Connect with us

Bengaluru City

ಶೇಮ್..ಶೇಮ್..ಶೇಮ್ – ರೋಚಕ ಘಟ್ಟದ್ದಲ್ಲಿ ‘ಡ್ರಾಮಾ ಸೀನಿಯರ್ಸ್’ ಎಪಿಸೋಡ್

Published

on

ಬೆಂಗಳೂರು: ಅಧಿಕಾರಕ್ಕಾಗಿ ಇಂತಹ ನೀಚ ರಾಜಕಾರಣವನ್ನು ಬಹುಶ: ಯಾರೂ ಕೂಡ ನೋಡಲು ಸಾಧ್ಯವಿಲ್ಲವೇನೋ? ಕರ್ನಾಟಕದ ರಾಜಕೀಯ ಇವತ್ತು ಕೂಡ ಹರಾಜು ಆಗಿದೆ. ಬಹುಮತವಿಲ್ಲದಿದ್ದರೂ, ಇವತ್ತು ವಿಶ್ವಾಸಮತ ಸಾಬೀತುಪಡಿಸುವ ಬದಲು ದೋಸ್ತಿ ಸರ್ಕಾರ ಮತ್ತೆ ಅದೇ ವಿಳಂಬ ಮಾಡಿದೆ. ಕಾಲಹರಣ ಮಾಡೋದರ ಮೂಲಕ ಮತ್ತೊಂದು ದಿನವನ್ನು ತಳ್ಳುತ್ತಿದೆ.

ಸೋಮವಾರ ವಿಶ್ವಾಸಮತ ಪ್ರಕ್ರಿಯೆಯನ್ನು ಮುಗಿಸಿಯೇ ಬಿಡೋಣ ಎಂದಿದ್ದ ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು ತಪ್ಪಿದ್ದಾರೆ. ಇವರಿಬ್ಬರನ್ನು ನಂಬಿಕೊಂಡು ಮಾತು ಕೊಟ್ಟಿದ್ದ ಸ್ಪೀಕರ್ ರಮೇಶ್‍ಕುಮಾರ್ ವಚನಭ್ರಷ್ಟರಾಗುವ ಸಾಧ್ಯತೆಯಿದೆ. ಒಂದು ಕಡೆ ಸುಪ್ರೀಂಕೋರ್ಟ್, ಇನ್ನೊಂದು ಕಡೆ ರಾಜ್ಯಪಾಲರು, ಮತ್ತೊಂದು ಕಡೆ ಪ್ರತಿಪಕ್ಷಗಳು ಹಾಗೂ ರಾಜ್ಯದ ಜನತೆಯ ಮುಂದೆ ಸ್ಪೀಕರ್ ತಲೆ ತಗ್ಗಿಸಿದ್ದಾರೆ.

ಇವತ್ತು ಸಂಜೆಯೊಳಗೆ ವಿಶ್ವಾಸಮತ ಪ್ರಕ್ರಿಯೆ ಮುಗಿಸಿಬಿಡೋಣ ಅಂತ ಬೆಳಗ್ಗೆಯೇ ಸ್ಪೀಕರ್ ಹೇಳಿದ್ದರೂ, ದೋಸ್ತಿ ನಾಯಕರು ಡೋಂಟ್ ಕೇರ್ ಅಂದಿದ್ದಾರೆ. ವಿಪ್ ಗೊಂದಲ ಬಗ್ಗೆ ಸುಪ್ರೀಂಕೋರ್ಟಿಗೆ ಸಲ್ಲಿಸಿರೋ ಅರ್ಜಿಯ ತೀರ್ಪಿಗೆ ಕಾದಿರೋ ದೋಸ್ತಿಗಳು, ವಿಶ್ವಾಸಮತ ಸಾಬೀತುಪಡಿಸೋ ಬದಲಾಗಿ, ದಿನವಿಡೀ ನಾಟಕವಾಡಿದ್ದಾರೆ.

ನಾಟಕ 1
ಬೆಳಗ್ಗೆ 11:30 – ವಿಶ್ವಾಸಮತದ ಭರವಸೆ
ಇವತ್ತು ಕಲಾಪ ಆರಂಭವಾದಾಗಲೇ ರಾಜಭವನದ ವಿಶೇಷ ಅಧಿಕಾರಿಗಳು ಕಲಾಪ ವೀಕ್ಷಣೆಗೆ ಆಗಮಿಸಿದ್ರು. ಓಡೋಡಿ ಬಂದ ಸ್ಪೀಕರ್ ಅವರು, ಸಿಎಂ, ಮಾಧುಸ್ವಾಮಿ ಸೇರಿದಂತೆ ಅನೇಕರು ಕಚೇರಿಗೆ ಬಂದಿದ್ರು. ಹಾಗಾಗಿ, ತಡವಾಯ್ತು ಅಂತ ಕ್ಷಮೆಯಾಚಿಸಿದ್ರು. ಸದನಕ್ಕೆ ಗೌರವ ಕೊಡುವುದು ನಮ್ಮ ಕರ್ತವ್ಯ. ಅಪವಾದ ಹೊತ್ತುಕೊಳ್ಳಲು ನಾನು ಸಿದ್ಧನಿಲ್ಲ. ಕಾನೂನಿನಂತೆ ನಡೆಯುತ್ತೇನೆ. ಈ ರೀತಿಯ ಪರಿಸ್ಥಿತಿ ನಿರ್ಮಾಣವಾದರೆ ಸದನದ ಗೌರವ ಏನಾಗಬೇಕು ಎಂದು ರಮೇಶ್ ಕುಮಾರ್ ಕಳವಳ ವ್ಯಕ್ತಪಡಿಸಿದರು. ಬಿಜೆಪಿಯ ಮಾಧುಸ್ವಾಮಿ ಎದ್ದುನಿಂತು ಮಧ್ಯಾಹ್ನದ ಒಳಗೆ ಮುಗಿಸಬೇಕು. ಹೊರಗಡೆ ಒಳ್ಳೆ ಹೆಸರು ಬರುವ ಸ್ಥಿತಿ ಇಲ್ಲ ಬಿಡಿ. ನಾವು ಯಾರಾ ಮಾತಿಗೂ ಅಡ್ಡಿ ಮಾಡಿಲ್ಲ, ಮಾಡಲ್ಲ. ಎಷ್ಟು ಜನ ಬೇಕಾದ್ರೂ ಮಾತಾಡ್ಲಿ. ಇವತ್ತು ಮುಗಿಸುವ ಕೃಪೆ ತೋರಿ ಅಂದ್ರು. ಸ್ಪೀಕರ್ ಪ್ರತಿಕ್ರಿಯಿಸಿ, ವಿಶ್ವಾಸಮತ ಪ್ರಕ್ರಿಯೇ ಇಂದೇ ಮುಗಿಸಿಕೊಡುತ್ತೇನೆ ಎಂದರು.

ನಾಟಕ 2
ಮಧ್ಯಾಹ್ನ 12:00 – ಆಪರೇಷನ್ ಕಮಲ
ವಿಶ್ವಾಸ ಮತ ಯಾಚನೆ ವೇಳೆ ಸಂಸದೀಯ ವ್ಯವಹಾರ ಸಚಿವ ಕೃಷ್ಣಬೈರೇಗೌಡ, ಆಪರೇಷನ್ ಕಮಲದ ಬಗ್ಗೆ ಗಂಭೀರವಾಗಿ ಆರೋಪ ಮಾಡಿದ್ರು. ಮತಕ್ಕೆ ಹಾಕೋದಕ್ಕೆ ಬಿಜೆಪಿಗರು ಒತ್ತಾಯ ಮಾಡುತ್ತಿದ್ದಾರೆ. ಶಾಸಕರ ರಾಜೀನಾಮೆಗೂ ಬಿಜೆಪಿಗೆ ಸಂಬಂಧ ಇಲ್ಲ ಅಂತಿದ್ದಾರೆ. ನಮ್ಮ ಮುಂದಿನ ಹಾದಿ, ವಿಶ್ವಾಸ ಮತ ಯಾಚನೆಯೊಂದೆ ಅನ್ನೋ ರೀತಿ ಬಿಜೆಪಿ ಹಾಗೂ ಕೆಲ ಸುದ್ದಿ ಮಾಧ್ಯಮಗಳು ಬಿಂಬಿಸುತ್ತಿವೆ ಅಂದ್ರು.

ಆಪರೇಷನ್ ಕಮಲದ ಮಾತು ಪ್ರಸ್ತಾಪಿಸಿ. ಬಿ.ಸಿ ಪಾಟೀಲ್ ಜೊತೆ ಬಿಜೆಪಿ ಮುಖಂಡರ ಆಡಿಯೋ ಸಂಭಾಷಣೆಯ ಬಗ್ಗೆ ಪ್ರಸ್ತಾಪಿಸಿದ್ರು. ಅಲ್ಲದೆ, ವಿಳಂಬ ಮಾಡೋದು ಅನೈತಿಕ, ಶಾಸಕರನ್ನು ಖರೀದಿ ಮಾಡೋದು ನೈತಿಕನಾ ಎಂದು ಪ್ರಶ್ನಿಸಿ ಕೃಷ್ಣಬೈರೇಗೌಡ ಗುಡುಗಿದ್ರು. ಸಂತೋಷ್‍ಗೂ ಬಿಜೆಪಿಗೂ ಸಂಬಂಧವಿಲ್ವಾ? ಒಬ್ಬ ಶಾಸಕರು ವಿಮಾನ ಹತ್ತುತ್ತಿದ್ದಾರೆ. ಅದರಲ್ಲಿ ಬಿಜೆಪಿ ಮುಖಂಡರು ಇದ್ದಾರೆ. ಇನ್ನೊಂದೆಡೆ ಅತೃಪ್ತ ಶಾಸಕರನ್ನು ಮುಂಬೈಗೆ ತೆರಳಿ ಅಶೋಕ್, ಬೋಪಯ್ಯ ಭೇಟಿಯಾಗ್ತಾರೆ ಎಂದರು.

ಪ್ರಿಯಾಂಕ ಖರ್ಗೆ ಮಧ್ಯಪ್ರವೇಶಿಸಿ, ಇದು ಬಿಜೆಪಿ ಮುಖಂಡರು ಇರೋದು ಮಾತ್ರವಲ್ಲ ಸ್ಪೆಷಲ್ ಪ್ಲೈಟ್‍ಗೂ ಬಿಜೆಪಿಗೂ ಬಾರಿ ಸಂಬಂಧ ಇದೆ ಅಂದ್ರು. ಹೆಸರು ಹೇಳಿ ಅಂತ ಸ್ಪೀಕರ್ ಹೇಳಿದ್ರು. ಆಗ ಎದ್ದು ನಿಂತ ಮಾಧುಸ್ವಾಮಿ, ರಾಜೀನಾಮೆ ಕೊಡೋಕೆ ಹೋದವರನ್ನು ಕೊರಳಪಟ್ಟಿ ಹಿಡ್ಕೊಂಡು ಹೋದವರು ಎಷ್ಟೆಲ್ಲ ಮಾತಾನಾಡ್ತಾರೆ. ಪರಪ್ಪನ ಅಗ್ರಹಾರದಲ್ಲಿ ಇರೋರು ಹರಿಶ್ಚಂದ್ರನ ಕಥೆ ಹೇಳ್ದಂಗೆ ಆಯ್ತು ಅಂತ ಟಾಂಗ್‍ಕೊಟ್ರು. ಜಾಧವ್ ರಾಜೀನಾಮೆ ಬಗ್ಗೆ ಕೃಷ್ಣಬೈರೇಗೌಡ ಪ್ರಸ್ತಾಪಿಸಿದಾಗ, ಯಡಿಯೂರಪ್ಪ ಗರಂ ಆದ್ರು. ಅವ್ರು ಈ ಸದನದ ಸದಸ್ಯರೇನ್ರೀ? ಇದನ್ನು ಯಾಕೆ ಪ್ರಸ್ತಾಪ ಮಾಡ್ತೀರಾ? ಖರ್ಗೆನಾ ಸೋಲಿಸಿ ಆಯ್ತಲ್ಲ ಅಂದ್ರು. ಇದಕ್ಕೆ ಟಾಂಗ್ ಕೊಟ್ಟ ಕೃಷ್ಣಬೈರೇಗೌಡ, ನಿಮಗೆ ಬೇಕಾದ ಹಾಗೆ ಮಾತಾನಾಡೋಕೆ ನಾನಿರೋದು ಅಲ್ಲ. ನಮಗೆ ಅಗತ್ಯವಿದೆ. ನಿಮಗೆ ಅಗತ್ಯವಿಲ್ಲದೇ ಇರಬಹುದು ಅಂದ್ರು.

ನಾಟಕ 3

ಮಧ್ಯಾಹ್ನ 1:00 – ಐಎಂಎ ಬಿರಿಯಾನಿ
ಸಚಿವ ಕೃಷ್ಣಬೈರೇಗೌಡ ಎಷ್ಟರಮಟ್ಟಿಗೆ ಭಾಷಣಕ್ಕೆ ಸಿದ್ಧಗೊಂಡಿದ್ದರು ಅಂದ್ರೆ, ಇಡೀ ಕಲಾಪವನ್ನೇ ವಿಷಯಾಂತರ ಮಾಡಿಬಿಟ್ಟ್ರು. ಆಪರೇಷನ್ ಕಮಲದ ಜೊತೆಗೆ ಐಎಂಎ ವಿಷಯವನ್ನು ಎಳೆದು ತಂದ್ರು. ಮಧ್ಯಾಹ್ನ 12 ಗಂಟೆಯಿಂದ ಎರಡೂವರೆ ತಾಸು ಅಂದ್ರೆ 2.20ವರೆಗೆ ಸುದೀರ್ಘ ಭಾಷಣ ನಡೆಸಿದ್ರು. ಆಪರೇಷನ್ ಕಮಲದ ಬಗ್ಗೆ ಮಾತನಾಡುತ್ತಾ, ಕೆಲವರು ಐಎಂಎ ಕೇಸಲ್ಲಿ ರಾಜೀನಾಮೆ ಕೊಟ್ಟವರು ಬಿಜೆಪಿ ಜೊತೆ ಸಂಪರ್ಕದಲ್ಲಿ ಇದ್ದಾರೆ ಅಂದ್ರು. ಇದಕ್ಕೆ ಸಿ.ಟಿ.ರವಿ, ಮೊದಲು ಕೆಲವರು ಅವರೊಂದಿಗೆ ಓಡಾಡುತ್ತಾ ಬಿರಿಯಾನಿ ತಿಂದಿದ್ದಾರೆ. ಅಂಥವರನ್ನು ನೇಣಿಗೆ ಹಾಕಿಸಬೇಕು ಅಂದ್ರು. ಇದಕ್ಕೆ ಸ್ಪಷ್ಟನೆ ಕೊಟ್ಟ ಸಿಎಂ, ಐಎಂಎ ಪ್ರಕರಣದಲ್ಲಿ ಸಿ.ಟಿ ರವಿ ಬಿರಿಯಾನಿ ಕಥೆಯನ್ನು ನನಗೆ ಲಿಂಕ್ ಮಾಡಿದ್ದಾರೆ ಅನ್ನೋದು ಗೊತ್ತು. ರಂಜಾನ್ ಹಬ್ಬದ ಸಂದರ್ಭದಲ್ಲಿ ಇಫ್ತಿಯಾರ್‍ಗೆ ಕರೆದುಕೊಂಡು ಹೋದ್ರು. ನಂಗೆ ಆತನ ಪರಿಚಯವಿಲ್ಲ. ಒಬ್ರು ಶಾಸಕರು ಕರೆದುಕೊಂಡು ಹೋದ್ರು. ನಾನು ಹಾರ್ಟ್ ಆಪರೇಷನ್ ಆಗಿರೋದ್ರಿಂದ ನಾನ್ ವೆಜ್ ಮುಟ್ಟಲ್ಲ ಅಂದ್ರು. ಅಲ್ಲಿಗೆ ದಿನದರ್ಧ ಕಲಾಪವೂ ಅಂತ್ಯ ಆಯ್ತು.

ನಾಟಕ 4
ಮಧ್ಯಾಹ್ನ 3:30 – ಕಲಾಪ ಮುಂದೂಡಿಕೆಗೆ ಒತ್ತಡ
ಇವೆಲ್ಲದರ ಮಧ್ಯೆ, ಮಧ್ಯಾಹ್ನ 3.30ಕ್ಕೆ ಕಲಾಪ ಆರಂಭವಾಗುವ ಮುನ್ನ ಸ್ಪೀಕರ್ ರಮೇಶ್‍ಕುಮಾರ್ ಅವರನ್ನು ಮುಖ್ಯಮಂತ್ರಿ ಹಾಗೂ ಸಿದ್ದರಾಮಯ್ಯ ಇಬ್ಬರೂ ಭೇಟಿಯಾದ್ರು. ನಾಳೆ ಸುಪ್ರೀಂಕೋರ್ಟ್ ಆದೇಶ ಬರುತ್ತಿರುವ ಹಿನ್ನೆಲೆಯಲ್ಲಿ 2 ದಿನದ ಮಟ್ಟಿಗೆ ಕಲಾಪ ಮುಂದೂಡುವಂತೆ ಕೋರಿದ್ರು. ಇದಕ್ಕೆ ಸ್ಪೀಕರ್ ಒಪ್ಪದೇ ಇವತ್ತೇ ವಿಶ್ವಾಸಮತ ನಡೆಸುವುದಾಗಿಯೂ ಬಿಗಿಪಟ್ಟು ಹಿಡಿದರು. ಸ್ಪೀಕರ್ ಮನವೊಲಿಕೆ ಸಾಧ್ಯವಾಗದಿದ್ದರಿಂದ ಸದನದಿಂದ ಹೊರಗುಳಿದು, ಕಚೇರಿಯಲ್ಲೇ ಸಿಎಂ ಉಳಿದರು. ಕಲಾಪ ಮುಂದುವರಿಸಿದ ಸ್ಪೀಕರ್, ವಿಶ್ವಾಸಮತಕ್ಕೂ ಸಿದ್ಧತೆ ಕೂಡ ನಡೆಸಿದ್ರು. ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿಯಿಂದ ಮಾಹಿತಿ ಕೂಡ ಪಡೆದರು.

ನಾಟಕ 5
ಸಂಜೆ 6:20 ಸ್ಪೀಕರ್ ರಾಜೀನಾಮೆ ಬೆದರಿಕೆ?
ಈ ಬೆಳವಣಿಗೆಗಳ ನಡುವೆಯೇ ನಿರೀಕ್ಷೆಯಂತೆ ದೋಸ್ತಿಗಳ ಶಾಸಕರು ಗದ್ದಲ-ಕೋಲಾಹಲ ಎಬ್ಬಿಸಿದ್ರು. ನಮಗೆ ಮಾತನಾಡಲು ಅವಕಾಶ ಕೊಡಬೇಕು. ಇನ್ನೆರಡು ದಿನ ವಿಶ್ವಾಸಮತ ಯಾಚನೆಗೆ ಅವಕಾಶ ಕೊಡಬಾರದೆಂದು ಪ್ರತಿಭಟನೆ ಕೂಡ ನಡೆಸಿದ್ರು. ಸಿಎಂ ಅನುಪಸ್ಥಿತಿಯಲ್ಲಿ ಧರಣಿ ನಡೆಸಿದ್ರು. ಇದರಿಂದ ಬೇಸರಗೊಂಡ ಸ್ಪೀಕರ್ ಕಲಾಪವನ್ನು 10 ನಿಮಿಷ ಮುಂದೂಡಿ ಕಚೇರಿಗೆ ತೆರಳಿದ್ರು. ಇವತ್ತು ವಿಶ್ವಾಸಮತ ಆಗದಿದ್ದರೆ, 9 ಗಂಟೆಯೊಳಗೆ ನಾನೇ ಸ್ಪೀಕರ್ ರಾಜೀನಾಮೆ ಕೊಡ್ತೀನಿ ಅಂತ ಅಸಮಾಧಾನ ವ್ಯಕ್ತಪಡಿಸಿದ್ರು. ನನ್ನ ವೃತ್ತಿ ಜೀವನದ ಅತಿದೊಡ್ಡ ಕಳಂಕವಿದು ಅಂತ ಬೇಸರಿಸಿಕೊಂಡ್ರು. ಸ್ಪೀಕರ್ ಕೊಠಡಿಗೆ ತೆರಳಿ ಸಿಎಂ, ಸಿದ್ದರಾಮಯ್ಯ ಹಾಗೂ ಸಚಿವರು ಮನವೊಲಿಕೆಗೆ ಯತ್ನಿಸಿದ್ರು.