Saturday, 14th December 2019

ದೋಸ್ತಿ ಸರ್ಕಾರ ಮತ್ತು ಅತೃಪ್ತರ ಭವಿಷ್ಯ ಏನಾಗುತ್ತೆ – ಬೆಳಗ್ಗೆ 10.30ಕ್ಕೆ ಸುಪ್ರೀಂಕೋರ್ಟ್ ತೀರ್ಪು

– ಸಿಜಿಐ ಪೀಠದತ್ತ ಇಡೀ ದೇಶದ ಚಿತ್ತ

ಬೆಂಗಳೂರು: ರಾಜ್ಯದ ಮೈತ್ರಿ ಸರ್ಕಾರದ ಅಳಿವು, ಉಳಿವಿನ ಪ್ರಶೆಯಾಗಿರೋ ಅತೃಪ್ತ ಶಾಸಕರ ರಾಜೀನಾಮೆ ಮತ್ತು ಅನರ್ಹತೆ ಸಂಬಂಧಿತ ತೀರ್ಪನ್ನು ಇವತ್ತು ಸುಪ್ರೀಂಕೋರ್ಟ್ ನೀಡಲಿದೆ. ಮಂಗಳವಾರ ಸುದೀರ್ಘ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠ ಇವತ್ತು ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಿಸಲಿದೆ.

ವಿಶ್ವಾಸ ಮತಯಾಚನೆಗೆ ಮುನ್ನವೇ ರಾಜೀನಾಮೆ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟ್ ಸ್ಪೀಕರ್ ಗೆ ಸೂಚಿಸಿದ್ರೆ ಬಿಜೆಪಿಗೆ ಲಾಭವಾಗಲಿದೆ. ಯಾಕಂದ್ರೆ ಸ್ಪೀಕರ್ ರಾಜೀನಾಮೆ ಅಂಗೀಕರಿಸಿದ್ರೂ, ಶಾಸಕರನ್ನು ಅನರ್ಹಗೊಳಿಸಿದ್ರೂ ಸರ್ಕಾರ ಪತನ ಪಕ್ಕಾ ಆಗಲಿದೆ. ಅದೇ ರಾಜೀನಾಮೆ ಅಂಗೀಕಾರ ಅಥವ ತಿರಸ್ಕಾರದ ತೀರ್ಮಾನವನ್ನು ಸಭಾಧ್ಯಕ್ಷರ ವಿವೇಚನೆಗೆ ಬಿಟ್ಟರೇ, ರಾಜೀನಾಮೆ ನೀಡಿದವರಿಗೂ ವಿಪ್ ಅನ್ವಯವಾಗಲಿದೆ. ಇದ್ರಿಂದ ದೋಸ್ತಿಗಳಿಗೆ ಅನುಕೂಲವಾಗಲಿದೆ. ಅನರ್ಹತೆ ಅಸ್ತ್ರ ಬಳಸಿ ಅತೃಪ್ತರನ್ನು ಸೆಳೆಯಲು ಇದು ನೆರವಾಗಲಿದೆ ಎಂಬ ವಿಶ್ವಾಸ ಕಾಂಗ್ರೆಸ್ಸಿಗರಿಗಿದೆ.

ಸುಪ್ರೀಂಕೋರ್ಟ್ ತೀರ್ಪು ಏನಾಗಬಹುದು?
ಸಾಧ್ಯತೆ ನಂ.1: ಸ್ಪೀಕರ್ ಕಾರ್ಯವ್ಯಾಪ್ತಿಯಲ್ಲಿ ಸುಪ್ರೀಂಕೋರ್ಟ್ ಹಸ್ತಕ್ಷೇಪ ಮಾಡಬಹುದು. ಸ್ವೀಕರ್ ಹುದ್ದೆಯೂ ಸುಪ್ರೀಂಕೋರ್ಟ್ ವ್ಯಾಪ್ತಿಯಲ್ಲಿದೆ ಎಂದು ಸಮರ್ಥಿಸಿಕೊಳ್ಳಬಹುದು. ಅತೃಪ್ತ ಶಾಸಕರ ರಾಜೀನಾಮೆ ಅಂಗಿಕಾರಕ್ಕೆ ಸ್ಪೀಕರ್‍ಗೆ ಸೂಚನೆ ನೀಡಬಹುದು. ವಿಶ್ವಾಸಮತಕ್ಕೂ ಮುನ್ನ ರಾಜೀನಾಮೆ ಪರಿಶೀಲಿಸಿ, ಅಂಗಿಕಾರಕ್ಕೆ ಸೂಚಿಸಬಹುದು. ಮೊದಲು ರಾಜೀನಾಮೆ ಅಂಗೀಕರಿಸಿ, ಬಳಿಕ ಅನರ್ಹತೆ ಬಗ್ಗೆ ವಿಚಾರಣೆ ನಡೆಸಿ ಎನ್ನಬಹುದು.

ಸಾಧ್ಯತೆ ನಂ.2: ಸ್ಪೀಕರ್ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡದಿರಲು ಸುಪ್ರೀಂಕೋರ್ಟ್ ನಿರ್ಧರಿಸಬಹುದು. ಸಮಯ ನಿಗದಿಪಡಿಸಿ, ಸ್ಪೀಕರ್ ವಿವೇಚನೆಯಡಿ ಕಾರ್ಯ ನಿರ್ವಹಿಸಲು ಅವಕಾಶ..? ಸ್ಪೀಕರ್ ಅಂತಿಮ ನಿರ್ಣಯವನ್ನು ಮಾತ್ರ ಕಾನೂನು ವ್ಯಾಪ್ತಿಯಲ್ಲಿ ಪರಿಶೀಲನೆಗೆ ಮುಂದಾಗಬಹುದು.

ಸಾಧ್ಯತೆ ನಂ.3: ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬಹುದು. ಪ್ರಕರಣಕ್ಕೆ ಮಧ್ಯಂತರ ರೀಲಿಫ್ ನೀಡಿ, ನಂತರ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬಹುದು. ರಾಜೀನಾಮೆ, ಅನರ್ಹತೆ ಬಗ್ಗೆ ಮತ್ತಷ್ಟು ಕಾನೂನು ಪರಿಶೀಲನೆಗೆ ಮುಂದಾಗಬಹುದು.

ಸುಪ್ರೀಂಕೋರ್ಟ್ ಇಂದು ಬೆಳಗ್ಗೆ ನೀಡುವ ತೀರ್ಪಿನ ಮೇಲೆ ದೋಸ್ತಿ ಸರ್ಕಾರದ ಅಳಿವು ಮತ್ತು ಅತೃಪ್ತರ ಹಣೆ ಬರಹ ನಿರ್ಧಾರವಾಗಲಿದೆ. ಯಾರ ಪರ ತೀರ್ಪು ಬಂದ್ರೆ ಏನು ಆಗಬಹುದು.
ಸ್ಪೀಕರ್ ವಿವೇಚನೆಗೆ ಬಿಟ್ಟರೆ?
* ಸ್ಪೀಕರ್ ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಳ್ಳದೇ ಇರಬಹುದು
* ಅನರ್ಹತೆ ಭೀತಿಯಲ್ಲಿ ಶಾಸಕರು ವಿಶ್ವಾಸಮತಕ್ಕೆ ಬರಬಹುದು
* ಸದ್ಯದ ಸಂಕಷ್ಟದಿಂದ ಸರ್ಕಾರ ಬಚಾವಾಗಬಹುದು

ಅತೃಪ್ತರ ಪರ ತೀರ್ಪು ಬಂದರೇ?
* ಅತೃಪ್ತರ ರಾಜೀನಾಮೆ ಇವತ್ತೇ ಅಂಗೀಕಾರ ಆಗಬಹುದು
* ರಾಜೀನಾಮೆ ಅಂಗೀಕಾರವಾದರೆ ಸರ್ಕಾರ ಅಲ್ಪಮತಕ್ಕೆ
* ವಿಶ್ವಾಸಮತಕ್ಕೆ ಮುನ್ನವೇ ಸಿಎಂ ರಾಜೀನಾಮೆ ನೀಡಬಹುದು

Leave a Reply

Your email address will not be published. Required fields are marked *