Connect with us

Districts

ಸಾರಿಗೆ ಸಿಬ್ಬಂದಿ ಮುಷ್ಕರ – ಉಡುಪಿಯಲ್ಲಿ ಮ್ಯಾನೇಜರ್, ಮೆಕ್ಯಾನಿಕ್ ಮಧ್ಯೆ ಜಟಾಪಟಿ

Published

on

– ನನ್ನನ್ನು ಮ್ಯಾನೇಜರ್ ಕೂಡಿ ಹಾಕಿ ಕೆಲಸ ಮಾಡಿಸ್ತಿದ್ದಾರೆ – ರೆಡ್ಡಿ
– ಮೆಕ್ಯಾನಿಕ್ ರೆಡ್ಡಿ ಪ್ರಚಾರ ಪಡೆಯಲು ಗಿಮಿಕ್ ಮಾಡ್ತಿದ್ದಾನೆ – ಶೆಟ್ಟಿ

ಉಡುಪಿ: ಸರಕಾರಿ ಬಸ್ ಸಿಬ್ಬಂದಿ ಮುಷ್ಕರ ರಾಜ್ಯಾದ್ಯಂತ ಯಶಸ್ವಿಯಾಗಿದೆ. ಕೆಲವೆಡೆ ಸಿಬ್ಬಂದಿ ಹಾಗೂ ಡಿಪೋ ಮ್ಯಾನೇಜರ್ ನಡುವೆ ಜಟಾಪಟಿ ನಡೆದಿದೆ. ನನ್ನನ್ನು ಕೂಡಿಹಾಕಿ ಕೆಲಸ ಮಾಡಿಸುತ್ತಿದ್ದಾರೆ ಎಂದು ಉಡುಪಿಯ ಮೆಕ್ಯಾನಿಕ್ ಆರೋಪಿಸಿದ್ರೆ, ಇದು ಶುದ್ಧ ಸುಳ್ಳು, ಪ್ರಪ್ರಚಾರಕ್ಕಾಗಿ ಮಾಡಿದ ಗಿಮಿಕ್ ಅಂತ ಮ್ಯಾನೇಜರ್ ವೀಡಿಯೋ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯಾದ್ಯಂತ ಸರಕಾರಿ ಬಸ್ ಗಳು ರಸ್ತೆಗಿಳಿಯದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಸರಕಾರ ಮತ್ತು ಯೂನಿಯನ್ ಜೊತೆ ಒಂದೆಡೆ ಜಟಾಪಟಿ ನಡೆಯುತ್ತಿದ್ದರೆ, ಉಡುಪಿ ಡಿಪೋದಲ್ಲಿ ಮೆಕ್ಯಾನಿಕ್ ಶ್ರೀಕಾಂತ್ ಕೊಟ್ಟ ಹೇಳಿಕೆ ಭಾರಿ ಚರ್ಚೆ ಮತ್ತು ವಿವಾದ ಸೃಷ್ಟಿ ಮಾಡಿತು.

ಶ್ರೀಕಾಂತ್ ರೆಡ್ಡಿ ಹೇಳಿದ್ದೇನು?
ಕಳೆದ ರಾತ್ರಿಯಿಂದ ನನ್ನನ್ನ ಡಿಪೋದಲ್ಲಿ ಮ್ಯಾನೇಜರ್ ಕೂಡಿ ಹಾಕಿದ್ದಾರೆ. ನಾನು ಪ್ರತಿಭಟನೆ ಮಾಡುತ್ತೇನೆ ಎಂದರೂ ಬಿಡುತ್ತಿಲ್ಲ. ಪ್ರತಿಭಟನಾರ್ಥವಾಗಿ ನಾನು ಬೆಳಗ್ಗೆನಿಂದ ನಿರಂತರ ಕೆಲಸ ಮಾಡುತ್ತಿದ್ದೇನೆ ಎಂದು ಉಡುಪಿಯ ಕೆಎಸ್‍ಆರ್‍ಟಿಸಿ ಸಿಬ್ಬಂದಿ ಶ್ರೀಕಾಂತ ರೆಡ್ಡಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಆಕ್ರೋಶದ ಕಣ್ಣೀರು ಹಾಕಿದ್ದಾರೆ.

ನಿನ್ನ ಕೇಸು ಕ್ಲಿಯರ್ ಆಗಬೇಕಾದರೆ ನೀನು ಕೆಲಸ ಮಾಡಲೇಬೇಕು ಎಂದು ಡಿಪೋ ಮ್ಯಾನೇಜರ್ ಬೆದರಿಕೆ ಹಾಕಿದ್ದಾರೆ. ನಾನು ಬಡವ ಅದಕ್ಕೆ ಕೆಲಸ ಮಾಡುತ್ತಿದ್ದೇನೆ. ನನ್ನತ್ರ ದುಡ್ಡಿದ್ರೆ ನಾನು ಎಂಎಲ್‍ಎ ಆಗುತ್ತಿದ್ದೆ. ನಾವು ಅರ್ಚಕರಗಿಂತ ಕೀಳಾಗಿ ಬಿಟ್ಟೆವಾ? ಕೆಎಸ್‍ಆರ್‍ಟಿಸಿ ಅನ್ನ ತಿನ್ನುವುದರಿಂದ ನಿಯತ್ತಾಗಿ ಕೆಲಸ ಮಾಡುತ್ತಿದ್ದೇನೆ. ನಮ್ಮ ನಿಯತ್ತಿನ ಕೆಲಸಕ್ಕೆ ಸೂಕ್ತ ಸಂಬಳ ಕೊಡಿ. ನಾನು ಇಲ್ಲೇ ನೇಣು ಹಾಕಿಕೊಳ್ಳುತ್ತೇನೆ. ನಿಮ್ಮ ತರ ಎಸಿ ಕಾರಿನಲ್ಲಿ ಕೂತು ಎಸಿ ಆಫೀಸಲ್ಲಿ ಕೂತು ಕೆಲಸ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬ್ಲಾಕ್ ಮಾಡಿ ಡ್ಯೂಟಿ:
ಸ್ಟ್ರೈಕ್ ದಿನವೂ ನಾನು ಯಾಕೆ ಡ್ಯೂಟಿ ಮಾಡುತ್ತಿದ್ದೇನೆ ಎಂದು ಯಾರೂ ಪ್ರಶ್ನಿಸುತ್ತಿಲ್ಲ ಯಾಕೆ? ಮ್ಯಾನೇಜರ್ ನನ್ನನ್ನು ಬೆಳಗ್ಗೆ ಲಾಕ್ ಮಾಡಿ ಹೊರಗೆ ಹೋಗದಂತೆ ತಡೆದಿದ್ದಾರೆ. ನಾನು ಅನಾರೋಗ್ಯ ಇದ್ದಾಗ ರಜೆ ಮಾಡಿದ್ದೆ. ಆ ಕೇಸ್ ಕ್ಲಿಯರ್ ಆಗೋವರೆಗೆ ಡ್ಯೂಟಿ ಮಾಡಬೇಕು ಎಂದು ಭಯ ಹುಟ್ಟಿಸಿದ್ದಾರೆ. ನಾನೊಬ್ಬ ಬಡವ ಕೆಎಸ್‍ಆರ್ಟಿಸಿಯನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದೇನೆ. ನನಗೆ ಭಯ ಹುಟ್ಟಿಸಿದ್ದರಿಂದ ನಾನು ಇಲ್ಲಿ ಡ್ಯೂಟಿ ಮಾಡುತ್ತಿದ್ದೇನೆ. ನನಗೆ ಈ ಸಂಸ್ಥೆ ಬಿಟ್ಟು ಬೇರೆ ಏನು ಗೊತ್ತಿಲ್ಲ ಎಂದು ಶ್ರೀಕಾಂತ್ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮಗೆ ಆರನೇ ವೇತನ ಆಯೋಗದ ಸೌಲಭ್ಯ ಯಾಕೆ ಬೇಕು ಗೊತ್ತಾ? ನಿಮ್ಮ ಬಳಿ ಹಣವಿದೆ. ನಮ್ಮ ಬಳಿ ಹಣವಿಲ್ಲ. ಅದಕ್ಕಾಗಿ ಸಂಬಳ ಏರಿಕೆ ಕೇಳುತ್ತಿದ್ದೇವೆ. ಶ್ರೀಮಂತ ರಾಜಕಾರಣಿಗಳಿಗೆ ನಮ್ಮ ಕಷ್ಟ ಅರ್ಥವಾಗುವುದಿಲ್ಲ. ನಾವು ಮತ ಹಾಕಿರುವುದರಿಂದ ಇವರೆಲ್ಲ ರಾಜಕಾರಣ ಮಾಡುತ್ತಿದ್ದಾರೆ. ನನ್ನ ಹತ್ತಿರ ಹಣವಿದ್ದರೆ ನಾನೇ ರಾಜಕಾರಣ ಮಾಡುತ್ತಿದ್ದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಅರ್ಚಕರಿಗೆ ಆರನೇ ವೇತನ ಆಯೋಗದ ಸಂಬಳ ಕೊಡುತ್ತಾರೆ. ನಾವೇನು ಸತ್ತಿದ್ದೀವಾ? ನಿಮ್ಮ ಸ್ವಂತಕ್ಕೆ ನೀವು ರಾಜಕಾರಣ ಮಾಡುವುದಲ್ಲ, ಜನರ ಸೇವೆ ಮಾಡಿ. ಜಾತಿ ಜಾತಿ ಎಂದು ಬಡಿದಾಡಿಕೊಳ್ಳುವವರು ನೀವು ಎಂಎಲ್‍ಎಗಳು. ನಿಮ್ಮ ಜಾತಿ ರಾಜಕೀಯ ಸುಡುಗಾಡು ಸೇರಲಿ ಎಂದು ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಸವದಿ ಮತ್ತಿತರ ರಾಜಕಾರಣಿಗಳನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

ಆರನೇ ವೇತನ ಆಯೋಗದ ಶಿಫಾರಸ್ಸು ಜಾರಿ ಮಾಡಿ, ಸಂಬಳ ಕೊಡಿ. ನಾನು ಬಡವ ಎಂದು ಉಡುಪಿ ಕೆಎಸ್ ಆರ್ ಟಿಸಿ ಡಿಪೋ ಮೆಕ್ಯಾನಿಕ್ ಕಣ್ಣೀರಿಟ್ಟ ಘಟನೆಗೆ ಸಂಬಂಧಿಸಿದಂತೆ, ಸಿಬ್ಬಂದಿ ಶ್ರೀಕಾಂತ್ ರೆಡ್ಡಿ ಆರೋಪಕ್ಕೆ ಕೆಎಸ್‍ಆರ್ಟಿಸಿ ಡಿಪೋ ಮ್ಯಾನೇಜರ್ ಉದಯ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ಶ್ರೀಕಾಂತ್ ರೆಡ್ಡಿ ಇವತ್ತು ಸ್ವ ಇಚ್ಛೆಯಿಂದ ಕೆಲಸಕ್ಕೆ ಬಂದಿದ್ದ. ಆತ ಒಬ್ಬ ಮದ್ಯವ್ಯಸನಿ. ಅವನನ್ನು ನಾವು ಕಚೇರಿಯಿಂದ ಕೆಲಸಕ್ಕೆ ಕರೆದಿಲ್ಲ. ಇವತ್ತು ನಮ್ಮ ಘಟಕದಲ್ಲಿ ಯಾವುದೇ ರೀತಿಯ ತಾಂತ್ರಿಕ ಸಿಬ್ಬಂದಿಗಳು ವರದಿ ಮಾಡಿಲ್ಲ. ಚಾಲನಾ ಸಿಬ್ಬಂದಿ ಕೂಡ ಇವತ್ತು ಕರ್ತವ್ಯಕ್ಕೆ ಬಂದಿಲ್ಲ. ಹಾಗಿದ್ದರೂ ಆತ ಒಬ್ಬನೇ ಬಂದು ಕೆಲಸಕ್ಕೆ ವರದಿ ಮಾಡಿಕೊಂಡಿದ್ದಾನೆ ಎಂದು ಉಡುಪಿ ಡಿಪೋ ಮ್ಯಾನೇಜರ್ ಉದಯ್ ಶೆಟ್ಟಿ ಹೇಳಿದ್ದಾರೆ.

ಪದೇಪದೇ ಕರ್ತವ್ಯಕ್ಕೆ ಗೈರು ಹಾಜರಾಗುವ ಪ್ರವೃತ್ತಿ ಉಳ್ಳವರಾಗಿದ್ದಾನೆ. ಪ್ರಚಾರಕ್ಕಾಗಿ ಮಾಧ್ಯಮಗಳ ಮುಂದೆ ಕಟ್ಟುಕಥೆಗಳನ್ನು ಆತ ಹೇಳಿದ್ದಾನೆ. ಸಂಸ್ಥೆಯ ಇಮೇಜ್ ಹಾಳು ಮಾಡಲು ಈ ರೀತಿಯ ಹೇಳಿಕೆ ನೀಡಿದ್ದಾನೆ. ನಾನು ಆತನ ಮೇಲೆ ಯಾವುದೇ ರೀತಿಯ ಒತ್ತಡ ಹಾಕಿಲ್ಲ ಎಂದು ಉದಯ್ ಶೆಟ್ಟಿ ವೀಡಿಯೋ ರಿಲೀಸ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *