Monday, 20th August 2018

ಕರಾವಳಿಯಲ್ಲಿ ನಾಳೆ ಮತ್ತೆ ಭಾರೀ ಮಳೆ: ಹವಾಮಾನ ಇಲಾಖೆ ಮುನ್ನೆಚ್ಚರಿಕೆ

ನವದೆಹಲಿ/ಮಂಗಳೂರು/ಬೆಂಗಳೂರು: ಕರಾವಳಿ ಕರ್ನಾಟಕ, ಕೇರಳ, ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ನಾಳೆ (ಜೂ.12) ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕದ ಕರಾವಳಿ, ಕೇರಳದ ಕೆಲವು ಪ್ರದೇಶಗಳು, ಛತ್ತೀಸ್‍ಗಢ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಂ ಹಾಗೂ ತ್ರಿಪುರಾದಲ್ಲಿ ಜೂನ್ 12ರಂದು ಭಾರೀ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗೋವಾ, ಕೇರಳ ಹಾಗೂ ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 55 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಸಮುದ್ರದ ರಭಸ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಸಿದೆ.

ಇದೇ ವಿಚಾರದಲ್ಲಿ ಬೆಂಗಳೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕರಾದ ಶ್ರೀನಿವಾಸ್ ರೆಡ್ಡಿ, ಜೂನ್ 1 ರಿಂದ ರಾಜ್ಯದ ಹಲವು ಕಡೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಸೆಪ್ಟೆಂಬರ್ ವರೆಗೂ ಮಳೆ ಮುಂದುವರೆಯಲಿದೆ. ಕರಾವಳಿ ಮಲೆನಾಡು ಭಾಗಗಳಲ್ಲಿ ಹೆಚ್ಚಾಗಿ ಮಳೆಯಾಗುತ್ತಿದೆ, ಹೆಚ್ಚು ಮಳೆಯನ್ನು ನಿರೀಕ್ಷೆ ಮಾಡಲಾಗಿದೆ. ಪ್ರಮುಖವಾಗಿ ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಭಾಗದಲ್ಲಿ ಭಾರಿ ಮಳೆಯಾಗುವ ಸಂಭವವಿದೆ. ಇನ್ನೂ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಈ ಬಾರಿ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಹೆಚ್ಚಾಗಿದೆ. ರಾಜ್ಯದಲ್ಲಿ ಮುಂಗಾರು ಪೂರ್ವ 125 ಮಿ.ಮೀ. ಮಳೆಯಾಗಬೇಕಿತ್ತು. ಅದ್ರೆ ನಿರೀಕ್ಷೆಗಿಂತ ಈ ಬಾರಿ ಮಳೆಯ ಪ್ರಮಾಣ ಹೆಚ್ಚಾಗಿದ್ದು 193 ಮಿ.ಮೀ. ಮಳೆಯಾಗಿದೆ. ರಾಜ್ಯದ 24 ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದೆ. ಇನ್ನುಳಿದಂತೆ 5 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಬೀದರ್, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ರಾಜ್ಯದಲ್ಲಿ ರಾಯಚೂರು ಜಿಲ್ಲೆಯಲ್ಲಿ ಮಾತ್ರ ಮಳೆ ಕೊರತೆಯಾಗಿದೆ. ಜಿಲ್ಲೆಯಲ್ಲಿ 64 ಮಿ.ಮೀ. ಮಳೆಯಾಗಬೇಕಿತ್ತು. ಆದ್ರೆ ಕೇವಲ 38 ಮಿ.ಮೀ. ಮಳೆಯಾಗಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮಳೆರಾಯನ ಅಬ್ಬರ ಕಡಿಮೆಯಾಗಿತ್ತು. ಆದರೆ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಹರಿದು ಬಂದ ನೀರಿನಿಂದಾಗಿ ಉಪ್ಪಿನಂಗಡಿ – ಸುಬ್ರಹ್ಮಣ್ಯ ಸಂಪರ್ಕ ರಸ್ತೆಯ ಹೊಸ್ಮಠ ಸೇತುವೆ ಮುಳುಗಡೆಯಾಗಿದೆ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಮಾರಧಾರಾ ನದಿ ತುಂಬಿದ್ದು, ನೀರಿನ ಮಟ್ಟ ಹೆಚ್ಚಾಗಿದೆ. ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಕುಮಾರಧಾರಾ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದ್ದು ಭಕ್ತರಿಗೆ ನದಿಗಿಳಿಯದಂತೆ ಸೂಚನೆ ನೀಡಲಾಗಿದೆ. ಇದರಿಂದಾಗಿ ಕ್ಷೇತ್ರಕ್ಕೆ ಬಂದ ಭಕ್ತರು ಸ್ನಾನಘಟ್ಟಕ್ಕೆ ಹೋಗಲಾಗದೆ ಮೇಲ್ಭಾಗದ ನೆರೆ ನೀರಿನಲ್ಲೇ ಸ್ನಾನ ಮಾಡಬೇಕಾಗಿದೆ. ಸ್ನಾನಘಟ್ಟದ ಹೊರಗೆ ಬಂದಂತಹ ನೀರಿನಲ್ಲೇ ಭಕ್ತಾಧಿಗಳು ತೀರ್ಥಸ್ನಾನ ಮಾಡುತ್ತಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರಾದಲ್ಲಿ ನೀರಿನ ಮಟ್ಟ ಹೆಚ್ಚಿದ್ದು ಈ ಮಳೆಗಾಲದಲ್ಲಿ ಮೊದಲ ಬಾರಿಗೆ ಮೈದುಂಬಿಕೊಂಡು ಹರಿಯುತ್ತಿದೆ.

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಇದ್ದ ವರುಣನ ಆರ್ಭಟ ಇಂದು ಸ್ವಲ್ಪಮಟ್ಟಿಗೆ ಕಮ್ಮಿಯಾಗಿದೆ. ಜಿಲ್ಲೆಯ ಕರಾವಳಿ ಭಾಗವಾದ ಕಾರವಾರ, ಕುಮಟಾ, ಹೊನ್ನಾವರ, ಭಟ್ಕಳದಲ್ಲಿ ಬಿಸಿಲು ಮಳೆ ಕಣ್ಣಾಮುಚ್ಚಾಲೆ ಆಡುತ್ತಿತ್ತು. ಇನ್ನು ಮಲೆನಾಡಿನ ಭಾಗವಾದ ಜೋಯಿಡಾ, ಹಳಿಯಾಳದಲ್ಲಿ ಮಳೆಯಾಗುತ್ತಿದ್ದರೆ ಶಿರಸಿ, ಸಿದ್ದಾಪುರ, ಮುಂಡಗೋಡು ಭಾಗದಲ್ಲಿ ವರುಣ ಸ್ವಲ್ಪ ಮಟ್ಟಿಗೆ ಬಿಡುವು ನೀಡಿದ್ದ. ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳಲ್ಲಿ 376.8 ಮಿಲಿಮೀಟರ್ ಮಳೆಯಾಗಿದೆ. ಇದರಲ್ಲಿ ಭಟ್ಕಳ- 24.2 ಮಿಮೀ, ಹೊನ್ನಾವರ-3.00 ಮಿಮೀ, ಕುಮಟಾ-0.6 ಮಿಮೀ, ಕಾರವಾರ- 1.4 ಮಿಮೀ, ಶಿರಸಿ- 52.0 ಮಿಮೀ, ಸಿದ್ದಾಪುರ – 75.2 ಮಿಮೀ, ಮುಂಡಗೋಡು – 10.2ಮಿಮೀ, ಹಳಿಯಾಳ- 82.4, ಅಂಕೋಲ – 12.4, ಜೋಯಿಡಾ-52.0, ಯಲ್ಲಾಪುರದಲ್ಲಿ 63.4 ಮಿಲಿಮೀಟರ್ ಮಳೆಯಾಗಿದೆ.

ಹಾಸನ: ಹಾಸನ ಜಿಲ್ಲೆಯಲ್ಲೂ ಮಳೆ ಆರ್ಭಟಿಸುತ್ತಿದ್ದು ಒಂದೆಡೆ ಹಾನಿ ಜೊತೆಗೆ ಮತ್ತೊಂದೆಡೆ ಗುಡ್ಡ ಕುಸಿತದಿಂದಾಗಿ ಹಾಸನ-ಬೆಂಗಳೂರು ನಡುವಿನ ರೈಲು ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ಇಂದು ಮಧ್ಯಾಹ್ನ ಯಶವಂತಪುರದಿಂದ ಕಾರವಾರಕ್ಕೆ ಹೊರಟಿದ್ದ ರೈಲು ಹಾಸನದಲ್ಲೇ ನಿಂತಿದ್ದರಿಂದ ಸಾವಿರಾರು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ಸಂಜೆ ವೇಳೆಗೆ ದುರಸ್ತಿ ಕಾರ್ಯ ಮುಗಿಯುವ ನಿರೀಕ್ಷೆ ಇದ್ದರೂ, ಮಳೆಯ ಆರ್ಭಟ ಹಾಗೂ ಬೆಳಕಿನ ಅಭಾವದಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ನಾಳೆ ಬೆಳಗ್ಗೆ ದುರಸ್ತಿ ಕಾರ್ಯ ಮುಂದುವರೆಸೋದಾಗಿ ಅಧಿಕಾರಿಗಳು ಹೇಳಿದ್ದಾರೆ. ಮಳೆ ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಇನ್ನೊಂದೆಡೆ ಜೋರು ಮಳೆಯಿಂದ ಹೇಮಾವತಿ ಒಳ ಹರಿವು ಗಣನೀಯವಾಗಿ ಏರಿಕೆಯಾಗಿರುವುದು ಅಪಾರ ಮಂದಿಯಲ್ಲಿ ಹರ್ಷ ತರಿಸಿದೆ.

ಮಳೆಯಿಂದಾಗಿ ಸಕಲೇಶಪುರ ತಾಲೂಕು ಯಡಕುಮೇರಿ-ಕರಗರಹಳ್ಳಿ ನಡುವೆ ನಾಲ್ಕು ಕಡೆ ಗುಡ್ಡ ಕುಸಿದಿದೆ. ಇದರಿಂದಾಗಿ ಬೆಂಗಳೂರು-ಮಂಗಳೂರು ನಡುವಿನ ರೈಲ್ವೆ ಸಂಚಾರ ಸ್ಥಗಿತಗೊಂಡಿದೆ. ರೈಲು ಸಂಪರ್ಕ ಕಡಿತಗೊಂಡಿರುವುದರಿಂದ ಯಶವಂತಪುರದಿಂದ ಕಾರವಾರಕ್ಕೆ ಹೋಗುತ್ತಿದ್ದ ರೈಲು ಹಾಸನ ರೈಲ್ವೆ ನಿಲ್ದಾಣದಲ್ಲೇ ನಿಂತಿದ್ದರಿಂದ ಸಾವಿರಾರು ಪ್ರಯಾಣಿಕರು ಪರದಾಡಬೇಕಾಯಿತು. ಕೂಡಲೇ ಎಚ್ಚೆತ್ತ ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿ ರೈಲ್ವೆ ಟಿಕೆಟ್ ಹಣವನ್ನು ಮರುಪಾವತಿ ಮಾಡಿ, ಸಾರಿಗೆ ಬಸ್ ಮೂಲಕ ಪ್ರಯಾಣಿಕರನ್ನು ಕಳಿಸಿಕೊಟ್ಟರು.

ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯಲ್ಲಿ ಭಾಗಮಂಡಲಕ್ಕಿಂತಲೂ ಹೆಚ್ಚಿನ ಮಳೆಯಾಗುತ್ತಿದ್ದು, ಜಿಲ್ಲೆಯ ಜೀವನದಿ ಹೇಮಾವತಿಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಮಳೆಗೆ ಸಕಲೇಶಪುರ ತಾಲೂಕಿನ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹಾನುಬಾಳು ಸೇತುವೆ ಮುಳುಗಡೆಯಾಗಿದೆ. ಹೊಳೆನರಸೀಪುರ ಪಟ್ಟಣದಲ್ಲಿ ಮಳೆಯಿಂದಾಗಿ ರಸ್ತೆ ಗುಂಡಿ ಬಿದ್ದಿದ್ದರಿಂದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಾಳೆ ಮಂಡಿಗೆ ನುಗ್ಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Leave a Reply

Your email address will not be published. Required fields are marked *