Monday, 11th November 2019

Recent News

ಹಿರಿಯ ಸಾಹಿತಿ ಕೋ. ಚೆನ್ನಬಸಪ್ಪ ನಿಧನ

ಬೆಂಗಳೂರು: ಹಿರಿಯ ಸಾಹಿತಿ ಕೋ. ಚೆನ್ನಬಸಪ್ಪ(97) ನಿಧನರಾಗಿದ್ದಾರೆ.

ಚೆನ್ನಬಸಪ್ಪ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಉಸಿರಾಟದ ಸಮಸ್ಯೆಯಿಂದ ನಿಧನರಾಗಿದ್ದಾರೆ. ಚೆನ್ನಬಸಪ್ಪ ಅವರ ತವರೂರು ಬಳ್ಳಾರಿಯ ಕೂಡ್ಲಿಗಿಯ ಆಲೂರು ಆಗಿದ್ದು, 1922 ಫೆ.21 ರಂದು ಜನಿಸಿದ್ದರು.

ಚೆನ್ನಬಸಪ್ಪ ವಿದ್ಯಾರ್ಥಿ ಆಗಿದ್ದಾಗಲೇ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಜೈಲಿಗೆ ಹೋಗಿದ್ದರು. ಕಾನೂನು ಪದವಿ ಓದಿದ ಚೆನ್ನಬಸಪ್ಪ ಅವರಿಗೆ ಸಾಹಿತ್ಯ ಅಂದರೆ ಅಚ್ಚುಮೆಚ್ಚು. 2015ರಲ್ಲಿ ವಿಜಯಪುರದಲ್ಲಿ ನಡೆದ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇದಲ್ಲದೇ ಅವರು ನಿವೃತ್ತ ಜಿಲ್ಲಾ ನ್ಯಾಯಧೀಶ ಕೂಡ ಆಗಿದ್ದರು.

ಚೆನ್ನಬಸಪ್ಪ ಅವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪ್ರಶಸ್ತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ ದೊರೆತಿದೆ. ಶ್ರೀರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ ಸೇರಿದಂತೆ ನಮ್ಮೂರ ದೀಪ, ಗಾಯಕನಿಲ್ಲ ಸಂಗೀತ, ಗಡಿಪಾರು ಹಲವಾರು ಕಥಾ ಸಂಕಲನಗಳು ಬರೆದಿದ್ದಾರೆ. ಇದಲ್ಲದೇ ನೊಗದ ನೇಣು, ಬೇಡಿ ಕಳಚಿತು- ದೇಶ ಒಡೆಯಿತು, ಹಿಂದಿರುಗಿ ಬರಲಿಲ್ಲ, ರಕ್ತತರ್ಪಣ ಮುಂದಾದ ಕಾದಂಬರಿಗಳನ್ನು ಕೂಡ ಬರೆದಿದ್ದಾರೆ.

ಸಿದ್ದರಾಮಯ್ಯ ಸಂತಾಪ:
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವಿಟ್ಟರಿನಲ್ಲಿ ಚೆನ್ನಬಸಪ್ಪ ಅವರ ಫೋಟೋ ಹಾಕಿ, “ಕರ್ನಾಟಕ ಏಕೀಕರಣದ ಹೋರಾಟಗಾರ. ಕನ್ನಡ ಪ್ರಜ್ಞೆಯನ್ನು ಉಸಿರಾಗಿಸಿಕೊಂಡ ಹಿರಿಜೀವ. ಕುವೆಂಪು ಅವರ ಪರಮಾಪ್ತ ಶಿಷ್ಯ, ವೈಯಕ್ತಿಕವಾಗಿ ಸದಾ ನನಗೆ ಮಾರ್ಗದರ್ಶನ ನೀಡುತ್ತಿದ್ದ ಹಿತೈಷಿ ಕೋ.ಚೆನ್ನಬಸಪ್ಪನವರ ಅಗಲಿಕೆಯ ಸುದ್ದಿ ಆಘಾತವನ್ನುಂಟು ಮಾಡಿದೆ. ಆ ಹಿರಿಯ ಚೇತನಕ್ಕೆ ಶ್ರದ್ಧಾಂಜಲಿ” ಎಂದು ಟ್ವೀಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *