Connect with us

Cinema

ಮಂತ್ರಾಲಯ ಗುರುಗಳಿಂದ ‘ಓ ಮೈ ಲವ್’ ಫಸ್ಟ್ ಲುಕ್ ಬಿಡುಗಡೆ

Published

on

ಸ್ಯಾಂಡಲ್‍ವುಡ್ ಸುಪ್ರೀಂ ಸ್ಟಾರ್ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಚಂದನವಕ್ಕೆ ಹೆಜ್ಜೆ ಇಟ್ಟಿರೋದು ಗೊತ್ತಿರುವ ಸಂಗತಿ. ಮೊದಲ ಸಿನಿಮಾ ಸೀತಾಯಣ ಬಿಡುಗಡೆಗೂ ಮುನ್ನವೇ ಹಲವು ಸಿನಿಮಾ ಆಫರ್ ಗಳು ಅಕ್ಷಿತ್ ಅರಸಿ ಬರುತ್ತಿವೆ. ಸದ್ಯ ಸ್ಮೈಲ್ ಶ್ರೀನು ನಿರ್ದೇಶನದ ‘ಓ ಮೈ ಲವ್’ ಚಿತ್ರದಲ್ಲಿ ಅಕ್ಷಿತ್ ಶಶಿಕುಮಾರ್ ನಾಯಕನಾಗಿ ನಟಿಸುತ್ತಿದ್ದು, ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಮಂತ್ರಾಲಯ ಗುರುಗಳು ‘ಓ ಮೈ ಲವ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ತೂಫಾನ್, ಬಳ್ಳಾರಿ ದರ್ಬಾರ್, 18 ಟು 25 ಸಿನಿಮಾಗಳ ಮೂಲಕ ಯಶಸ್ವಿ ನಿರ್ದೇಶಕರೆನಿಕೊಂಡಿರುವ ಸ್ಮೈಲ್ ಶ್ರೀನು ‘ಓ ಮೈ ಲವ್’ ಚಿತ್ರದ ನಿರ್ದೇಶಕ. ಮೊದಲ ಬಾರಿಗೆ ಲವ್ ಸಬ್ಜೆಕ್ಟ್ ಸಿನಿಮಾವನ್ನು ತೆರೆ ಮೇಲೆ ತರಲು ಹೊರಟಿರೋ ಸ್ಮೈಲ್ ಶ್ರೀನು ರೆಗ್ಯೂಲರ್ ಸ್ಟೈಲ್ ಗಿಂತ ಭಿನ್ನವಾದ ನಿರೂಪಣೆಯನ್ನು ಈ ಚಿತ್ರಕ್ಕಾಗಿ ಹೆಣೆದಿದ್ದಾರೆ. ಲವ್ ಕಹಾನಿ ಜೊತೆ ಫ್ಯಾಮಿಲಿ ಎಂಟಟೈನ್ಮೆಂಟ್ ಎಳೆಯೂ ಚಿತ್ರದಲ್ಲಿರಲಿದೆ.

ಬಿ. ರಾಮಾಂಜಿನಿ ಚಿತ್ರಕ್ಕೆ ಕಥೆ ಬರೆಯೋದರ ಜೊತೆ ಜಿಸಿಬಿ ಪ್ರೊಡಕ್ಷನ್ಸ್ ಮೂಲಕ ಸಿನಿಮಾ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಬಿಗ್ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ‘ಓ ಮೈಲವ್’ ಚಿತ್ರ ಸ್ಟಾರ್ ಕಾಸ್ಟ್, ಸಾಂಗ್ಸ್, ಮೇಕಿಂಗ್ ಎಲ್ಲದರಲ್ಲೂ ಅದ್ದೂರಿತನದಿಂದ ಕೂಡಿರಲಿದೆ ಎಂದು ಚಿತ್ರತಂಡ ತಿಳಿಸಿದೆ.

ಅಕ್ಷಿತ್ ಶಶಿಕುಮಾರ್ ಜೋಡಿಯಾಗಿ ನಟಿ ಕೀರ್ತಿ ಕಲಕೇರಿ ಸ್ಕ್ರೀನ್ ಶೇರ್ ಮಾಡುತ್ತಿದ್ದು, ಚಿತ್ರದ ವಿಲನ್ ರೋಲ್‍ಗಾಗಿ ಮಗಧೀರ ಸಿನಿಮಾ ಖ್ಯಾತಿಯ ದೇವಗಿಲ್ ಅವರನ್ನ ಚಿತ್ರತಂಡ ಕರೆತಂದಿದೆ. ಇಸ್ಮಾರ್ಟ್ ಶಂಕರ್, ಅಲಾ ವೈಕುಂಟಪುರಂಲೋ ಸಿನಿಮಾ ಖ್ಯಾತಿಯ ರಿಯಲ್ ಸತೀಶ್ ಸಾಹಸ ನಿರ್ದೇಶನದಲ್ಲಿ ಚಿತ್ರದ ಆಕ್ಷನ್ ಸೀನ್ ಗಳು ಮೂಡಿಬರಲಿದ್ದು, ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಚರಣ್ ಅರ್ಜುನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಈಗಾಗಲೇ ಪ್ರಿಪ್ರೊಡಕ್ಷನ್ ಕೆಲಸ ಮುಗಿಸಿರೋ ಚಿತ್ರತಂಡ ಸಕ್ರಾಂತಿ ಹಬ್ಬದಂದು ಅದ್ಧೂರಿಯಾಗಿ ಸೆಟ್ಟೇರಲಿದೆ. ಮೊದಲ ಹಂತದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆಯಲಿದ್ದು, ಶಿವ ಕೆ.ನಾಯ್ಡು ಕ್ಯಾಮೆರಾ ಕಣ್ಣಲ್ಲಿ ‘ಓ ಮೈ ಲವ್’ ಸಿನಿಮಾ ಸೆರೆಯಾಗಲಿದೆ.

Click to comment

Leave a Reply

Your email address will not be published. Required fields are marked *

www.publictv.in