Connect with us

Bengaluru City

ಜಮೀರ್ ಬಡಾಯಿ, ಕಾಂಗ್ರೆಸ್‍ನಲ್ಲಿ ಲಡಾಯಿ

Published

on

Share this

– ಸುಕೇಶ್ ಡಿ.ಎಚ್
ಎರಡು ವರ್ಷದ ನಂತರ ಕಾಂಗ್ರೆಸ್‍ನಲ್ಲಿ ಶುರುವಾಗಬಹುದಾಗಿದ್ದ ಸಂಭವನೀಯ ಅಂತಃಕಲಹ ಈಗಲೇ ಆರಂಭವಾದಂತೆ ಕಾಣುತ್ತಿದೆ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಲು ಮುಂದಾದ ಕಾಂಗ್ರೆಸ್ ನಾಯಕರು ಈಗ ಹಾದಿ ರಂಪ, ಬೀದಿ ರಂಪ ಮಾಡಿಕೊಳ್ಳಲು ವೇದಿಕೆ ಸಿದ್ಧವಾದಂತಿದೆ. ನಾನಾ…?ನೀನಾ..? ಫೈಟ್ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಆರಂಭವಾಗಿದೆ. ಆದರೆ ಬಹಿರಂಗ ಕದನಕ್ಕೆ ಇನ್ನೂ ಎರಡು ವರ್ಷದ ಸಮಯವಂತೂ ಇದ್ದೇ ಇತ್ತು. ಆದರೆ ಸಿದ್ದರಾಮಯ್ಯ ಅವರ ಆಸ್ಥಾನ ವಿದೂಷಕನಂತಾಡುವ ಜಮೀರ್ ಅಹಮ್ಮದ್ ಖಾನ್ ವಿವಾದದ ಕಿಡಿ ಹಚ್ಚಿದಂತೆ ಕಾಣುತ್ತಿದೆ. ಅಹಿಂದ ಕನವರಿಕೆಯಲ್ಲಿ ಜಮೀರ್ ಅಹಮ್ಮದ್‍ರನ್ನು ಅಗತ್ಯಕ್ಕಿಂತ ಜಾಸ್ತಿ ಹತ್ತಿರ ಬಿಟ್ಟುಕೊಂಡ ಸಿದ್ದರಾಮಯ್ಯ ಈಗ ಒಂದು ಹಂತದಲ್ಲಿ ಟವೆಲ್ ಕೊಡವಿ ಮುಸಿ ಮುಸಿ ನಗತೊಡತ್ತಿದ್ದಾರೆ. ಆದರೆ ಜಮೀರ್ ಅಹಮ್ಮದ್ ಮಾತುಗಳು ಕಾಂಗ್ರೆಸ್ ಅಂಗಳದ ಬೂದಿ ಮುಚ್ಚಿದ ಕೆಂಡದಲ್ಲಿ ನಿಧಾನವಾಗಿ ಹೊಗೆ ಏಳಲು ಕಾರಣವಾಗಿದೆ. ಅದೇ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಕೊತ ಕೊತ ಕುದಿಯತೊಡಗಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಸಿಎಂ ಕುರ್ಚಿ ಕದನ ಜೋರಾದ ಬೆನ್ನಲ್ಲೇ ವಿಪಕ್ಷ ಕಾಂಗ್ರೆಸ್ ರಾಜಕೀಯ ಲೆಕ್ಕಾಚಾರದಲ್ಲಿ ಅಖಾಡಕ್ಕೆ ಇಳಿದು ಒಂದಷ್ಟು ರಾಜಕೀಯ ಲಾಭಕ್ಕೆ ಮುಂದಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಸಿಎಂ ಯಡಿಯೂರಪ್ಪರನ್ನು ಕಂಡರೆ ಏನೋ ಒಂಥರಾ ರೋಮಾಂಚನ ಆದವರಂತೆ ವರ್ತಿಸುತ್ತಿದ್ದಾರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್. ಇಬ್ಬರಿಗು ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮುಂದುವರಿಯಲಿ ಎಂಬ ಭಾವನೆಯೇ ಇದ್ದಂತಿದೆ. ಬಿಜೆಪಿಯ ಸದ್ಯದ ಬೆಳವಣಿಗೆ ಬಗ್ಗೆ ಎಲ್ಲೂ ಗಟ್ಟಿ ಧ್ವನಿ ಎತ್ತದ ಡಿ.ಕೆ.ಶಿವಕುಮಾರ್ ಅವರ ತತ್ವ ಅವರಿಗೆ, ನಮ್ಮ ಪಕ್ಷ ನಮಗೆ ಅಂತ ವೇದಾಂತ ಮಾತನಾಡತೊಡಗಿದ್ದಾರೆ. ಸಿದ್ದರಾಮಯ್ಯ ಟ್ವೀಟ್ ಮಾಡಲು ಸೀಮಿತರಾಗಿ ಟ್ವೀಟ್ ರಾಮಯ್ಯರಾಗಿ ಉಳಿದಿದ್ದಾರೆ. ಅಲ್ಲಿಗೆ ಒಂದಂತೂ ಸ್ಪಷ್ಟ ಬಿಜೆಪಿ ನಾಯಕರೇ ಆರೋಪಿಸಿದಂತೆ ಇದು ಕಾಂಗ್ರೆಸ್ ಬಿಜೆಪಿ ಸಮ್ಮಿಶ್ರ ಸರ್ಕಾರವೇನೋ ಎಂಬಂತಿದೆ ಕಾಂಗ್ರೆಸ್ ನಾಯಕರ ವರ್ತನೆ.

ಕಾಂಗ್ರೆಸ್ ನಾಯಕರ ಜಾಣ ಕಿವುಡು, ಜಾಣ ಕುರುಡು, ಜಾಣ ಮರೆವು ಎಲ್ಲವೂ ಬಿಜೆಪಿಗೆ ಬಲ ತುಂಬಿದರೆ ಇನ್ನೊಂದು ಕಡೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪರಸ್ಪರ ಕಾದಾಡಲು ವೇದಿಕೆ ಸಿದ್ಧಪಡಿಸತೊಡಗಿದ್ದಾರೆ ಶಾಸಕ ಜಮೀರ್ ಅಹಮ್ಮದ್ ಖಾನ್. ಅವರ ಗುರಿ ಸ್ಪಷ್ಟ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು. ಬಿಜೆಪಿಯಲ್ಲಿನ ರಾಜಕೀಯ ಅಶಾಂತಿಯ ಲಾಭ ಪಡೆಯುವ ಯೋಚನೆಯೂ ಮಾಡದ ಕೈ ಪಾಳಯದಲ್ಲಿ ಸೂಸೈಡ್ ಬಾಂಬರ್ ರೀತಿ ಜಮೀರ್ ಅಹಮ್ಮದ್ ಖಾನ್ ಕಾರ್ಯ ನಿರ್ವಹಿಸತೊಡಗಿದ್ದಾರೆ. ಅಷ್ಟಕ್ಕೂ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋದನ್ನು ಈಗಲೇ ಮಾತನಾಡಬೇಕಾದ ಅಗತ್ಯ ಅಥವಾ ಅನಿವಾರ್ಯತೆ ಕಾಂಗ್ರೆಸ್ ಪಾಳಯದಲ್ಲಿ ಖಂಡಿತ ಇಲ್ಲ. ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ಚುನಾವಣೆಯ ನಂತರ ಅಧಿಕಾರ ಯಾರಿಗೆ ಅನ್ನೋದು ತೀರ್ಮಾನ ಆಗಲಿದೆ. ಇದನ್ನೂ ಓದಿ: ಅವರಿಗೆ ಮನಸ್ಸಿದೆ ಇವರಿಗೆ ಕನಸಿದೆ ಆದರೆ…?

ಅಷ್ಟಕ್ಕೂ ಆಗಿದ್ದೇನು ಅಂತ ನೋಡುವುದಾದರೆ ಚಾಮರಾಜಪೇಟೆಯ ಶಾಸಕ ಸಾಮಾನ್ಯ ಜನರ ಪಾಲಿಗೆ ಜೋಕರ್‌ನಂತೆ ಕಾಣುವ ಮುಸ್ಲಿಂ ಸಮುದಾಯದ ಪಾಲಿಗೆ ನಾನೇ ನಾಯಕ ಎಂಬಂತೆ ಬಿಂಬಿಸಿಕೊಳ್ಳುವ ಜಮೀರ್ ಅಹಮ್ಮದ್ ಖಾನ್ ಕಂಡ ಕಂಡ ವೇದಿಕೆಯಲ್ಲಿ ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಅಂತ ಘಂಟಾಘೋಷವಾಗಿ ಹೇಳತೊಡಗಿದ್ದಾರೆ. ಅದರಲ್ಲೂ ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳಲ್ಲಿ ಪದೇ ಪದೇ ಅದನ್ನೇ ಹೇಳಿ ಉಳಿದ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗುವಂತೆ ಮಾಡುತ್ತಿದ್ದಾರೆ. ಇದು ಕೆಪಿಸಿಸಿ ಅಧ್ಯಕ್ಷರಾದ ನಾನೇ ಮುಂದಿನ ಸಿಎಂ ಎಂದು ಜಾತಕ, ಜ್ಯೋತಿಷ್ಯ, ಪೂಜೆ-ಪುನಸ್ಕಾರ ಅಂತ ನಂಬಿಕೊಂಡಿರುವ ಡಿ.ಕೆ.ಶಿವಕುಮಾರ್‍ಗೆ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಕುಮಾರಸ್ವಾಮಿ ಹಾಗೂ ಜಮೀರ್ ನಡುವಿನ ಗಲಾಟೆಯಲ್ಲಿ ಜಮೀರ್‍ಗೆ ಎಚ್ಚರಿಕೆಯಿಂದ ಮಾತನಾಡು ಎಂದ ಡಿಕೆಶಿ ಸಿಎಂ ಹೇಳಿಕೆಗೂ ಬ್ರೇಕ್ ಹಾಕಬೇಕು ಎಂದಿದ್ದಾರೆ. ಆದರೆ ಮತ್ತೆ ಹಠಕ್ಕೆ ಬಿದ್ದವರಂತೆ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದಿರುವ ಜಮೀರ್ ಅಹಮ್ಮದ್ ಖಾನ್, ರಾಜ್ಯದ ಜನ ಒಪ್ಪಿದ ಮೇಲೆ ಕಾಂಗ್ರೆಸ್ ಹೈಕಮಾಂಡ್ ಸಹಾ ಒಪ್ಪಬೇಕು ಎಂದು ಕಾಂಗ್ರೆಸ್ ಹೈಕಮಾಂಡ್‍ಗೂ ಸಲಹೆ ನೀಡಿ ಹೈಕಮಾಂಡ್ ಕೂಡ ಸಿದ್ದರಾಮಯ್ಯಗೆ ಜೀ ಹುಜೂರ್ ಅನ್ನಲೇಬೇಕು ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ. ಈ ಬೆಳವಣಿಗೆಯ ನಂತರ ತಮ್ಮ ಎಚ್ಚರಿಕೆಗೂ ಜಮೀರ್ ಬಗ್ಗುತ್ತಿಲ್ಲ ಎಂಬುದನ್ನ ಅರಿತ ಡಿಕೆಶಿ ಜಮೀರ್ ಹಾಗೆಲ್ಲಾ ಮಾತನಾಡಬಾರದು, ಅವರಿಗೆ ಈಗಾಗಲೇ ಎಚ್ಚರಿಕೆ ಕೊಟ್ಟಿದ್ದೇನೆ ಎಂದಿದ್ದಾರೆ. ಅದಕ್ಕೂ ಸೆಡ್ಡು ಹೊಡೆದ ಜಮೀರ್ ನನಗೆ ಯಾರೂ ಎಚ್ಚರಿಕೆ ಕೊಟ್ಟಿಲ್ಲ. ನಾನು ಅಥವಾ ಡಿ.ಕೆ.ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಆಯ್ಕೆ ಮಾಡಲ್ಲ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎನ್ನುವ ಮೂಲಕ ಡಿ.ಕೆ.ಶಿವಕುಮಾರ್‍ಗೆ ನೇರವಾಗಿ ಸೆಡ್ಡು ಹೊಡೆದಿದ್ದಾರೆ. ಅಲ್ಲಿಗೆ ಒಂದಂತೂ ಸ್ಪಷ್ಟವಾಗಿದೆ ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವಿನ ಬೂದಿ ಮುಚ್ಚಿದ ಕೆಂಡಕ್ಕೆ ಜಮೀರ್ ಅಹಮ್ಮದ್ ಕೆರಾಸಿನ್ ಹಾಕುವ ಕೆಲಸವನ್ನಂತೂ ಮಾಡಿ ಮುಗಿಸಿದ್ದಾರೆ.

ಇನ್ನು ಶಾಸಕರ ಆಟಾಟೋಪಕ್ಕೆ ಬ್ರೇಕ್ ಹಾಕಲು ನನ್ನಿಂದ ಸಾಧ್ಯವಿಲ್ಲ ಎಂಬುದನ್ನು ಅರಿತ ಡಿ.ಕೆ.ಶಿವಕುಮಾರ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಮೂಲಕ ಎಚ್ಚರಿಕೆ ಕೊಡಿಸುವ ಕೆಲಸ ಮಾಡಿದ್ದಾರೆ. ಆದರೆ ಸುರ್ಜೆವಾಲ ಎಚ್ಚರಿಕೆ ಪಕ್ಷದಲ್ಲಿ ಶಿಸ್ತು ಮೂಡಿಸುವ ಬದಲು ಶಿಸ್ತು ಹಳಿ ತಪ್ಪುವಂತೆ ಮಾಡಿದೆ. ಜಮೀರ್ ಮಾತಿಗೆ ಶಾಸಕರಾದ ಭೀಮಾ ನಾಯಕ್, ಕಂಪ್ಲಿ ಗಣೇಶ, ತುಕಾರಾಂ, ಹರಿಹರ ಶಾಸಕ ರಾಮಪ್ಪ, ಅಖಂಡ ಶ್ರೀನಿವಾಸ ಮೂರ್ತಿ ಹೀಗೆ ಸಾಲು ಸಾಲು ಶಾಸಕರು ಧ್ವನಿಗೂಡಿಸಿ ಸಿದ್ದರಾಮಯ್ಯ ಮುಂದಿನ ಸಿಎಂ ಎನ್ನುವ ಮೂಲಕ ವಿವಾದದ ಬೆಂಕಿ ಮತ್ತಷ್ಟು ಹೆಚ್ಚುವಂತೆ ಮಾಡಿದ್ದಾರೆ. ಯಾರು ಏನೇ ಹೇಳಿದರೂ ಈ ಬೆಳವಣಿಗೆಯ ಹಿಂದೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರ ಪ್ರತಿಷ್ಟೆಯೇ ಈ ಬೆಳವಣಿಗೆಯ ಮೂಲ ಅನ್ನೋದರಲ್ಲಿ ಅನುಮಾನವೇ ಇಲ್ಲ. ಕೆಪಿಸಿಸಿ ಅಧ್ಯಕ್ಷರಾಗುತ್ತಿದ್ದಂತೆ ಡಿ.ಕೆ.ಶಿವಕುಮಾರ್ ನಾನೇ ಮುಂದಿನ ಮುಖ್ಯಮಂತ್ರಿ ಅನ್ನೋ ಭ್ರಮೆಗೆ ಬಿದ್ದಂತೆ ಕಾಣುತ್ತಿದೆ. ಪಕ್ಷದ ಮಟ್ಟದ ಕೆಲವು ನಿರ್ಧಾರದ ಜೊತೆಗೆ ತಮ್ಮ ಬೆಂಬಲಿಗರ ಮೂಲಕ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಸಿಕೊಂಡು ಖುಷಿ ಪಡತೊಡಗಿದ್ದಾರೆ. ಅವರ ಹಾವ-ಭಾವ ಪಕ್ಷದ ವೇದಿಕೆಯಲ್ಲಿನ ವರ್ತನೆ ಎಲ್ಲವು ಅಂತದೊಂದು ಸಂದೇಶ ರವಾನಿಸುವ ಶೈಲಿಯಲ್ಲೇ ಇರುವುದಂತೂ ಸುಳ್ಳಲ್ಲ. ಇಷ್ಟು ದಿನ ಮೌನವಾಗಿದ್ದ ಸಿದ್ದರಾಮಯ್ಯ ತಮ್ಮ ಬೆಂಬಲಿಗರ ಮೂಲಕ ಡಿ.ಕೆ.ಶಿವಕುಮಾರ್ ಸಿಎಂ ಕನಸಿನ ಸುಖ ನಿದ್ರೆಗೆ ತಣ್ಣೀರೆರಚಿ ನಗತೊಡಗಿದ್ದಾರೆ. ಕನಕಪುರದ ಬಂಡೆ, ಆನೆ ಅಂತೆಲ್ಲಾ ಬೆಂಬಲಿಗರಿಂದ ಬಹುಪರಾಕ್ ಹಾಕಿಸಿಕೊಳ್ಳುತ್ತಿರುವ ಡಿ.ಕೆ.ಶಿವಕುಮಾರ್‍ಗೆ ಬಂಡೆ ಬುಡದಲ್ಲಿ ಡೈನಾಮೈಟ್, ಆನೆ ಕಣ್ಮುಂದೆ ಖೆಡ್ಡಾ ಎರಡೂ ಒಟ್ಟೊಟ್ಟಿಗೆ ಕಂಡಂತಾಗಿದೆ ಈ ಬೆಳವಣಿಗೆ.

ಇನ್ನು ರಾಜ್ಯ ರಾಜಕಾರಣದ ಸದ್ಯದ ಸ್ಥಿತಿ ಬಿಜೆಪಿಯ ಅಂತಃಕಲಹ ಕಾಂಗ್ರೆಸ್ ದೋಣಿಯನ್ನು 2023ರಲ್ಲಿ ಸುಲಭವಾಗಿ ದಡ ತಲುಪಿಸಬಹುದು ಎಂಬ ನಿರೀಕ್ಷೆಯಲ್ಲಿ ಸಿದ್ದರಾಮಯ್ಯ ಇದ್ದಂತಿದೆ. ಜೊತೆಗೆ ತಮ್ಮ ಹಳೆಯ ಅಸ್ತ್ರವಾದ ಅಹಿಂದಕ್ಕೆ ಸ್ವಲ್ಪ ಸಾಣೆ ಹಿಡಿದು ಸರಿಪಡಿಸಿಕೊಂಡರೆ ನಾನೇ ಮತ್ತೊಮ್ಮೆ ಮುಖ್ಯಮಂತ್ರಿ ಅನ್ನೋ ಕಲರ್ ಫುಲ್ ಕನಸು ಸಿದ್ದರಾಮಯ್ಯರನ್ನು ಬಿಟ್ಟೂಬಿಡದೇ ಕಾಡುತ್ತಿರಬಹುದು.

ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯರ ರಾಜಕೀಯ ಲೆಕ್ಕಾಚಾರ ಏನೇ ಇರಬಹುದು. ಆದರೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ 2 ವರ್ಷ ಸಮಯಾವಕಾಶ ಇದೆ. ಈಗಿನ ರಾಜಕೀಯ ಪರಿಸ್ಥಿತಿ ಆಗಲೂ ಇರುತ್ತೆ ಎನ್ನಲು ಸಾಧ್ಯವಿಲ್ಲ. ಸಿಎಂ ಕುರ್ಚಿಯ ಆಸೆ ಇಬ್ಬರಿಗೂ ಇರಬಹುದು. ಆದರೆ ಕಾಂಗ್ರೆಸ್ ಕಣ್ಣು ಮುಚ್ಚಿಕೊಂಡು ಅಧಿಕಾರಕ್ಕೆ ಬರುತ್ತೆ ಎನ್ನಲು ಬಿಜೆಪಿ ಹಾಗೂ ಜೆಡಿಎಸ್ ನಾಯಕರೇನೂ ಸನ್ಯಾಸ ಸ್ವೀಕರಿಸಿ ಕಾಡಿಗೆ ಹೊರಟಿಲ್ಲ. ದಿನ ದಿನಕ್ಕೂ ಬದಲಾಗುವ ರಾಜಕೀಯ ಲೆಕ್ಕಾಚಾರದಲ್ಲಿ ಎರಡು ವರ್ಷದ ನಂತರದ ಸ್ಥಿತಿ ಏನೋ..? ಹೇಗೋ..? ಬಲ್ಲವರಾರು..?

ಮೇಲ್ನೋಟಕ್ಕೆ ಇದು ಡಿ.ಕೆ.ಶಿವಕುಮಾರ್ ಏಕಚಕ್ರಾಧಿಪತ್ಯ ವರ್ತನೆಗೆ ಸಿದ್ದರಾಮಯ್ಯ ಕೊಟ್ಟ ಸಾಲಿಡ್ ಟಕ್ಕರ್ ಎಂಬಂತೆ ಕಾಣುತ್ತಿದೆ. ಇದರ ಮಧ್ಯೆ ಕಳೆದ ಕೆಲವು ದಶಕಗಳಿಂದ ಸೂಟು ಬೂಟು ಹೊಲಿಸಿಕೊಂಡು ಸಿಎಂ ಸ್ಥಾನದ ಕನವರಿಕೆಯಲ್ಲಿರುವ ಡಜನ್‍ಗೂ ಹೆಚ್ಚು ನಾಯಕರು ಕಾಂಗ್ರೆಸ್ ಪಾಳಯದಲ್ಲಿದ್ದಾರೆ. ಯಾವಾಗ ಯಾರ ಮಾತು ಯಾವ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತೆ ಅನ್ನೋದು ಸ್ವತಃ ಕಾಂಗ್ರೆಸ್ ಹೈಕಮಾಂಡ್‍ಗೇ ಗೊತ್ತಿದ್ದಂತಿಲ್ಲ. ಇಷ್ಟೆಲ್ಲಾ ಗೊತ್ತಿದ್ದರೂ ಸಿದ್ದರಾಮಯ್ಯ ಹಾಗೂ ಡಿಕೆಶಿ ಸಿಎಂ ಕುರ್ಚಿಯ ಹಗಲು ಕನಸಿನ ಬೆನ್ನು ಬಿದ್ದಂತೆ ಕಾಣುತ್ತಿದೆ. 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಸಿಎಂ ಸ್ಥಾನಕ್ಕೆ ಪೈಪೋಟಿ ಆರಂಭವಾದರೆ, ಬೇರೆಯವರ ಹೆಸರು ರೇಸ್‍ಗೆ ಬರದಿದ್ದರೆ, ಕಾಂಗ್ರೆಸ್ ಹೈಕಮಾಂಡ್ ಲಕೋಟೆಯಿಂದ ಬೇರೆ ಹೆಸರು ಬರದಿದ್ದರೆ ಹೀಗೆ ಹಲವಾರು ರೆ.. ಗಳನ್ನ ದಾಟಿಕೊಂಡು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಕುರ್ಚಿ ಸಮೀಪ ಬರಬೇಕು. ಆದರೂ ಯಾವುದಕ್ಕೂ ಇರಲಿ ಎಂದು ತಮ್ಮ ತಮ್ಮ ಹಕ್ಕು ಪ್ರತಿಪಾದಿಸುವ ಮೇಲಾಟ ನಡೆಸಿದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸಲು ಜಗಳ ಆಡಿಕೊಂಡು ರಾಜ್ಯದ ಜನರಿಗೆ ಭರ್ತಿ ಮನೋರಂಜನೆಯಂತೂ ನೀಡಿದ್ದಾರೆ. ಕಾಂಗ್ರೆಸ್‍ನ ವೀಕ್ ಹೈಕಮಾಂಡ್ ಮುಂದಿನ ದಿನಗಳಲ್ಲಿ ಇದನ್ನು ಹೇಗೆ ನಿಭಾಯಿಸುತ್ತೆ ಎಂಬುದರ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ಭವಿಷ್ಯ ನಿರ್ಧಾರ ಆಗಲಿದೆ.

[ಈ ಬರಹದಲ್ಲಿ ಪ್ರಕಟವಾಗಿರುವ ಅಭಿಪ್ರಾಯಗಳು ಲೇಖಕರದ್ದು]

Click to comment

Leave a Reply

Your email address will not be published. Required fields are marked *

Advertisement