Connect with us

Bengaluru City

ಕರಾವಳಿಯ ಮೂರು ಜಿಲ್ಲೆ ಬಿಟ್ಟು ಉಳಿದ ಕಡೆ ನಾಳೆ ಕರ್ನಾಟಕ ಬಂದ್‌

Published

on

ಬೆಂಗಳೂರು: ರೈತ ವಿರೋಧಿ ಮಸೂದೆಗಳನ್ನು ಖಂಡಿಸಿ ನಾಳೆ ನಡೆಯಲಿರುವ ಕರ್ನಾಟಕ ಬಂದ್ ಗೆ ರಾಜ್ಯದ ಕರಾವಳಿ ಭಾಗ ಹೊರತು ಪಡಿಸಿ ಎಲ್ಲ ಕಡೆ ಬೆಂಬಲ ವ್ಯಕ್ತವಾಗಿದೆ. ಈ ಜಿಲ್ಲೆಗಳಲ್ಲಿ ಕೆಲವು ರೈತ, ಕಾರ್ಮಿಕ, ಎಡಪಕ್ಷಗಳ ಸಂಘಟನೆಗಳು ಬಂದ್‌ ಬೆಂಬಲಿಸಿ ಪ್ರತಿಭಟನಾ ಸಭೆ ನಡೆಸಲಿದೆ.

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಸಂಘಟನೆಗಳು ಬಂದ್‌ ಬೆಂಬಲಿಸಿ ಪ್ರತಿಭಟನಾ ಸಭೆಗಳನ್ನು ನಡೆಸಲಿವೆ. ಯಾವುದೇ ಸಂಘಟನೆ ಬಂದ್‌ಗೆ ಕರೆ ನೀಡಿಲ್ಲ. ಹೀಗಾಗಿ ಎಂದಿನಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪರ ವಹಿವಾಟು, ವಾಹನ ಸಂಚಾರ ನಡೆಯಲಿದೆ.

ಉಡುಪಿ: ಸಂಘಟನೆಗಳು ಉಡುಪಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲಿವೆ. ರಸ್ತೆ ಸಂಚಾರ ಸ್ಥಗಿತಗೊಂಡರೆ ಮಾತ್ರ ಬಂದ್‌ ಆಗಲಿದೆ. ಭಾನುವಾರ ಮಧ್ಯಾಹ್ನದವರೆಗೆ ಸಂಚಾರ ಸ್ಥಗಿತಗೊಳಿಸುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.

ಉತ್ತರ ಕನ್ನಡ: ಶಿರಸಿ, ಸಿದ್ದಾಪುರ, ಮುಂಡುಗೋಡ, ಹಳಿಯಾಲ, ದಾಂಡೇಲಿ, ಜೋಯಿಡಾ ತಾಲೂಕಿನಲ್ಲಿ ಬಂದ್‌ ನಡೆಸುವುದಾಗಿ ರೈತಪರ ಸಂಘಟನೆಗಳು ಹೇಳಿವೆ. ಆದರೆ ಕರಾವಳಿ ಭಾಗದಲ್ಲಿ ಬಂದ್‌ಗೆ ಬೆಂಬಲ ಸಿಕ್ಕಿಲ್ಲ.

ಬಂದ್‌ಗೆ ಯಾರೆಲ್ಲ ಬೆಂಬಲ?
ಐಕ್ಯ ಹೋರಾಟ ಸಮಿತಿ, ರೈತ ಹೋರಾಟ ಸಂಘಟನೆಗಳು, ಕನ್ನಡಪರ ಹೋರಾಟ ಸಂಘಟನೆಗಳು, ನಾರಾಯಣಗೌಡರ ಕರವೇ ಸಂಘಟನೆ, ಪ್ರವೀಣ್ ಶೆಟ್ಟಿ ಕರವೇ ಬಣ, 25ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು, 35 ರೈತ ಪರ ಸಂಘಟನೆಗಳು ದಲಿತ ಸಂಘಟನೆಗಳು, ಉತ್ತರ ಕರ್ನಾಟಕ, ಮುಂಬೈ ಕರ್ನಾಟಕದ ವಿವಿಧ ಸಂಘಟನೆಗಳು, ಮಹಾದಾಯಿ ಹೋರಾಟ ಸಂಘಟನೆ, ಓಲಾ-ಊಬರ್-ಕ್ಯಾಬ್ ಅಸೋಸಿಯೇಶನ್, ಆಟೋ-ಟ್ಯಾಕ್ಸಿ ಅಸೋಸಿಯೇಶನ್, ಆಟೋ ಮಿತ್ರ, ಪೀಸ್ ಆಟೋ ಸಂಘಟನೆ, ಸಾರಿಗೆ ಕಾರ್ಮಿಕರ ಒಕ್ಕೂಟ, ರಾಜ್ಯ ಬೀದಿಬದಿ ವ್ಯಾಪಾರ ಸಂಘ, ರಾಜ್ಯ ಲಾರಿ ಮಾಲೀಕರ ಅಸೋಸಿಯೇಶನ್ ಖಾಸಗಿ ಟೂರಿಸ್ಟ್ ಮತ್ತು ಟ್ಯಾಕ್ಸಿ ಮಾಲೀಕರ ಸಂಘ

ಕೆಎಸ್‍ಆರ್‌ಟಿಸಿ ಬಸ್‍ಗಳಿಗೆ ತಡೆ:
ನಾಳೆ ಬಂದ್ ಇದ್ದರೂ ರಸ್ತೆಗೆ ಇಳಿಸಿದರೆ ಕೆಎಸ್‍ಆರ್‌ಟಿಸಿ ಬಸ್‍ಗಳನ್ನು ತಡೆಯಲು ನಿರ್ಧಾರ ಮಾಡಲಾಗಿದೆ. ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಬಸ್‍ಗಳಿಗೆ ತಡೆಗೆ ನಿರ್ಧರಿಸಿದ ಹಿನ್ನೆಲೆಯಲ್ಲಿ ಬಸ್ ಓಡಾಟದಲ್ಲಿ ವ್ಯತ್ಯಯ ನಿಶ್ಚಿತವಾಗುವ ಸಾಧ್ಯತೆಯಿದೆ.

ಬೆಂಗಳೂರು ಬಂದ್:
ಬೆಂಗಳೂರಲ್ಲಿ ನಾಳೆ ಬೃಹತ್ ಪ್ರತಿಭಟನೆ ನಡೆಯಲಿರುವ ಕಾರಣ ಬಿಎಂಟಿಸಿ ಬಸ್‍ಗಳಿಗೂ ಪ್ರತಿಭಟನಕಾರರ ತಡೆ ಒಡ್ಡಲಿದ್ದಾರೆ. ಬಿಎಂಟಿಸಿ ಬಸ್ ಓಡಾಟವಿದ್ದರೂ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.

ಮೆಟ್ರೋ ತೀರ್ಮಾನವಾಗಿಲ್ಲ:
ನಾಳೆ ನಮ್ಮ ಮೆಟ್ರೋ ರೈಲು ಜೊತೆ ಭಾರತೀಯ ರೈಲ್ವೇಯ ವಿಶೇಷ ರೈಲುಗಳ ಓಡಾಟವೂ ಇರಲಿದೆ. ಆದರೆ ರೈಲು ತಡೆದು ಪ್ರತಿಭಟಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾಳಿನ ಬಂದ್ ಪರಿಸ್ಥಿತಿ ನೋಡಿಕೊಂಡು ಮೆಟ್ರೋ ಓಡಾಟ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ. ಇದನ್ನೂ ಓದಿ: ನಾಳೆಯ ಹೋರಾಟ ಯಾವ ಸ್ವರೂಪ ಬೇಕಾದ್ರೂ ಪಡೀಬೋದು: ಕರವೇ ಅಧ್ಯಕ್ಷ ಎಚ್ಚರಿಕೆ

ಸರ್ಕಾರಿ ಕಚೇರಿಗೆ ಓಪನ್‌:
ನಾಳೆ ಸರ್ಕಾರಿ ಕಚೇರಿಗಳು ಬಂದ್ ಆಗುವುದಿಲ್ಲ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಕಚೇರಿಗಳು ಕೆಲಸ ನಿರ್ವಹಿಸಲಿದೆ. ಬ್ಯಾಂಕ್, ಅಂಚೆ ಕಚೇರಿ ಒಳಗೊಂಡಂತೆ ನಾಳೆ ಸರ್ಕಾರಿ ಸೇವೆ ಲಭ್ಯವಿರಲಿದೆ.

ಹೋಟೆಲ್‌ ಇರುತ್ತೆ:
ನಾಳೆ ಕರ್ನಾಟಕ ಬಂದ್ ನಡೆದರೂ ಹೋಟೆಲ್ ಬಂದ್ ಆಗುವುದಿಲ್ಲ. ರಾಜ್ಯಾದ್ಯಂತ ಹೋಟೆಲ್‍ಗಳು ತೆರೆದಿರುತ್ತವೆ ಎಂದು ಪಬ್ಲಿಕ್ ಟಿವಿಗೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *