ಮಾಜಿ, ಹಾಲಿ, ಭಾವಿ ಮುಖ್ಯಮಂತ್ರಿಗಳ ಮಧ್ಯೆ ಒಡೆದು ಹೋಗುತ್ತಿರುವೆ: ಸ್ಪೀಕರ್

– ಸದನದಲ್ಲಿ ನಗೆ ಚಟಾಕೆ ಹಾರಿಸಿದ ರಮೇಶ್ ಕುಮಾರ್

ಬೆಂಗಳೂರು: ಮಾಜಿ, ಹಾಲಿ ಹಾಗೂ ಭಾವಿ ಮುಖ್ಯಮಂತ್ರಿಗಳ ಮಧ್ಯೆ ನಾನು ಒಡೆದು ಹೋಗುತ್ತಿರುವೆ ಎಂದು ಸ್ಪೀಕರ್ ರಮೇಶ್ ಕುಮಾರ್ ಸದನದಲ್ಲಿ ನಗೆ ಹರಿಸಿದ್ದಾರೆ.

ವಿಶ್ವಾಸಮತಯಾಚನೆ ಕಾವು ಸದನದಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಸ್ಪೀಕರ್ ರಮೇಶ್ ಕುಮಾರ್ ಅವರು ಸದನದ ಸದಸ್ಯರನ್ನು ಕೆಲವು ಸಂದರ್ಭದಲ್ಲಿ ನಗಿಸಿ, ಕಾಲೆಳೆದು ಕಾನೂನು ಜ್ಞಾನವನ್ನು ನೀಡುತ್ತಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿಶ್ವಾಸ ಮತಯಾಚನೆಯ ಕುರಿತ ಚರ್ಚೆಯ ವೇಳೆ ನಾನು ವಿಪಕ್ಷ ನಾಯಕ ಎಂದು ಬಾಯಿತಪ್ಪಿ ಹೇಳಿದರು. ಆಗ ಬಿಜೆಪಿ ಶಾಸಕರು ಮೇಜು ಕುಟ್ಟಿ ಖುಷಿ ವ್ಯಕ್ತಪಡಿಸಿದರು. ಸ್ವಲ್ಪ ಗುಡುಗಿದ ಮಾಜಿ ಸಿಎಂ, ನಾನು ನಾಲ್ಕು ವರ್ಷ ಲೀಡರ್ ಆಫ್ ಆಪೋಸಿಷನ್ ಆಗಿದ್ದೆ. ಏನೋ ಈಗ ಬಾಯಿ ತಪ್ಪಿ ಬಂದು ಮಾತನಾಡಿದೆ. ಈಗ ಏನ್ ಖುಷಿ ಆಯಿತೋ ಇವರಿಗೆ, ಸಿಎಂ ಹೇಳಿದಂತೆ ಏನ್ ಆತುರ ಇದೆ ಎಂದು ಹೇಳಿ ತಿರುಗೇಟು ನೀಡಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಸ್ಪೀಕರ್ ರಮೇಶ್ ಕುಮಾರ್, ಸ್ವಲ್ಪ ಖುಷಿಯಾಗಿರಲು ಅವರನ್ನು ಬಿಡಿ ಎಂದು ಬಿಜೆಪಿ ಶಾಸಕರಿಗೆ ಮನವಿ ಮಾಡಿ, ಸಿದ್ದರಾಮಯ್ಯ ಅವರ ಕಾಲೆಳೆದರು. ಹೀಗಾಗಿ ವಿಪಕ್ಷ ನಾಯಕರಲ್ಲಿ ನಗೆ ಜೋರಾಗಿ ಕೇಳಿ ಬಂದಿತು. ಆಗ ಮಾಜಿ ಸಿಎಂ, ಪಾಪಾ ಅವರು ಬಹಳ ಸಂತೋಷದಲ್ಲಿ ತೇಲಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕರಿಗೆ ಟಾಂಗ್ ಕೊಟ್ಟರು.

ವಿಶ್ವಾಸ ಮತಯಾಚನೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದನ್ನು ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಪ್ರಶ್ನಿಸಿದರು. ಸ್ಪೀಕರ್ ಅವರು ಪ್ರತಿಕ್ರಿಯೆ ನೀಡಿ ಸಮಾಧಾನ ಪಡಿಸಿದರು. ಈ ವೇಳೆ ಸಿದ್ದರಾಮಯ್ಯ ಅವರು ಮಾತು ಮುಂದುವರಿಸಿ, ಪಾಪ ಅವರು ಮಾಜಿ ಮುಖ್ಯಮಂತ್ರಿಗಳು ಹೇಳುತ್ತಾರೆ ಎಂದು ಕಾಲೆಳೆದರು. ಆಗ ಸ್ಪೀಕರ್ ಅವರು, ನಮ್ಮ ಸಮಸ್ಯೆಯೇ ಅದು. ಮಾಜಿ ಮುಖ್ಯಮಂತ್ರಿಗಳು, ಹಾಲಿ ಮುಖ್ಯಮಂತ್ರಿಗಳು ಹಾಗೂ ಭಾವಿ ಮುಖ್ಯಮಂತ್ರಿಗಳ ಮಧ್ಯೆ ಸಿಕ್ಕು ನಾನು ಒಡೆದು ಹೋಗುತ್ತಿರುವೆ ಎಂದು ಸದನದಲ್ಲಿ ನಗೆ ಹರಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭಾಷಣ ಮುಂದುವರಿಸಿ, ನೀವು ಎರಡನೇ ಬಾರಿ ಸ್ಪೀಕರ್ ಆಗಿರುವುದರಿಂದ ಇದನ್ನು ತಡೆದುಕೊಳ್ಳುವ ಶಕ್ತಿ ನಿಮಗೆ ಇದೆ ಅಂತ ನಾನು ಭಾವಿಸಿರುವೆ ಎಂದು ರಮೇಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದರು.

Leave a Reply

Your email address will not be published. Required fields are marked *