Tuesday, 22nd October 2019

ಗೆದ್ದದ್ದು ಕಾಂಗ್ರೆಸ್ಸಲ್ಲ, ಹಣದ ಹೊಳೆ: ಜಗದೀಶ್ ಶೆಟ್ಟರ್ ವಿಶ್ಲೇಷಣೆ

ಉಡುಪಿ: ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಹಣದ ಹೊಳೆ ಗೆದ್ದಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಇಂದು ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿಕೊಟ್ಟ ಅವರು ಪೇಜಾವರ ಶ್ರೀಗಳ ಜೊತೆ ಮಾತುಕತೆ ನಡೆಸಿ ಶ್ರೀಕೃಷ್ಣನ ದರ್ಶನ ಪಡೆದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಹೇಗಾದ್ರು ಮಾಡಿ ಗೆಲ್ಲಲೇ ಬೇಕು ಎಂದು ಅಂತ ಮುಖ್ಯಮಂತ್ರಿಗಳು ನಿರ್ಧಾರ ಮಾಡಿದ್ದರು. ಅದರಂತೆ ಹಣದ ಹೊಳೆಯನ್ನು ಹರಿಸಿ ಗೆದ್ದಿದ್ದಾರೆ ಎಂದು ಶೆಟ್ಟರ್ ಹೇಳಿದರು.

2018ರ ಚುನಾವಣೆಗೆ ಈ ರಿಸಲ್ಟ್ ದಿಕ್ಸೂಚಿಯಲ್ಲ. ಸ್ವತಃ ಸಿಎಂ ಚುನಾವಣೆಗೆ ಮುನ್ನ ಇದು ದಿಕ್ಸೂಚಿಯಲ್ಲ ಅಂತ ಹೇಳುತ್ತಿದ್ದರು. ಆದ್ರೆ ಈಗ ಯೂ ಟರ್ನ್ ತೆಗೆದುಕೊಂಡಿದ್ದಾರೆ. ಇದೇ ದಿಕ್ಸೂಚಿ ಅನ್ನುತ್ತಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಮುಂದೆಯೂ ಚುನಾವಣೆ ಎದುರಿಸ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರೋದ್ರಿಂದ ಕಾಂಗ್ರೆಸ್ ಗೆದ್ದಿದೆ. ಮುಂದಿನ ಮಹಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸುತ್ತದೆ ಎಂದು ತಿಳಿಸಿದರು.

ಶ್ರೀನಿವಾಸಪ್ರಸಾದ್ ಅವರು ಹಿರಿಯ ನಾಯಕರು, ಅವರಿಗೆ ಪಕ್ಷದಲ್ಲಿ ಸೂಕ್ತಸ್ಥಾನಮಾನ ಕೊಡುತ್ತೇವೆ. ಈಗ ಹೇಗೆ ನೋಡಿಕೊಳ್ಳುತ್ತೇವೋ ಅದರಂತೆಯೇ ಮುಂದೆಯೂ ಗೌರವದಿಂದ ನೋಡಿಕೊಳ್ಳುತ್ತೇವೆ. ಗೌರವಯುತವಾದ ಸ್ಥಾನಮಾನವನ್ನು ಕೊಡುತ್ತೇವೆ ಎಂದು ಭರವಸೆ ನೀಡಿದರು.

 

 

Leave a Reply

Your email address will not be published. Required fields are marked *