Connect with us

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಂದೂಡಿಕೆ

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ನಡೆಯಬೇಕಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಕೊರೊನಾ ಕಾರಣದಿಂದಾಗಿ ರಾಜ್ಯ ಸರ್ಕಾರ ಮುಂದೂಡಿಕೆ ಮಾಡಿದೆ.

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಜೂನ್ 21ರಿಂದ ರಾಜ್ಯಾದ್ಯಂತ ನಡೆಸಲು ಸರ್ಕಾರ ಈ ಹಿಂದೆ ತೀರ್ಮಾನ ಕೈಗೊಂಡಿತ್ತು. ಆದರೆ ಇದೀಗ ಕೊರೊನಾ ಎರಡನೇ ಅಲೆ ರಾಜ್ಯದಲ್ಲಿ ಹೆಚ್ಚಳವಾಗುತ್ತಿರುವುದರಿಂದಾಗಿ ಸರ್ಕಾರ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಮುಂದೂಡಲು ನಿರ್ಧರಿಸಿದೆ.

ರಾಜ್ಯದಲ್ಲಿ ನಡೆಯ ಬೇಕಾಗಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯೊಂದಿಗೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಕೂಡ ಸರ್ಕಾರ ಮುಂದೂಡಿಕೆ ಮಾಡಿದೆ. ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬಂದ ನಂತರ ಮುಂದಿನ ದಿನಾಂಕ ನಿಗದಿ ಮಾಡಲು ಶಿಕ್ಷಣ ಇಲಾಖೆ ನಿರ್ಧಾರ ಕೈಗೊಂಡಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು, ಜೂನ್ 21 ರಿಂದ ಪ್ರಾರಂಭವಾಗಬೇಕಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ. ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು, ವಿದ್ಯಾರ್ಥಿ-ಪೋಷಕರ, ವಿವಿಧ ಶಾಲಾ ಸಂಘಟನೆಗಳ ಆತಂಕಗಳನ್ನು ಗಮನದಲ್ಲಿರಿಸಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಕೋವಿಡ್-19 ಎರಡನೇ ಅಲೆಯ ಪ್ರಸರಣ ಸಂಪೂರ್ಣ ಹತೋಟಿಗೆ ಬಂದ ಸಂದರ್ಭದಲ್ಲಿ, ಸಾಕಷ್ಟು ಮುಂಚಿತವಾಗಿ ದಿನಾಂಕಗಳನ್ನು ಪ್ರಕಟಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ವಿದ್ಯಾರ್ಥಿಗಳು ವಿಚಲಿತರಾಗದೇ ಏಕಾಗ್ರತೆಯಿಂದ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳಬೇಕು, ಪರೀಕ್ಷೆಯ ಕುರಿತಂತೆ ಯಾವುದೇ ಕಾರಣಕ್ಕೂ ಆತಂಕಕ್ಕೊಳಗುವ ಅವಶ್ಯಕತೆ ಇಲ್ಲ ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

Advertisement
Advertisement