Connect with us

Cinema

ನನ್ನ ಹೆಸರಲ್ಲೇ ಹೀರೋ, ವಿಲನ್ ಇಬ್ಬರೂ ಇದ್ದಾರೆ: ಖ್ಯಾತ ಖಳನಟ ಮುನಿರಾಜು

Published

on

ಖಳನಟನಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಮುನಿರಾಜು ಮೂಲತಃ ರಂಗಭೂಮಿ ಕಲಾವಿದರು. ಚಿತ್ರರಂಗಕ್ಕೆ ಕಾಲಿಟ್ಟು ಎರಡು ದಶಕದ ಸಂಭ್ರಮದಲ್ಲಿರುವ ಇವರು ತಮ್ಮ ಬಣ್ಣದ ಲೋಕದ ಪಯಣವನ್ನು ನಮ್ಮೊಂದಿಗೆ ಮೆಲುಕು ಹಾಕಿದ್ದಾರೆ.

• ಖಳನಟನಾಗಿ ನೀವು ಚಿರಪರಿಚಿತರು ನಿಮ್ಮ ಹಿನ್ನೆಲೆ ಬಗ್ಗೆ ತಿಳಿಸಿ.
ಮೂಲತಃ ನಾನು ಬೆಂಗಳೂರಿನ ಶ್ರೀನಗರ ನಿವಾಸಿ. ನಮ್ಮದು ರೈತಾಪಿ ಕುಟುಂಬ, ಬಿಎ ಓದಿರುವ ನನಗೆ ನಮ್ಮ ತಂದೆ ಕಾಲೇಜಿನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕೆಲಸಕ್ಕೆ ಸೇರಿಸಿದ್ರು. ಈ ಸಂದರ್ಭದಲ್ಲಿ ನಾನು ನಾಟಕಗಳಲ್ಲಿ ಬಣ್ಣ ಹಚ್ಚುತ್ತಿದ್ದರಿಂದ ನನಗೆ ಲ್ಯಾಬ್ ಕೆಲಸಕ್ಕಿಂತ ನಾಟಕದ ಕಡೆಯೇ ಒಲವು ಮೂಡಿತು. ಕೊನೆಗೆ ಕಲೆಯನ್ನೇ ಆಯ್ಕೆ ಮಾಡಿಕೊಂಡು ಕಲಾವಿದನಾಗಿ ಒಂದೊಂದೆ ಹೆಜ್ಜೆ ಇಡಲು ಶುರುಮಾಡಿದೆ. ಇದನ್ನೂ ಓದಿ: ಶಿಕ್ಷಕನಾಗಬೇಕೆಂದು ಹೆದರಿ ನಟನಾದೆ: ಕಿರುತೆರೆ ನಟ ಜಹಂಗೀರ್

• ಅಭಿನಯ ತರಂಗದಲ್ಲಿ ಕಳೆದ ದಿನಗಳ ಬಗ್ಗೆ ಹೇಳಿ?
ನಾಟಕದಲ್ಲಿ ಆಸಕ್ತಿ ಮೂಡಿದ ಮೇಲೆ ಹನುಮಂತನಗರದಲ್ಲಿರುವ ಎ.ಎಸ್.ಮೂರ್ತಿ ಅವರ ಅಭಿನಯ ತರಂಗಕ್ಕೆ ಸೇರಿಕೊಂಡೆ. ಎ.ಎಸ್.ಮೂರ್ತಿ ಅವರೊಂದಿಗಿನ ಒಡನಾಟ, ವ್ಯಕ್ತಿತ್ವದಿಂದ ಅವರಿಗೆ ಬಹಳ ಆತ್ಮೀಯನಾದೆ. ನನಗೆ ಅವರು ನಾಟಕಗಳಲ್ಲಿ ಉತ್ತಮ ಅವಕಾಶಗಳನ್ನು ಕಲ್ಪಿಸಿಕೊಡುತ್ತಿದ್ರು. ಪ್ರತಿ ಪಾತ್ರದಲ್ಲೂ ಉತ್ತಮ ಅಭಿನಯದ ಮೂಲಕ ನನ್ನ ಸಾಮಥ್ರ್ಯವನ್ನು ವೇದಿಕೆ ಮೇಲೆ ತೋರಿಸಲು ಅಭಿನಯ ತರಂಗ ಸಹಕಾರಿಯಾಯ್ತು. ಇಲ್ಲಿದ್ದ ಹಲವು ಹಿರಿಯ ನಟರ ಪ್ರೇರಣೆಯಿಂದ ನಟನೆಗೆ ಸಂಬಂಧಿಸಿ ಅನೇಕ ವಿಚಾರಗಳನ್ನು ನೋಡಿ, ಕೇಳಿ ಕಲಿತುಕೊಂಡೆ. ಅಭಿನಯ ತರಂಗ ನನಗೆ ಜೀವನ ಕಲಿಸಿಕೊಟ್ಟ ಮೊದಲ ಪಾಠ ಶಾಲೆ ಎನ್ನಬಹುದು. ನನ್ನ ಬದುಕಿಗೆ ಬಹುದೊಡ್ಡ ತಿರುವನ್ನ ನೀಡಿದೆ. ಇದನ್ನೂ ಓದಿ: ಅಣ್ಣಾವ್ರ ಕೈ ಸ್ಪರ್ಶಿಸಿದ್ದೇ ನನ್ನ ಭಾಗ್ಯ: ನಟ ಗಣೇಶ್ ರಾವ್ ಕೇಸರ್ಕರ್

• ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ನಿಮಗೆ ಧಾರಾವಾಹಿಗಳಲ್ಲಿ ಅವಕಾಶ ಸಿಕ್ಕಿದ್ದು ಹೇಗೆ?
ರಂಗಭೂಮಿಯಲ್ಲಿ ನಾಟಕ ಪ್ರದರ್ಶನವಿದ್ದಾಗ ನಿರ್ದೇಶಕ, ನಿರ್ಮಾಪಕರು ನಾಟಕ ನೋಡಲು ಬರುತ್ತಿದ್ರು. ಅಲ್ಲಿ ನನ್ನ ನಟನೆಯನ್ನು ನೋಡಿ ಸೀರಿಯಲ್‍ನಲ್ಲಿ ನಟಿಸಲು ಅವಕಾಶ ಸಿಕ್ಕಿತು. ಗೋಧೂಳಿ ನಾನು ನಟಿಸಿದ ಮೊದಲ ಧಾರಾವಾಹಿ. ನಂತರ ಎಸ್. ನಾರಾಯಣ್ ನಿರ್ದೇಶನದ ಸುಮತಿ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಒದಗಿ ಬಂತು. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಾಂಗಲ್ಯ ಸೀರಿಯಲ್ ನಲ್ಲಿ ನಟಿಸಿದ ನರಸಿಂಹ ಪಾತ್ರ ನನ್ನ ಕಿರುತೆರೆ ಜರ್ನಿಯಲ್ಲಿ ಒಂದು ಬೆಂಚ್ ಮಾರ್ಕ್. ನರಸಿಂಹ ಪಾತ್ರದಲ್ಲಿ ಖಳನಟನಾಗಿ ನಾನು ಮಿಂಚಿದೆ. ಈಗಲೂ ಜನರು ಗುರುತಿಸೋದು ನರಸಿಂಹ ಪಾತ್ರದಿಂದಲೇ. ಇದನ್ನೂ ಓದಿ: ಪರಿಶ್ರಮ ಪ್ರಯತ್ನದ ಜೊತೆ ತಾಳ್ಮೆ ಇರಲಿ: ನಟಿ ದೀಪಾ ಭಾಸ್ಕರ್

• ಹಿರಿತೆರೆಯಲ್ಲಿ ಖಳನಟನಾಗಿ ನಿಮ್ಮ ಸಕ್ಸಸ್ ಫುಲ್ ಜರ್ನಿ ಹೇಗಿತ್ತು?
ಯಶವಂತ್ ಸಿನಿಮಾ ನಾನು ಮೊಟ್ಟ ಮೊದಲು ಬಿಗ್‍ಸ್ಕ್ರೀನ್‍ಗೆ ಬಣ್ಣ ಹಚ್ಚಿದ ಚಿತ್ರ. ಈ ಚಿತ್ರದಲ್ಲಿ ಖಡಕ್ ವಿಲನ್ ಪಾತ್ರದಲ್ಲಿ ನಟಿಸಲು ಅವಕಾಶ ಸಿಕ್ತು. ಅದಾದ ಮೇಲೆ ನಾನು ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಖಳನಟನಾಗಿ ನಟಿಸಿದ್ದೇನೆ. ಮಾದೇಶ, ರಾಜ್, ರಾಕ್ಷಸ, ಐರಾವತ, ವಿಷ್ಣುವರ್ಧನ, ಸಾರಥಿ ಹೀಗೆ ಎಲ್ಲಾ ಸ್ಟಾರ್ ನಟರ ಜೊತೆ ವಿಲನ್ ಆಗಿ ಸ್ಕ್ರೀನ್ ಶೇರ್ ಮಾಡಿದ್ದೇನೆ. ರಾಜ್ ಹಾಗೂ ವಿಷ್ಣುವರ್ಧನ ಚಿತ್ರದಲ್ಲಿನ ಪಾತ್ರಗಳು ನನಗೆ ಖಳನಟನಾಗಿ ದೊಡ್ಡ ಹೆಸರು ತಂದುಕೊಟ್ಟಿದೆ. ಶಿವರಾಜ್ ಕುಮಾರ್ ಅವರ ಎಲ್ಲಾ ಸಿನಿಮಾಗಳಲ್ಲೂ ನಾನು ನಟಿಸಿದ್ದೇನೆ. ಇದಕ್ಕೆ ಕಾರಣ ಕೂಡ ಅವರ ದೊಡ್ಡ ಗುಣ. ಅವರು ನನಗೆ ನೀನು ಒಳ್ಳೆಯ ನಟ ನಿನಗೆ ಅವಕಾಶ ಸಿಗಬೇಕೆಂದು ಪ್ರೋತ್ಸಾಹಿಸೋದ್ರ ಜೊತೆಗೆ ಅವರ ಚಿತ್ರಗಳಲ್ಲಿ ನಟಿಸಲು ಅವಕಾಶ ಮಾಡಿಕೊಡುತ್ತಿದ್ರು. ಡಾ. ರಾಜ್ ಕುಮಾರ್, ವಿಷ್ಣುವರ್ಧನ್ ಅವರನ್ನು ಹೊರತು ಪಡಿಸಿ ಎಲ್ಲಾ ನಟರ ಜೊತೆ ನಟಿಸಿದ್ದೇನೆ. ಇಲ್ಲಿವರೆಗೆ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದೇನೆ. ಇದನ್ನೂ ಓದಿ: ನನ್ನ ಕಡೆ ಎಸೆದ ಕಲ್ಲುಗಳನ್ನು ಮೆಟ್ಟಿಲು ಮಾಡಿಕೊಂಡು ಬೆಳೆದೆ- ಪಾಪಾ ಪಾಂಡು ಖ್ಯಾತಿಯ ಚಿದಾನಂದ್

• ನಟನೆಯಲ್ಲಿ ನಿಮಗೆ ಪ್ರೇರಣೆ, ಸ್ಫೂರ್ತಿ ಯಾರು?
ನನಗೆ ಅಣ್ಣಾವ್ರು ಹಾಗೂ ವಜ್ರಮುನಿ ದೊಡ್ಡ ಪ್ರೇರಣಾ ಶಕ್ತಿಗಳು. ಇಂದಿಗೂ ಶೂಟಿಂಗ್ ಆರಂಭವಾಗುವ ಮುನ್ನ ಮನಸ್ಸಲ್ಲಿ ಅಣ್ಣಾವ್ರನ್ನು ಸ್ಮರಿಸಿ ನಂತರ ನಟಿಸುತ್ತೇನೆ. ಹಾಗೆಯೇ ವಜ್ರಮುನಿ ಅಂದ್ರೆ ಅಷ್ಟೇ ಇಷ್ಟ. ಅವರ ರೀತಿ ಖಡಕ್ ವಿಲನ್ ಆಗಬೇಕೆಂಬುದೇ ನನ್ನಾಸೆ. ನಾನು ಯಾವಾಗಲೂ ನನ್ನ ಸ್ನೇಹಿತರ ಬಳಿ ತಮಾಷೆಗೆ ಹೇಳುತ್ತಿರುತ್ತೇನೆ ಮುನಿರಾಜು ಎಂಬ ಹೆಸರಲ್ಲೇ ನನ್ನಿಷ್ಟದ ಹೀರೋ ಹಾಗೂ ವಿಲನ್ ಇದ್ದಾರೆ ಎಂದು. ಅಷ್ಟರ ಮಟ್ಟಿಗೆ ಈ ಇಬ್ಬರು ವ್ಯಕ್ತಿಗಳು ನನ್ನ ಮೇಲೆ ಪರಿಣಾಮ ಬೀರಿದ್ದಾರೆ.

• ಇಲ್ಲಿವರೆಗಿನ ಬಣ್ಣದ ಲೋಕದ ಪಯಣದಲ್ಲಿ ಬೇಸರ ತರಿಸಿದ ಸಂಗತಿ?
ವಿಲನ್ ಆಗಿ ನಾನು ಅಂದುಕೊಂಡಷ್ಟು ಮಟ್ಟಿಗಿನ ಯಶಸ್ಸು ಹಾಗೂ ಪಾತ್ರಗಳು ಸಿಕ್ಕಿಲ್ಲ ಎಂಬ ಬೇಸರವಿದೆ. ಯಾವುದಾದರೂ ಪಾತ್ರ ಕ್ಲಿಕ್ ಆದ್ರೆ ನಮ್ಮನ್ನು ಅದಕ್ಕೆ ಬ್ರ್ಯಾಂಡ್ ರೀತಿ ಮಾಡುತ್ತಾರೆ. ವಿಷ್ಣುವರ್ಧನ ಚಿತ್ರದ ಪೊಲೀಸ್ ಪಾತ್ರ ನನಗೆ ಹೆಸರು ತಂದು ಕೊಡ್ತು. ಅದಾದ ಮೇಲೆ ಪ್ರತಿಯೊಬ್ಬರೂ ಪೊಲೀಸ್ ಪಾತ್ರಕ್ಕೆಂದೇ ನಟನೆಗೆ ಕರೆಯಲು ಆರಂಭಿಸಿದ್ರು ಇದು ತುಂಬಾ ಬೇಸರತರಿಸಿತು. ಅದಕ್ಕಿಂತ ದೊಡ್ಡ ಕೊರಗು ಎಂದರೆ ಈ ನಡುವೆ ಚಿತ್ರರಂಗದಲ್ಲಿ ಕನ್ನಡ ಕಲಾವಿದರಿಗೆ ಹೆಚ್ಚಿನ ಅವಕಾಶ ಸಿಗುತ್ತಿಲ್ಲ. ಕನ್ನಡದಲ್ಲಿಯೇ ಅದ್ಭುತ ಕಲಾವಿದರಿದ್ದರೂ ಬೇರೆ ಭಾಷೆಯವರನ್ನು ಕರೆತರುತ್ತಿದ್ದಾರೆ. ಅವರನ್ನೂ ಕರೆತನ್ನಿ ಹಾಗೆಯೇ ನಮಗೂ ಅವಕಾಶ ಮಾಡಿಕೊಡಿ ಅನ್ನೋದು ನನ್ನ ಕೋರಿಕೆ. ಇದನ್ನೂ ಓದಿ: ಹಂಡ್ರೆಡ್ ಪರ್ಸೆಂಟ್ ಹ್ಯಾಪಿ ನಾನು- ಖ್ಯಾತ ಕಿರುತೆರೆ ನಟ, ನಿರ್ದೇಶಕ ರವಿಕಿರಣ್

• ಪ್ರಸ್ತುತ ನಟಿಸುತ್ತಿರುವ ಸಿನಿಮಾಗಳು ಯಾವ್ಯಾವು?
ರಾಘವೇಂದ್ರ ರಾಜ್‍ಕುಮಾರ್ ಅವರ ರಾಜತಂತ್ರ, ಒರಟ ಸಿನಿಮಾ ಖ್ಯಾತಿಯ ನಿರ್ದೇಶಕ ಶ್ರೀ ಅವರ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಈ ಮಧ್ಯೆ, ಕನ್ನಡ ಹಾಗೂ ತೆಲುಗಿನಲ್ಲಿ ಒಂದೊಂದು ಒಟಿಟಿ ಸಿನಿಮಾ ಮಾಡಿದ್ದೇನೆ. ಇದ್ರ ಜೊತೆಗೆ ಸುಮಾರು ಹತ್ತು ವರ್ಷಗಳ ನಂತರ ಕಿರುತೆರೆಗೆ ಕಂ ಬ್ಯಾಕ್ ಮಾಡಿದ್ದು ನಾಗಿಣಿ-2 ಸೀರಿಯಲ್‍ನಲ್ಲಿಯೂ ಬಣ್ಣಹಚ್ಚಿದ್ದೇನೆ.

• ಸಿನಿಮಾ ಬಿಟ್ಟರೆ ನಿಮಗೆ ಖುಷಿ ಕೊಡುವ ಕ್ಷೇತ್ರ ಯಾವುದು?
ನನ್ನ ಜೀವನದಲ್ಲಿ ನನಗೆ ಖುಷಿ ಕೊಡೋದು ಎರಡೇ ವಿಚಾರ. ಒಂದು ನಟನೆ ಇನ್ನೊಂದು ವ್ಯವಸಾಯ. ಈಗಲೂ ನಾನು ಹೊಲದಲ್ಲಿ ವ್ಯವಸಾಯ ಮಾಡುತ್ತೇನೆ, ಟ್ರ್ಯಾಕ್ಟರ್ ಓಡಿಸುತ್ತೇನೆ. ಸಿನಿಮಾ ಬಿಟ್ಟರೆ ವ್ಯವಸಾಯ ನನ್ನ ಅತಿಯಾದ ಪ್ರೀತಿಯ ಕ್ಷೇತ್ರ.

• ಖಳನಟನಾಗಿ ನಿಮ್ಮ ಕನಸಿನ ಪಾತ್ರ ಹಾಗೂ ನಿಮ್ಮ ಜೀವನದ ಅತಿ ದೊಡ್ಡ ಕನಸು?
ಶಕುನಿ ಮತ್ತು ದುರ್ಯೋಧನ ಪಾತ್ರಗಳಲ್ಲಿ ಜೀವನದಲ್ಲಿ ಒಮ್ಮೆಯಾದ್ರು ನಟಿಸಬೇಕೆಂಬ ಮಹದಾಸೆಯಿದೆ. ಅದು ಬಿಟ್ರೆ ಕಲಾವಿದನಾಗಿ ನನ್ನ ದೊಡ್ಡ ಕೋರಿಕೆ ಎಂದರೆ ನಾನು ನಟಿಸುತ್ತಿರುವಾಗಲೇ ದೇವರು ನನಗೆ ಸಾವನ್ನು ಕರುಣಿಸಬೇಕು. ಆ ಯೋಗವನ್ನು ಭಗವಂತ ಕರುಣಿಸಲಿ ಎಂದು ಯಾವಾಗಲೂ ಬೇಡಿಕೊಳ್ಳುತ್ತೇನೆ. ಇದೇ ನನ್ನ ಜೀವಮಾನದ ಅತಿ ದೊಡ್ಡ ಬಯಕೆ.

Click to comment

Leave a Reply

Your email address will not be published. Required fields are marked *

www.publictv.in