Connect with us

Bengaluru City

ರಾಜ್ಯದಲ್ಲಿ ಒಂದ್ಕಡೆ ಸೈಕ್ಲೋನ್, ಮತ್ತೊಂದು ಕಡೆ ಮುಂಗಾರು- ವರುಣನ ಆರ್ಭಟ

Published

on

ಬೆಂಗಳೂರು: ರಾಜ್ಯದ ಉತ್ತರ ಒಳನಾಡು, ಕರಾವಳಿ ಭಾಗದಲ್ಲಿ 3 ದಿನ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ. ಈಗಾಗಲೇ ಕರಾವಳಿ ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ನಿನ್ನೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ವರ್ಷಧಾರೆಯಾಗಿದೆ. ಅರಬ್ಬಿ ಸಮುದ್ರದಲ್ಲಿ ಎದ್ದಿರುವ ನಿಸರ್ಗ ಚಂಡಮಾರುತ ಮತ್ತಷ್ಟು ಆತಂಕ ಸೃಷ್ಟಿಸುತ್ತಾ ಅನ್ನೋ ಆತಂಕ ಮನೆ ಮಾಡಿದೆ.

ದಾವಣಗೆರೆಯ ಹರಿಹರ ಸೇರಿ ಹಲವೆಡೆ ವರುಣನ ಆರ್ಭಟ ಜೋರಾಗಿತ್ತು. ದಾವಣಗೆರೆಯ ಹೆಮ್ಮನಬೇತೂರು ಗ್ರಾಮದ ರಸ್ತೆಗಳಲ್ಲಿ ನದಿಯಂತೆ ನೀರು ಹರಿಯಿತು. ಕಾರು ಅರ್ಧದಷ್ಟು ಮುಳುಗಿತ್ತು. ಮನೆಗಳಿಗೆ ನೀರು ನುಗ್ಗಿ ವಸ್ತುಗಳೆಲ್ಲಾ ನೀರುಪಾಲಾಯ್ತು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಮಳೆಯಿಂದ ವಾಹನ ಸವಾರರು ಪರದಾಡಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮುಂಗಾರು ಬಿತ್ತನೆಗೆ ರೈತರು ಸಜ್ಜಾಗಿದ್ದಾರೆ. ಹುಕ್ಕೇರಿ ತಾಲೂಕಿನ ಸುತಗಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸುರಿದ ಧಾರಾಕಾರ ಮಳೆಯಿಂದ ರಸ್ತೆಗೆ ನೀರು ನುಗ್ಗಿದ್ದು, ರಸ್ತೆಗಳು ಕೆರೆಯಂತಾಗಿವೆ.

ಸೋಮವಾರದ ಭಾರೀ ಮಳೆಯಿಂದಾಗಿ ಚಿಕ್ಕೋಡಿಯ ಸುತಗಟ್ಟಿ ಘಾಟ್‍ನಲ್ಲಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ರಸ್ತೆಯಲ್ಲಿ ವಾಹನಗಳು ತಗ್ಲಾಕೊಂಡವು. ಒಂದು ಗಂಟೆಗೂ ಕಾಲ ಹೆಚ್ಚು ಸುರಿದ ಮಳೆಯಿಂದ ಪ್ರಯಾಣಿಕರ ಪರದಾಟ ನಡೆಸಿದರು.

ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದಲ್ಲಿ ಗುಡುಗು, ಸಿಡಿಲು ಗಾಳಿ ಸಹಿತ ಭಾರೀ ಮಳೆಯಾಗಿದೆ. ಸತತ ಅರ್ಧಗಂಟೆಯಿಂದ ಸುರಿದ ಮಳೆಯಿಂದಾಗಿ ಅಗಸ್ತ್ಯ ತೀರ್ಥ ಹೊಂಡ ಮೈತುಂಬಿ ನಿಂತಿದೆ. ಅಕ್ಕ ತಂಗಿ ಜಲಪಾತದಲ್ಲಿ ನೀರು ಬೋರ್ಗರೆಯುತ್ತಿದೆ. ಮತ್ತೊಂದೆಡೆ ನವನಗರ ಮೂರ್ನಾಲ್ಕು ಮನೆಗಳಿಗೆ ನೀರು ನುಗ್ಗಿದೆ. ಬೀಳಗಿಯ ಗಾಂಧಿನಗರದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಹೊತ್ತಿ ಉರಿದಿದೆ. ಬೆಳಗಾವಿ, ಹಾವೇರಿ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.