Connect with us

Dakshina Kannada

ಬಂಟ್ವಾಳದಲ್ಲಿ ರಮಾನಾಥ್ ರೈ-ರಾಜೇಶ್ ನಡುವೆ ಸ್ಪರ್ಧೆ ಅಲ್ಲ, ಅಲ್ಲಾ-ರಾಮನ ನಡುವೆ ಸಮರ: ಶಾಸಕ ಸುನಿಲ್ ಕುಮಾರ್

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಅರಣ್ಯ ಸಚಿವ ರಮಾನಾಥ ರೈ ಹಾಗೂ ರಾಜೇಶ್ ನಾಯ್ಕ್ ನಡುವೆ ಸ್ಫರ್ಧೆ ಅಲ್ಲ. ಈ ಚುನಾವಣೆ ಅಲ್ಲಾ ಮತ್ತು ರಾಮನ ನಡುವೆ ನಡೆಯುವ ಸ್ಪರ್ಧೆ ಎಂದು ಕಾರ್ಕಳದ ಬಿಜೆಪಿ ಶಾಸಕ ಸುನಿಲ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸೋಮವಾರ ಕಲ್ಲಡ್ಕದಲ್ಲಿ ನಡೆದ ಬಿಜೆಪಿ ಗ್ರಾಮ ನಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಕ್ಷೇತ್ರದಿಂದ 6 ಬಾರಿ ಶಾಸಕರಾಗಿ ಆಯ್ಕೆಯಾಗಿರೋವವರು ಹೇಳ್ತಾರೆ ನಾನು ಅಲ್ಲಾಹುವಿನ ಕೃಪೆಯಿಂದ ಗೆದ್ದೆ ಅಂತ. ಹೀಗಾಗಿ ನರೆದಿರುವ ಬಂಧುಗಳಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ಮುಂಬರುವ ಚುನಾವಣೆ ರಾಜೇಶ್ ನಾಯ್ಕ್ ಮತ್ತು ರಮಾನಾಥ ರೈ ನಡುವೆ ಅಲ್ಲ. ಬದಲಾಗಿ ಅಲ್ಲಾಹು ಮತ್ತು ರಾಮನ ನಡುವೆ ನಡೆಯುವ ಚುನಾವಣೆಯಾಗಿದೆ. ಹೀಗಾಗಿ ಮತ್ತೆ ಮತ್ತೆ ಅಲ್ಲಾಹುವನ್ನ್ನು ಗೆಲ್ಲಿಸ್ತೀರೋ? ಅಥವಾ ರಾಮನನ್ನು ಪ್ರೀತಿಸುವಂತಹ ವ್ಯಕ್ತಿಯನ್ನು ಗೆಲ್ಲಿಸ್ತಿರೋ? ಎಂಬುದನ್ನು ಬಂಟ್ವಾಳದ ಜನತೆ ತೀರ್ಮಾನಿಸಬೇಕು ಅಂತ ರಮಾನಾಥ ರೈ ವಿರುದ್ಧ ಶಾಸಕರು ಪರೋಕ್ಷವಾಗಿ ಟಾಂಗ್ ನೀಡಿದ್ರು.

ಒಟ್ಟಿನಲ್ಲಿ ಇದು ಬಿಜೆಪಿ-ಕಾಂಗ್ರೆಸ್ ಚುನಾವಣೆಯ ವಿಷಯ ಅಲ್ಲ ಇದು. 6 ಬಾರಿ ಗೆದ್ದಿರುವ ವ್ಯಕ್ತಿ ಹಿಂದೂಗಳ ಮತದಿಂದಲ್ಲ ಅಂತ ಹೇಳುತ್ತಾರಾದ್ರೆ, ಇದು ನಮಗೆ ಮರ್ಯಾದೆಯ ಪ್ರಶ್ನೆಯಾಗುತ್ತದೆ. ಇದು ಬಂಟ್ವಾಳದ ಪ್ರಶ್ನೆಯಲ್ಲ. ಬದಲಾಗಿ ಯಾರನ್ನು ಗೆಲ್ಲಿಸಬೇಕೆಂಬುದು ಇಡೀ ಜಿಲ್ಲೆಯ ಪ್ರತಿಷ್ಠೆಯ ಪ್ರಶ್ನೆಯಾಗಿದೆ ಅಂತ ಹೇಳಿದ್ರು.

ಚುನಾವಣೆ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ನನ್ನ ಹೆಸರಿನಲ್ಲಿ ರಾಮ ಇದ್ದಾನೆ. ನಾನು ಹಿಂದೂ ಅಂತ. ಹೌದು. ನಿಮ್ಮ ಹೆಸರಿನಲ್ಲಿ ರಾಮ ಇರಬಹುದು. ಆದ್ರೆ ನಿಮ್ಮ ಮನಸ್ಸು, ಭಾಷೆಯಲ್ಲಿ ರಾವಣ ಇದ್ದಾನೆ. ನಿಮ್ಮ ನಡವಳಿಕೆಯಲ್ಲಿ ಟಿಪ್ಪು ಇದ್ದಾನೆ ಎಂಬುದನ್ನು ನಾವಿಂದು ನೆನಪಿಟ್ಟುಕೊಳ್ಳಬೇಕಾಗಿದೆ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಚುನಾವಣೆಯನ್ನು ಬಂಟ್ವಾಳದ ಜನ ಪ್ರತಿಷ್ಠೆಯಾಗಿ ತೆಗೆದುಕೊಳ್ಳೋಣ ಅಂತ ಕಿವಿ ಮಾತು ಹೇಳಿದ್ರು.

ರೈ ಹೇಳಿದ್ದೇನು?: ಮಂಗಳೂರಿನ ಪುರಭವನದಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವರು, ಇವತ್ತು ಅಲ್ಲಾಹುನ ಕೃಪೆಯಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಆರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಇದಕ್ಕೆ ಮುಸ್ಲಿಂ ಸಮುದಾಯದ ಜಾತ್ಯಾತೀತ ನಿಲುವು ಕಾರಣವಾಗಿದೆ. ಜಾತಿಯವನೊಬ್ಬ ನಿಂತಿದ್ದಾನೆ ಅಂತ ಹೇಳಿ 10-15 ಸಾವಿರ ಮತ ಹಾಕ್ತಿದ್ರೆ ರಮಾನಾಥ ರೈ ಯಾವಗ್ಲೋ ಮಾಜಿಯಾಗ್ತಿದ್ದ. ಬ್ಯಾರಿ ಭಾಷೆ ಮಾತಾನಾಡುವಂತಹ ಜನರ ಒಂದು ಜಾತ್ಯಾತೀತ ನಿಲುವನ್ನು ಎಲ್ಲರೂ ಮೆಚ್ಚಬೇಕಾಗಿದೆ. ಜಾತಿ, ಧರ್ಮದ ಪರಿಧಿಯನ್ನು ಮೀರಿ ರಮಾನಾಥ ರೈಯನ್ನು ವಿಧಾನಸಭೆಗೆ ಆಯ್ಕೆ ಮಾಡುವಂತಹ ಕೆಲಸವನ್ನು ತಾವು ಮಾಡಿದ್ದೀರಿ. ಈ ನಿಮ್ಮ ಋಣವನ್ನು ನಾನು ಜನ್ಮ ಜನ್ಮಾಂತರ ಕಾಲಕ್ಕೂ ಮರೆಯಲು ಸಾಧ್ಯವಿಲ್ಲ ಅಂತ ಅವರು ಹೇಳಿದ್ದರು.

https://www.youtube.com/watch?v=0feDGe5–0Y

https://www.youtube.com/watch?v=PJ8h1JAxwDk