Tuesday, 25th February 2020

ಟ್ರಾಫಿಕ್ ದಂಡದ ಮೊತ್ತ ಇಳಿಕೆಗೆ ರಾಜ್ಯ ಸರ್ಕಾರ ನಿರ್ಧಾರ – ಯಾವುದು ಎಷ್ಟು ಇಳಿಕೆಯಾಗುತ್ತೆ?

ಬೆಂಗಳೂರು: ಕರ್ನಾಟಕದಲ್ಲಿ ವಿಧಿಸಲಾಗುತ್ತಿರುವ ಸಂಚಾರ ನಿಯಮ ಉಲ್ಲಂಘನೆಯ ದಂಡದ ಮೊತ್ತವನ್ನು ಇಳಿಸಲು ಸಾರಿಗೆ ಇಲಾಖೆ ಮುಂದಾಗಿದೆ.

ಗುಜರಾತ್ ಸರ್ಕಾರ ಈಗಾಗಲೇ ದಂಡವನ್ನು ಇಳಿಸಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಸಹ ದಂಡದ ಮೊತ್ತವನ್ನು ಇಳಿಸಲು ಮುಂದಾಗಿರುವ ಸುಳಿವನ್ನು ಸಾರಿಗೆ ಸಚಿವ ಲಕ್ಷ್ಮಣ ಸವದಿ ನೀಡಿದ್ದಾರೆ. ಆದರೆ ಇದು ಜಾರಿಯಾಗಲೂ 10 ದಿನ ಬೇಕಾಗಬಹುದು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಎಷ್ಟು ಇಳಿಕೆಯಾಗುತ್ತೆ?
ಹಲ್ಮೆಟ್ ರಹಿತ ಚಾಲನೆಗೆ 1 ಸಾವಿರ ರೂ. ದಂಡ ಇದ್ದರೆ ಇದನ್ನು 500 ರೂ.ಗೆ ಇಳಿಸಲಾಗುತ್ತದೆ. ಲೈಸೆನ್ಸ್ ರಹಿತ ಚಾಲನೆಗೆ 5,000 ರೂ ಬದಲು 2,500 ರೂ., ಅಪಾಯಕಾರಿ ಚಾಲನೆ 5,000 ರೂ. ಬದಲು 3,000 ರೂ.ಗೆ ಇಳಿಕೆಯಾಗುವ ಸಾಧ್ಯತೆಯಿದೆ.  ಇದನ್ನೂ ಓದಿ:ಸ್ಲಿಪ್ಪರ್ ಹಾಕಿ ಬೈಕ್ ಓಡಿಸಿದ್ರೆ ಬೀಳುತ್ತೆ ಭಾರೀ ದಂಡ!

ಈ ಬಗ್ಗೆ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು, ದಂಡದ ಮೊತ್ತ ಜಾಸ್ತಿಯಾಗಿರುವ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಕಡಿಮೆ ಮಾಡಿರುವಂತೆ ನಮ್ಮಲ್ಲೂ ಕಡಿತ ಮಾಡುವ ಯೋಚನೆ ಇದೆ. ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಬೇರೆ ಬೇರೆ ರಾಜ್ಯಗಳಿಂದ ಮಾಹಿತಿ ಪಡೆಯಲು ಸೂಚನೆ ನೀಡಿದ್ದೇವೆ. 2 ದಿನಗಳ ಒಳಗೆ ಈ ಮಾಹಿತಿ ಲಭಿಸುವ ನಿರೀಕ್ಷೆ ಇದ್ದು, ಮಾಹಿತಿ ಬಂದ ಕೂಡಲೇ ಕ್ರಮಕೈಗೊಳ್ಳುತ್ತೇನೆ. ಸದ್ಯದ ಪರಿಸ್ಥಿತಿಯಲ್ಲಿ ಅಧಿಕಾರಿಗಳಿಗೆ ನೀಡಬೇಕಾದ ಕೆಲ ಸೂಚನೆಗಳನ್ನ ನೀಡಿದ್ದೇವೆ ಎಂದು ಹೇಳಿದ್ದರು.

ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದವರಿಗೆ ದುಬಾರಿ ದಂಡ ವಿಧಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಭಾರೀ ಆಕ್ಷೇಪ ಕೇಳಿಬರುತ್ತಿತ್ತು. ಇದೇ ವೇಳೆ ಗುಜರಾತ್ ಸಿಎಂ ವಿಜಯ್ ರೂಪಾಣಿ ಅವರು, ಹೊಸ ಕಾಯ್ದೆಯಲ್ಲಿ ವಿಧಿಸುತ್ತಿರುವ ದಂಡದ ಮೊತ್ತ ಗರಿಷ್ಠ ಪ್ರಮಾಣದಲ್ಲಿದ್ದು, ಈ ಬಗ್ಗೆ ಚರ್ಚೆ ನಡೆಸಿ ಕೆಲ ದಂಡದ ಮೊತ್ತಗಳನ್ನು ಕಡಿಮೆ ಮಾಡಲಾಗಿದೆ ಎಂದು ಹೇಳಿದ್ದರು.

ಗುಜರಾತ್ ಸರ್ಕಾರದ ಹೊಸ ನಿಯಮಗಳಂತೆ ಹೆಲ್ಮೆಟ್ ಧರಿಸದಿದ್ದರೆ 500 ರೂ. ದಂಡವನ್ನು ನಿಗದಿ ಮಾಡಲಾಗಿದೆ. ಕೇಂದ್ರ ಸರ್ಕಾರ ಸೆ.1ರಿಂದ ಜಾರಿ ಮಾಡಿದ್ದ ಹೊಸ ತಿದ್ದುಪಡಿ ಕಾಯ್ದೆಯ ಅನ್ವಯ ಈ ಮೊತ್ತ 1 ಸಾವಿರ ರೂ. ಇತ್ತು. ಸೀಟ್ ಬೆಲ್ಟ್ ಧರಿಸದಿದ್ದರೆ 1 ಸಾವಿರ ಬದಲಾಗಿ 500 ರೂ., ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೆ ದ್ವಿಚಕ್ರ ವಾಹನ ಸವಾರರಿಗೆ 2 ಸಾವಿರ ರೂ., ಉಳಿದ ವಾಹನಗಳಿಗೆ 3 ಸಾವಿರ ರೂ. ನಿಗದಿ ಮಾಡಲಾಗಿದೆ. ಆದರೆ ಲೈಸನ್ಸ್, ಆರ್ ಸಿ, ವಿಮೆ ಮೊದಲ ಬಾರಿಗೆ ಇಲ್ಲದಿದ್ದರೆ 500 ರೂ. ದಂಡ ವಿಧಿಸಿದರೆ, 2ನೇ ಬಾರಿಗೆ ಈ ಮೊತ್ತ ಕೇಂದ್ರ ಸರ್ಕಾರ ನೀತಿಗೆ ಅಡಿ ಅನ್ವಯವಾಗಲಿದೆ. ತ್ರಿಬಲ್ ರೈಡಿಂಗ್ ಮಾಡುವವರಿಗೆ ವಿಧಿಸಲಾಗುತ್ತಿದ್ದ 1 ಸಾವಿರ ರೂ. ದಂಡವನ್ನು 100 ರೂ.ಗಳಿಗೆ ಕಡಿಮೆ ಮಾಡಲಾಗಿದೆ. ಮಾಲಿನ್ಯ ಪ್ರಮಾಣ ಪತ್ರ ಪಡೆಯದ ವಾಹನಗಳಿಗೆ ನಿಗದಿ ಮಾಡಿದ್ದ 10 ಸಾವಿರಗಳನ್ನು ಸಣ್ಣ ವಾಹನಗಳಿಗೆ 1 ಸಾವಿರ ರೂ. ಭಾರೀ ವಾಹನಗಳಿಗೆ 3 ಸಾವಿರ ರೂ.ಗೆ ಇಳಿಸಲಾಗಿದೆ.

ಜೀವ ಮುಖ್ಯ: ಟ್ರಾಫಿಕ್ ದಂಡ ಹೆಚ್ಚಳದ ಪ್ರಶ್ನೆಗೆ ಕಿಡಿಕಾರಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಜೀವಕ್ಕಿಂತ ಹಣ ಮುಖ್ಯವೇ ಎಂದು ಮರು ಪ್ರಶ್ನೆ ಮಾಡಿದ್ದಾರೆ.

ಬಿಎಸ್6 ಹೊಂಡಾ ಆಕ್ಟಿವಾ ಸ್ಕೂಟರ್ ಅನಾವರಣ ಕಾರ್ಯಕ್ರಮದ ಬಳಿಕ ಮಾತನಾಡಿದ ಕೇಂದ್ರ ಸಚಿವರು, ದೇಶದಲ್ಲಿ ಪ್ರತಿ ವರ್ಷ 1.5 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಶೇ.65 ರಷ್ಟು 18-35 ವಯಸ್ಸಿನವರೇ ಇದ್ದಾರೆ. ಅಷ್ಟೇ ಅಲ್ಲದೆ ಪ್ರತಿ ವರ್ಷ 2 ಲಕ್ಷ ಜನರು ರಸ್ತೆ ಅಪಘಾತಗಳಿಂದ ಅಂಗವಿಕಲರಾಗಿದ್ದಾರೆ. ಯುವಕರನ್ನು ಪ್ರಾಣಾಪಾಯದಿಂದ ರಕ್ಷಣೆ ಮಾಡಲು ಹಾಗೂ ಅಪಘಾತದಿಂದ ಅಂಗವಿಕಲತೆಗೆ ತುತ್ತಾಗುವುದನ್ನು ತಪ್ಪಿಸುವ ಉದ್ದೇಶದಿಂದ ಹೊಸ ಟ್ರಾಫಿಕ್ ದಂಡವನ್ನು ಜಾರಿಗೆ ತರಲಾಗಿದೆ. ದಂಡವನ್ನು ಯಾವ ರೀತಿ ಅಳವಡಿಸಿಕೊಳ್ಳಬೇಕು ಎನ್ನುವುದು ಆಯಾ ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದೆ. ಸಂಗ್ರಹವಾದ ದಂಡದ ಮೊತ್ತವು ರಾಜ್ಯ ಸರ್ಕಾರಕ್ಕೆ ಹೋಗುತ್ತದೆ. ಟ್ರಾಫಿಕ್ ದಂಡ ಏರಿಕೆ ಉದ್ದೇಶ ಜನರ ಜೀವ ರಕ್ಷಣೆಗಾಗಿಯೇ ಹೊರತು ಸರ್ಕಾರಕ್ಕೆ ಆದಾಯ ತರುವುದಲ್ಲ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *