟ್ಟಿದ್ದಾರೆ.

ಕೊರೊನಾ ಇದ್ದವರಿಗೆ ಕೇವಲ ಒಂದು ದಿನದಲ್ಲಿ ಪಾಸಿಟಿವ್ ನಂತರ ನೆಗಟಿವ್ ಬರಲು ಸಾಧ್ಯವೇ ಇಲ್ಲ. ಒಟ್ಟಿನಲ್ಲಿ ಕೊರೊನಾ ಭಯವನ್ನೇ ಬಂಡವಾಳವಾಗಿಸಿಕೊಂಡು ಖಾಸಗಿ ಆಸ್ಪತ್ರೆಯವರು ಹೇಗೆ ಲೂಟಿ ಮಾಡ್ತಿದ್ದಾರೆ. ದಂಡ ಅಂತೆಲ್ಲಾ ವಿಧಿಸೋ ಮೊದಲು ಇಂತ ಅಕ್ರಮಗಳಿಗೆ ಮೊದಲು ಬ್ರೇಕ್ ಆಗ್ಬೇಕಿದೆ.

Click to comment

Leave a Reply

Your email address will not be published. Required fields are marked *