Connect with us

Bengaluru City

ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ ಜಿಮ್‌ ಉದ್ಘಾಟನೆ

Published

on

ಬೆಂಗಳೂರು: ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ 2021ನೇ ದಿನಚರಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಡುಗಡೆ ಮಾಡಿ ಶತಮಾನೋತ್ಸವ ಭವನಕ್ಕೆ ಶಂಕುಸ್ಥಾಪನೆ ಹಾಗೂ ಜಿಮ್ ಉದ್ಘಾಟನೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ ವತಿಯಿಂದ ಶತಮಾನೋತ್ಸವ ಭವನದ ಶಂಕುಸ್ಥಾಪನೆ, ಜಿಮ್ ಉದ್ಘಾಟನೆಯನ್ನು ಅತ್ಯಂತ ಸಂತೋಷದಿಂದ ನೆರವೇರಿಸಿದ್ದೇನೆ. ಕರ್ನಾಟಕ ಆಡಳಿತ ಸೇವೆ ಪ್ರಾರಂಭವಾಗಿ 100 ವರ್ಷಗಳು ಸಂದಿರುವ ಸಂದರ್ಭದಲ್ಲಿ ಸಂಘದ ವತಿಯಿಂದ ಶತಮಾನೋತ್ಸವ ಭವನದ ನಿರ್ಮಾಣಕ್ಕೆ ಮುಂದಾಗಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ ಎಂದರು.

ರಾಜ್ಯದ ಆಡಳಿತ ಹಾಗೂ ಅಭಿವೃದ್ಧಿಯಲ್ಲಿ ಕೆಎಎಸ್ ಅಧಿಕಾರಿಗಳು ತಮ್ಮ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಸರ್ಕಾರದ ಆಡಳಿತ ಯಂತ್ರವು ಸುಗಮವಾಗಿ ನಿರ್ವಹಿಸಲು ಹಾಗೂ ಸರ್ಕಾರದ ಕಾರ್ಯಕ್ರಮಗಳು ಜನರಿಗೆ ತಲುಪುವಲ್ಲಿ ಅಧಿಕಾರಿಗಳು ಮಹತ್ವದ ಪಾತ್ರವನ್ನು ವಹಿಸುತ್ತಾರೆ ಎಂದು ಹೇಳಿದರು.

‘Sound Body Carries Sound Mind’ ಎಂಬ ಉಕ್ತಿಯಂತೆ ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಜೀ ಯವರು ಫಿಟ್‌ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿರುವುದು ನಮಗೆಲ್ಲ ತಿಳಿದಿರುವ ವಿಷಯವಾಗಿದೆ. ಒತ್ತಡ ನಿವಾರಣೆ, ದೈಹಿಕ ಕ್ಷಮತೆ ಕಾಯ್ದುಕೊಳ್ಳಲು ಹಾಗೂ ಆರೋಗ್ಯ ವೃದ್ಧಿಗೆ ಇಂದು ಉದ್ಘಾಟನೆಗೊಂಡಿರುವ ಜಿಮ್ ಸಹಕಾರಿಯಾಗಲಿದೆ. ಸರ್ಕಾರದ ಜನಪರ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಅಧಿಕಾರಿಗಳು ಮಾಡಬೇಕು ಎಂದರು.

ಜನರು ತಮ್ಮ ದೂರು, ಸಂಕಷ್ಟಗಳನ್ನು ಹೊತ್ತು ಬಂದಾಗ ಸಕಾಲದಲ್ಲಿ ಸ್ಪಂದಿಸಿ ಪರಿಹಾರ ಸೂಚಿಸಿದರೆ, ಸರ್ಕಾರ ಜನಪರವಾಗಿದೆ ಎಂಬ ಸದಭಿಪ್ರಾಯ ಮೂಡುತ್ತದೆ. ಆ ಜವಾಬ್ದಾರಿ ನಿಮ್ಮ ಮೇಲಿದೆ. ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ರೀತಿಯ ತೊಡಕು ಎದುರಾದರೂ ನಿಮ್ಮ ಬೆಂಬಲಕ್ಕೆ ಸರ್ಕಾರ ಇರುತ್ತದೆ. ನಿಮ್ಮ ಕರ್ತವ್ಯವನ್ನು ನಿರ್ವಂಚನೆಯಿಂದ ನಿಷ್ಠೆಯಿಂದ ನಿರ್ವಹಿಸಿ ಎಂದು ತಿಳಿಸಿದರು.

ರಾಜ್ಯವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವ ದಿಸೆಯಲ್ಲಿ ತಾವೆಲ್ಲರೂ ಕಾರ್ಯೋನ್ಮುಖರಾಗಿ. ನೂತನವಾಗಿ ನೇಮಕಗೊಂಡಿರುವ ಕೆಎಎಸ್ ಅಧಿಕಾರಿಗಳು, ನಿಷ್ಠೆ, ಜವಾಬ್ದಾರಿ ಹಾಗೂ ದಕ್ಷ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿ ರಾಜ್ಯಕ್ಕೆ ಕೀರ್ತಿ ತನ್ನಿ ಎಂದು ಹಾರೈಸುತ್ತೇನೆ. 2021ರ ವರ್ಷ ಎಲ್ಲರಿಗೂ ಶುಭಪ್ರದವಾಗಿರಲಿ ಹಾಗೂ ಶತಮಾನೋತ್ಸವ ಆಚರಣೆ ಅರ್ಥಪೂರ್ಣವಾಗಿರಲಿ ಎಂದು ಆಶಿಸುತ್ತೇನೆ ಎಂದು ಶುಭ ಹಾರೈಸಿದರು.

ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ , ಸಿ.ಆ.ಸು.ಇ ಕಾರ್ಯದರ್ಶಿ ಪಿ.ಹೇಮಲತಾ, ಕೆ.ಎ. ಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಬಿ.ಎನ್.ವರಪ್ರಸಾದ್ ರೆಡ್ಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

www.publictv.in