ಪ್ರಸ್ಥಕ್ಕೆ ಕಾಯುತ್ತಿರೋ ಬ್ರಹ್ಮಚಾರಿಗೆ ಬರ್ತ್ ಡೇ ಗಿಫ್ಟ್!

ಬೆಂಗಳೂರು: ಅಯೋಗ್ಯ ಎಂಬ ಚಿತ್ರದ ಅದ್ಭುತ ಯಶಸ್ಸಿನ ನಂತರದಲ್ಲಿ ನಟ ನೀನಾಸಂ ಸತೀಶ್ ಅವರ ನಸೀಬು ಬದಲಾಗಿ ಬಿಟ್ಟಿದೆ. ಆ ನಂತರದಲ್ಲಿ ಒಂದರ ಹಿಂದೊಂದರಂತೆ ಚಿತ್ರಗಳು ಅವರನ್ನು ಅರಸಿ ಬರುತ್ತಿವೆ. ಸದ್ಯ ಅವರೊಪ್ಪಿಕೊಂಡಿರೋ ಚಿತ್ರಗಳೆಲ್ಲವೂ ಭಿನ್ನ ಬಗೆಯವುಗಳೇ ಎಂಬುದು ವಿಶೇಷ. ಇದೀಗ ಸತೀಶ್ ಬ್ರಹ್ಮಚಾರಿ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರತಂಡವೀಗ ಹೀರೋ ಬರ್ತ್ ಡೇಗೆ ಗಿಫ್ಟೊಂದನ್ನು ಕೊಡಲು ತಯಾರಾಗಿದೆ!

ಬ್ರಹ್ಮಚಾರಿ ಚಿತ್ರಕ್ಕೆ ಹಂಡ್ರೆಡ್ ಪರ್ಸೆಂಟ್ ವರ್ಜಿನ್ ಎಂಬ ಟ್ಯಾಗ್ ಲೈನ್ ಇದೆ. ಆದರೆ ಇದೀಗ ಬಿಡುಗಡೆಗೊಂಡಿರೋ ಪೋಸ್ಟರಿನಲ್ಲಿ ನೀನಾಸಂ ಸತೀಶ್, ನಾಯಕಿ ಅದಿತಿ ಪ್ರಭುದೇವರೊಂದಿಗೆ ಪ್ರಸ್ಥದ ಮೂಡಿನಲ್ಲಿರೋ ಫೋಟೋ ಅನಾವರಣಗೊಂಡಿದೆ. ಪ್ಯೂರ್ ವರ್ಜಿನ್ ಬ್ರಹ್ಮಚಾರಿಯ ಪ್ರಸ್ಥದ ಮೂಡಿನ ಬಗ್ಗೆ ಪ್ರೇಕ್ಷಕರು ಚಕಿತಗೊಂಡಿದ್ದಾರೆ.

ಹೀಗೆ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಪೋಸ್ಟರ್ ಬಿಡುಗಡೆ ಮಾಡಿರೋ ಚಿತ್ರತಂಡ ನೀನಾಸಂ ಸತೀಶ್ ಅವರಿಗೆ ಬರ್ತ್ ಡೇ ಗಿಫ್ಟ್ ಒಂದನ್ನು ಕೊಡಲು ತಯಾರಾಗಿರೋ ಸೂಚನೆ ನೀಡಿದೆ. ಇದೇ ತಿಂಗಳ ಇಪ್ಪತ್ತರಂದು ಸತೀಶ್ ಅವರ ಹುಟ್ಟುಹಬ್ಬವಿದೆ. ಆ ದಿನವೇ ಬ್ರಹ್ಮಚಾರಿಯದ್ದೊಂದು ಟೀಸರ್ ಬಿಡುಗಡೆಗೊಳಿಸಲು ತೀರ್ಮಾನಿಸಲಾಗಿದೆ. ಈ ಟೀಸರ್ ಹೇಗಿರಬಹುದೆಂಬ ಅಂದಾಜು ನೀಡೋ ಮಿನಿ ಟೀಸರೊಂದು 10ನೇ ತಾರೀಕಿನಂದು ಹೊರ ಬರಲಿದೆಯಂತೆ.

ಬ್ರಹ್ಮಚಾರಿ ಚಿತ್ರ ಈಗಾಗಲೇ ಪೋಸ್ಟರುಗಳ ಮೂಲಕವೇ ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಈ ಮೂಲಕವೇ ಪ್ರೇಕ್ಷಕರನ್ನು ಗೊಂದಲಕ್ಕೆ ತಳ್ಳುತ್ತಾ, ಅದನ್ನೇ ಕ್ಯೂರಿಯಾಸಿಟಿಯಾಗಿ ಮಾರ್ಪಾಟು ಮಾಡೋ ಕಲೆಗಾರಿಕೆಯನ್ನ ಚಿತ್ರತಂಡ ಪ್ರದರ್ಶಿಸುತ್ತಿದೆ. ಸತೀಶ್ ಅಭಿಮಾನಿಗಳಂತೂ ಈ ಸಿನಿಮಾ ಬಗ್ಗೆ ಕಾತರರಾಗಿದ್ದಾರೆ. ಸತೀಶ್ ಬರ್ತ್ ಡೇಯಂದೇ ಅಭಿಮಾನಿಗಳೆಲ್ಲರಿಗೂ ಟೀಸರ್ ಕೊಡುಗೆ ಸಿಗಲಿದೆ.

Leave a Reply

Your email address will not be published. Required fields are marked *