Thursday, 14th November 2019

Recent News

ಈ ಬಾರಿಯ ನವೆಂಬರ್ ಸಂಭ್ರಮಕ್ಕೆ ರಂಗು ತುಂಬಿಸುತ್ತಾಳೆ ರಂಗನಾಯಕಿ!

ಬೆಂಗಳೂರು: ದಯಾಳ್ ಪದ್ಮನಾಭನ್ ನಿರ್ದೇಶನದ ರಂಗನಾಯಕಿ ಅಭೂತಪೂರ್ವ ನಿರೀಕ್ಷೆಗಳೊಂದಿಗೆ ನವೆಂಬರ್ ಒಂದರಂದು ತೆರೆಗಾಣಲು ತಯಾರಾಗಿದೆ. ದಯಾಳ್ ಚಿತ್ರಗಳೆಂದ ಮೇಲೆ ಪ್ರೇಕ್ಷಕರಲ್ಲೊಂದು ಕುತೂಹಲ ಇದ್ದೇ ಇರುತ್ತದೆ. ಅದಕ್ಕೆ ಕಾರಣವಾಗಿರೋದು ಇದುವರೆಗೂ ಅವರು ಸೋಕುತ್ತಾ ಬಂದಿರುವ ಭಿನ್ನ ಕಥಾ ಹಂದರ. ಯಾರಿಗೇ ಆದರೂ ಇದು ಆರ್ಟ್ ಮೂವಿಗೆ ಮಾತ್ರವೇ ಹೊಂದಿಕೊಳ್ಳುವ ಕಥೆ ಎಂಬುದಕ್ಕೂ ಅವರು ಕಮರ್ಶಿಯಲ್ ಟಚ್ ಕೊಟ್ಟು ಬಿಡುತ್ತಾರೆ. ಈ ಮಾತಿಗೆ ಆ ಕರಾಳ ರಾತ್ರಿ, ತ್ರಯಂಬಕಂನಂಥಾ ಒಂದಷ್ಟು ಉದಾಹರಣೆಗಳಿವೆ. ದಯಾಳ್ ಅವರ ಈವರೆಗಿನ ಸಿನಿಮಾ ಯಾನದಲ್ಲಿಯೇ ಇದೀಗ ಬಿಡುಗಡೆಗೆ ರೆಡಿಯಾಗಿರುವ ರಂಗನಾಯಕಿ ಒಂದು ವಿಶಿಷ್ಟ ಚಿತ್ರ. ಈ ಮಾತಿಗೆ ಇತ್ತೀಚೆಗೆ ಲಾಂಚ್ ಆಗಿದ್ದ ಟ್ರೇಲರ್ ಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಹೀಗೆ ಸಕಾರಾತ್ಮಕ ವಾತಾವರಣದ ನಡುವೆ ಇದೇ ನವೆಂಬರ್ ಒಂದರಂದು ರಂಗನಾಯಕಿ ರಂಗ ಪ್ರವೇಶ ಮಾಡಲಿದ್ದಾಳೆ.

ಈ ಹಿಂದೆ ಅಟೆಂಪ್ಟ್ ಟು ಮರ್ಡರ್ ಎಂಬ ಚಿತ್ರ ನಿರ್ಮಾಣ ಮಾಡಿದ್ದ ನಾರಾಯಣ್ ರಂಗನಾಯಕಿಯನ್ನು ಬಲು ಶ್ರದ್ಧೆಯಿಂದಲೇ ಬಂಡವಾಳ ಹೂಡಿ ಪೊರೆದಿದ್ದಾರೆ. ತಾವು ನಿರ್ಮಾಣ ಮಾಡುವ ಚಿತ್ರಗಳ ಸಂಖ್ಯೆಗಿಂತಲೂ ಅವೆಲ್ಲವೂ ಅಪರೂಪದವುಗಳಾಗಿರ ಬೇಕೆಂಬುದೇ ನಾರಾಯಣ್ ಅವರ ಇಂಗಿತ. ಅದಕ್ಕೆ ತಕ್ಕುದಾದ ಕಥೆಯಾದ್ದರಿಂದಲೇ ಅವರು ರಂಗನಾಯಕಿಯನ್ನು ಬಲು ಆಸ್ಥೆಯಿಂದಲೇ ನಿರ್ಮಾಣ ಮಾಡಿ ಪೊರೆದಿದ್ದಾರೆ. ಅಷ್ಟಕ್ಕೂ ಈ ಕಥೆ ತುಂಬಾನೇ ವಿಶೇಷವಾದದ್ದು ಮತ್ತು ಸೂಕ್ಷ್ಮವಾದದ್ದೆಂಬ ವಿಚಾರ ಈಗಾಗಲೇ ಪ್ರೇಕ್ಷಕರಿಗೆಲ್ಲ ತಿಳಿದು ಹೋಗಿದೆ.

ಅತ್ಯಾಚಾರದಂಥಾ ಪೈಶಾಚಿಕ ಘಟನಾವಳಿಗಳು ಆಗಾಗ ಸುದ್ದಿಯಾಗುತ್ತಿರುತ್ತವೆ. ಆದರೆ ಅಂಥಾ ವಿಕೃತಿಗೆ ಬಲಿಯಾದ ಹೆಣ್ಣು ಜೀವಗಳು ಈ ಸಮಾಜವನ್ನು ಎದುರಿಸೋದು ಸಾಮಾನ್ಯವಾದ ಸಂಗತಿಯಲ್ಲ. ಹಾಗೆ ಅತ್ಯಾಚಾರಕ್ಕೀಡಾದ ಹೆಣ್ಣಿನ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಹಾಗಂಥಾ ಇದರ ಕಥೆ ಇಂಥಾ ನೊಂದ ಜೀವಗಳತ್ತ ಸಿಂಪಥಿ ಹರಿಸೋವಷ್ಟಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಆ ಸಂಕಟವೇನೆಂಬುದನ್ನು ಜನರತ್ತ ದಾಟಿಸುತ್ತಲೇ ಆ ಬಗ್ಗೆ ಸಮಾಜದಲ್ಲೊಂದು ಜಾಗೃತಿ ಮೂಡಿಸೋ ಸನ್ನಿವೇಶಗಳೂ ಇಲ್ಲಿವೆ. ಇಂಥಾ ವಿಶೇಷತೆಗಳು ಇಲ್ಲದೇ ಹೋಗಿದ್ದರೆ ಈ ಚಿತ್ರ ಗೋವಾ ಫಿಲಂ ಫೆಸ್ಟಿವಲ್‍ಗೆ ಆಯ್ಕೆಯಾಗಲು ಸಾಧ್ಯವಾಗುತ್ತಿರಲಿಲ್ಲ.

ಈ ಚಿತ್ರದಲ್ಲಿ ನಾಗಕನ್ನಿಕೆ ಖ್ಯಾತಿಯ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿದ್ದಾರೆ. ಅದಿತಿ ಬಹಳಷ್ಟು ಇಷ್ಟಪಟ್ಟು ಒಪ್ಪಿಕೊಂಡಿರೋ ಚಿತ್ರವಿದು. ಅವರಿಗಿಲ್ಲಿ ಸಿಕ್ಕಿರೋದು ಸವಾಲಿನ ಪಾತ್ರ. ಅತ್ಯಾಚಾರದಂಥಾ ಬೀಭತ್ಸ ಕೃತ್ಯಕ್ಕೆ ಬಲಿಯಾದ ಹೆಣ್ಣೊಬ್ಬಳ ಮರ್ಮರವನ್ನು ಆವಾಹಿಸಿಕೊಂಡು ಅದಿತಿ ನಟಿಸಿದ್ದಾರಂತೆ. ಅದರ ಝಲಕ್ಕುಗಳು ಈಗಾಗಲೇ ಟ್ರೇಲರ್ ಮೂಲಕವೇ ಜಾಹೀರಾಗಿವೆ. ಒಟ್ಟಾರೆಯಾಗಿ ಈ ಸಿನಿಮಾ ಬಗ್ಗೆ ಆರಂಭದಿಂದಲೂ ಜನ ಆಕರ್ಷಿತರಾಗಿದ್ದರು. ಈಗಂತೂ ರಂಗನಾಯಕಿಯನ್ನು ಕಣ್ತುಂಬಿಕೊಳ್ಳುವ ಕಾತರ ಹೆಚ್ಚಾಗಿದೆ. ನವೆಂಬರ್ ಒಂದರಂದು ರಂಗನಾಯಕಿ ಎಲ್ಲರ ಕಣ್ಮುಂದೆ ಪ್ರತ್ಯಕ್ಷವಾಗಲಿದ್ದಾಳೆ.

Leave a Reply

Your email address will not be published. Required fields are marked *