Connect with us

Bollywood

ಮಣಿಕರ್ಣಿಕಾ ವಿರುದ್ಧ ಪ್ರತಿಭಟನೆಗಿಳಿದ ಕರ್ಣಿ ಸೇನಾ!

Published

on

ಮುಂಬೈ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅಭಿನಯದ ಐತಿಹಾಸಿಕ ಕಥನಾಕವುಳ್ಳ ‘ಮಣಿಕರ್ಣಿಕಾ’ ಸಿನಿಮಾ ಜನವರಿ 25ರಂದು ಬಿಡುಗಡೆಯಾಗಲು ಸಿದ್ಧಗೊಂಡಿದೆ. ಝಾನ್ಸಿ ರಾಣಿ ಲಕ್ಷ್ಮಿಬಾಯಿ ಅವರ ಕಥೆಯನ್ನು ಸಿನಿಮಾ ಒಳಗೊಂಡಿದೆ. ಸದ್ಯ ಚಿತ್ರದ ಬಿಡುಗಡೆಯನ್ನು ವಿರೋಧಿಸಿ ಕರ್ಣಿ ಸೇನಾ ಪ್ರತಿಭಟನೆಗೆ ಇಳಿದಿದೆ. ಈ ಹಿಂದೆ ಕರ್ಣಿ ಸೇನಾ ದೀಪಿಕಾ ಪಡುಕೋಣೆ ಅಭಿನಯದ ‘ಪದ್ಮಾವತ್’ ಸಿನಿಮಾ ವಿರೋಧಿಸಿ ದೇಶಾದ್ಯಂತ ದೊಡ್ಡ ಪ್ರತಿಭಟನೆ ನಡೆಸಿತ್ತು.

ವಿರೋಧ ಯಾಕೆ?
ಚಿತ್ರದಲ್ಲಿ ರಾಣಿ ಲಕ್ಷ್ಮಿಬಾಯಿ ಮತ್ತು ಬ್ರಿಟಿಷ್ ಅಧಿಕಾರಿ ನಡುವೆ ಪ್ರೇಮ ಕಥೆಯನ್ನು ತೋರಿಸಲಾಗಿದೆ. ಚಿತ್ರದ ಕೆಲವು ಹಾಡುಗಳಲ್ಲಿ ಕಂಗಾನರನ್ನು ಸೆಕ್ಸಿಯಾಗಿ ತೋರಿಸಲಾಗಿದೆ. ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದ್ದರಿಂದ ಮುಂದಿನ ದಿನಗಳಲ್ಲಿ ಸೇನೆಯ ಸದಸ್ಯರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಕರ್ಣಿ ಸೇನಾದ ರಾಷ್ಟ್ರೀಯ ನಾಯಕ ಸುಖದೇವ್ ಸಿಂಗ್ ಶೇಖಾವತ್, ಮಣಿಕರ್ಣಿಕಾ ಚಿತ್ರದಲ್ಲಿ ಇತಿಹಾಸವನ್ನು ತಿರುಚಿ ತಮಗೆ ಅಗತ್ಯ ಇರುವಂತೆ ಬದಲಾಯಿಸಿಕೊಂಡಿದ್ದಾರೆ. ಚಿತ್ರತಂಡ ಭಾರತದ ಇತಿಹಾಸವನ್ನು ಬದಲಾವಣೆ ಮಾಡಲು ಪ್ರಯತ್ನ ಮಾಡುತ್ತಿದೆ. ಆದ್ರೆ ಚಿತ್ರತಂಡದ ಪ್ಲಾನ್ ಯಶಸ್ವಿಯಾಗಲು ನಾವು ಅವಕಾಶ ನೀಡಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

2018ರಲ್ಲಿ ನಾವು ಪದ್ಮಾವತ್ ಸಿನಿಮಾಗೆ ವಿರೋಧ ಮಾಡಿದ್ದು ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಮಣಿಕರ್ಣಿಕಾ ಸಿನಿಮಾ ವಿಷಯ ತಿಳಿದು ಕಳೆದ ಫೆಬ್ರವರಿಯಲ್ಲಿ ಚಿತ್ರತಂಡದ ಜೊತೆ ನಾವು ಮಾತನಾಡಿದ್ದರೂ ನೈಜ ಇತಿಹಾಸವನ್ನು ತೋರಿಸದೆ ಇಷ್ಟ ಬಂದಂತೆ ಬದಲಾವಣೆ ಮಾಡಲು ಮುಂದಾಗುತ್ತಿದ್ದಾರೆ. ಸಿನಿಮ ಬಿಡುಗಡೆ ಮುನ್ನ ಚಿತ್ರವನ್ನು ನಮಗೆ ತೋರಿಸಬೇಕು, ಇಲ್ಲವಾದಲ್ಲಿ ಪದ್ಮಾವತ್ ಸಿನಿಮಾ ವಿರುದ್ಧ ನಡೆಸಿದ ಹೋರಾಟವನ್ನು ಇಂದು ಮಾಡಬೇಕಾಗುತ್ತದೆ ಎಂದು ಸುಖದೇವ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

ಸೆನ್ಸಾರ್ ಕ್ಲೀನ್ ಚಿಟ್: ಈಗಾಗಲೇ ಸೆನ್ಸಾರ್ ಬೋರ್ಡ್ ಮಣಿಕರ್ಣಿಕಾ ಚಿತ್ರ ಬಿಡುಗಡೆ ಅನುಮತಿ ನೀಡಿದೆ. ಸೆನ್ಸಾರ್ ಬೋರ್ಡ್ ನೀಡಿರುವ ಅನುಮತಿ ಇಲ್ಲಿ ಅನ್ವಯವಾಗಲ್ಲ. ಚಿತ್ರದಲ್ಲಿ ರಾಣಿ ಮತ್ತು ಬ್ರಿಟಿಷ್ ಅಧಿಕಾರಿ ನಡುವೆ ಪ್ರೇಮ ಕಹಾನಿ ತೋರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರವನ್ನ ನಮಗೆ ತೋರಿಸಬೇಕಿದೆ. ಇಲ್ಲವಾದಲ್ಲಿ ಸಿನಿಮಾ ಬಿಡುಗಡೆಯಾಗುವ ಚಿತ್ರಮಂದಿರಗಳ ಮೇಲೆ ದಾಳಿ ಮಾಡಲಾಗುವುದು ಎಂದು ಗುಡುಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv