Connect with us

Bengaluru City

ರಾಜ್ಯದ ಕೆಲವೆಡೆ ಮತ್ತೆ ಮಳೆ- ಜನಜೀವನ ಅಸ್ತವ್ಯಸ್ತ, ರೈತರಲ್ಲಿ ಆತಂಕ

Published

on

ಬೆಂಗಳೂರು: ಯಾದಗಿರಿ, ಬೀದರ್, ವಿಜಯಪುರ ಹಾಗೂ ರಾಯಚೂರಿನಲ್ಲಿ ಮತ್ತೆ ವರುಣ ಅಬ್ಬರಿಸಿದ್ದಾನೆ.

ಯಾದಗಿರಿ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದೆ. ಮಳೆ ಅಬ್ಬರಕ್ಕೆ ರಸ್ತೆ ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ. ಮಳೆ ಅರ್ಭಟಕ್ಕೆ ಜನರು ತಲ್ಲಣಗೊಂಡಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರ, ಖಾನಾಪುರ ಎಸ್ ಗ್ರಾಮದೊಳಗೆ ನೀರು ನುಗ್ಗಿದೆ. 30 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ತಡರಾತ್ರಿಯಿಂದ ನಿದ್ದೆ ಮಾಡದೆ ಜನರು ಹೈರಾಣಾಗಿದ್ದಾರೆ. ನಗನೂರ ಗ್ರಾಮದ ರಸ್ತೆ ಜಲಾವೃತಗೊಂಡಿದೆ. ನಗನೂರ ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳು, ಖಾನಾಪುರ ಎಸ್ ಎಚ್ ಗ್ರಾಮದಲ್ಲಿ 10 ಮನೆಗಳಿಗೆ ನೀರು ನುಗ್ಗಿದೆ. ನೀರು ಖಾಲಿ ಮಾಡಲು ಜನ ಪರದಾಡಿದ್ದಾರೆ.

ಬೀದರ್‍ನಲ್ಲಿ ತಡರಾತ್ರಿಯಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ರಾತ್ರಿಯಿಡೀ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ತಡರಾತ್ರಿ ಸುರಿದ ಮಳೆಗೆ ನಗರದ ಕೆಲವಡೆ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಹಲವು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಮತ್ತೆ ಪ್ರಾರಂಭ ಮಾಡಿದ್ದಾನೆ. ಈಗಾಗಲೇ ಮಹಾಮಳೆಗೆ ಬೆಳೆ ಕಳೆದುಕೊಂಡು ಕಂಗಾಲಾಗಿರುವ ರೈತರಲ್ಲಿ ಆತಂಕ ಶುರುವಾಗಿದೆ. ತಡರಾತ್ರಿ ಬೀದರ್ ತಾಲೂಕಿನಲ್ಲಿ ಹೆಚ್ಚು ಮಳೆಯಾಗಿದ್ದು, ಇದೇ ರೀತಿ ಮಳೆ ಮುಂದುವರಿದ್ರೆ ಜಿಲ್ಲೆಯಲ್ಲಿ ಪ್ರವಾಹ ಸೃಷ್ಟಿ ಗ್ಯಾರಂಟಿ ಎನ್ನುವಂತಾಗಿದೆ.

ಇತ್ತ ವಿಜಯಪುರ ಜಿಲ್ಲೆಯಾದ್ಯಂತ ಕೂಡ ಮತ್ತೆ ಮಳೆ ಆರ್ಭಟ ಶುರುವಾಗಿದೆ. ನಿನ್ನೆ ಸಂಜೆ 7 ಗಂಟೆಗೆ ಶುರುವಾದ ಮಳೆ ಬಿಟ್ಟುಬಿಡದೆ ಈಗಲೂ ಮುಂದುವರಿದಿದೆ. ರಾತ್ರಿ ಇಡೀ ರಭಸದ ಮಳೆ ಸುರಿದಿದ್ದು, ಈಗ ಚಿಟಿಚಿಟಿ ಮಳೆಯಾಗುತ್ತಿದೆ. ಎರಡು ದಿನದಿಂದ ಶಾಂತನಾಗಿದ್ದ ವರುಣ ಇದೀಗ ನಿನ್ನೆಯಿಂದ ಮತ್ತೆ ಪ್ರತ್ಯಕ್ಷನಾಗಿದ್ದಾನೆ. ಇದರಿಂದ ರೈತರಲ್ಲಿ ಮತ್ತೆ ಆತಂಕ ಶುರುವಾಗಿದೆ.

ರಾಯಚೂರಿನಲ್ಲಿ ಕೂಡ ಮತ್ತೇ ವರುಣನ ಆರ್ಭಟ ಶುರುವಾಗಿದ್ದು, ಮಧ್ಯರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಪರಿಣಾಮ ರಸ್ತೆಗಳಲ್ಲೆಲ್ಲಾ ನೀರು ತುಂಬಿ ಹರಿಯುತ್ತಿದೆ. ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ರಾತ್ರಿಯಿಡೀ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಮೂರು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಆರಂಭವಾಗಿದ್ದರಿಂದ ರೈತರಲ್ಲಿ ಮತ್ತೆ ಆತಂಕ ಶುರುವಾಗಿದೆ.

Click to comment

Leave a Reply

Your email address will not be published. Required fields are marked *