Sunday, 21st July 2019

ನಮ್ಮ ಸಾಹೇಬ್ರು ಗನ್ ಕೇಳಿಲ್ಲ – ಶಾಸಕ ಗಣೇಶ್ ಗನ್‍ಮ್ಯಾನ್

ಬೆಂಗಳೂರು: ಈಗಲ್‍ಟನ್ ರೆಸಾರ್ಟಿನಲ್ಲಿ ಕಾಂಗ್ರೆಸ್ ಶಾಸಕರು ಹೊಡೆದಾಡಿಕೊಂಡ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಘಟನೆಯ ಬಳಿಕ ಕಾಣೆಯಾಗಿದ್ದ ಕಂಪ್ಲಿ ಶಾಸಕ ಗಣೇಶ್ ಅವರ ಗನ್‍ಮ್ಯಾನ್ ಕಾಣಿಸಿಕೊಂಡು ಪ್ರಕರಣದ ಕುರಿತು ಹೇಳಿಕೆ ನೀಡಿದ್ದಾರೆ.

ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಗನ್‍ಮ್ಯಾನ್ ಶರಣಪ್ಪ, ನಮ್ಮ ಸಾಹೇಬ್ರು (ಶಾಸಕ ಗಣೇಶ್) ಗನ್ ಕೊಡು ಅಂತ ನನ್ನ ಕೇಳಿಲ್ಲ. ಭೀಮಾನಾಯಕ್ ಅವರ ರೂಮ್‍ನಲ್ಲಿ ಘಟನೆ ನಡೆದಿದೆ ಎಂದು ಹೇಳುವ ಮೂಲಕ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾರೆ. ಇದನ್ನು ಓದಿ: ಈಗಲ್ಟನ್ ರೆಸಾರ್ಟಿನಲ್ಲಿ ರಾತ್ರಿ ನಡೆದಿದ್ದೇನು? ಎಳೆ ಎಳೆಯಾಗಿ ಬಿಚ್ಚಿಟ್ಟ ಶಾಸಕ ಗಣೇಶ್

ಗನ್‍ಮ್ಯಾನ್ ಹೇಳಿದ್ದೇನು?:
ಶಾಸಕ ಆನಂದ್ ಸಿಂಗ್ ಅವರ ರೂಮ್‍ನಲ್ಲಿ ನಮ್ಮ ಸಾಹೇಬ್ರು ಪಾರ್ಟಿ ಮಾಡಿದ್ದರು. ಬಳಿಕ ರೂಮ್‍ಗೆ ಬಂದ ಶಾಸಕರು ಮಲಗಿ, ಬಾಗಿಲು ಹಾಕುವಂತೆ ತಿಳಿಸಿದ್ದರಿಂದ ನಾನು ಬಾಗಿಲು ಹಾಕಿದೆ. ಸ್ವಲ್ಪ ಸಮಯದ ಬಳಿಕ ಯಾರೋ ರೂಮ್ ಬಾಗಿಲು ಬಡಿದರು. ನಾನು ತೆರೆದು ನೋಡಿದಾಗ ಆನಂದ್ ಸಿಂಗ್ ಅವರು ಮುಂದೆ ನಿಂತಿದ್ದರು. “ನನಗೆ ಭೀಮಾನಾಯಕ್ ರೂಮ್ ತೋರಿಸು ಬಾ” ಅಂತ ಗಣೇಶ್ ಅವರಿಗೆ ಕೇಳಿದರು. ಆದರೆ ಅದಕ್ಕೆ ಒಪ್ಪದ ಶಾಸಕರು,”ಇವತ್ತು ಮದ್ಯದ ಮತ್ತಿನಲ್ಲಿದ್ದೇವೆ. ಹೀಗಾಗಿ ಭೀಮಾನಾಯಕ್ ಜೊತೆಗೆ ನಾಳೆ ಮಾತನಾಡೋಣ” ಅಂತ ಹೇಳಿದರು.

ಈ ಉತ್ತರಕ್ಕೆ ಒಪ್ಪದ ಆನಂದ್ ಸಿಂಗ್, “ನೀನು ರೂಮ್ ತೋರಿಸಲೇ ಬೇಕು” ಅಂತ ಪಟ್ಟು ಹಿಡಿದರು. ಇದರಿಂದಾಗಿ ಇಬ್ಬರು ಸೇರಿ ಭೀಮಾನಾಯಕ್ ಅವರ ರೂಮ್‍ಗೆ ಹೋದರು. ಆಗ ಗಣೇಶ್ ಅವರು ಭೀಮಾನಾಯಕ್ ಅವರನ್ನು ಕೂಗಿ ಎಚ್ಚರಿಸಿದರು. ಆದರೆ ಭೀಮಾನಾಯಕ್ ಅವರು,”ಇವತ್ತು ಬೇಡ ನಾಳೆ ಮಾತಾಡೋಣ” ಅಂತ ಹೇಳಿದರು. “ಇಲ್ಲ ಆನಂದ್ ಅಣ್ಣಾ ಬಂದಿದ್ದಾನೆ. ನಿನ್ನ ಜೊತೆಗೆ ಮಾತನಾಡಬೇಕು ಬಾಗಿಲು ಓಪನ್ ಮಾಡು” ಅಂತ ಕೇಳಿದರು. ಇದನ್ನು ಓದಿ: ಶಾಸಕರ ಬಡಿದಾಟಕ್ಕೆ ಆಪರೇಷನ್ ಕಮಲ ಕಾರಣ – ಎದೆ ನೋವು ಡೈಲಾಗ್ ಹೊಡೆದು ಉಲ್ಟಾ ಹೊಡೆದ ಡಿಕೆ ಸುರೇಶ್

ಭೀಮಾನಾಯಕ್ ಬಾಗಿಲು ತೆಗೆದಾಗ ಇಬ್ಬರು ಶಾಸಕರು ಅವರ ರೂಮ್ ಒಳಗೆ ಹೋದರು. ತಕ್ಷಣವೇ ಆನಂದ್ ಸಿಂಗ್ ಅವರು ಭೀಮಾನಾಯಕ್ ಅವರ ಮೇಲೆ ಹಲ್ಲೆ ಮಾಡಿದರು. “ಸಿಎಲ್‍ಪಿ ಸಭೆಯಲ್ಲಿ ನನಗೆ ಮಗನ ಅಂತಿಯಾ” ಅಂತ ಆನಂದ್‍ಸಿಂಗ್ ಏಕವಚನದಲ್ಲಿಯೇ ಬೈಯಲು ಆರಂಭಿಸಿದರು. ಇದರಿಂದ ಗಾಬರಿಗೊಂಡ ಭೀಮಾನಾಯಕ್ ಅವರು,”ನನ್ನಿಂದ ತಪ್ಪಾಗಿದೆ ಕ್ಷಮಿಸಿ” ಅಂತ ಕೇಳಿಕೊಂಡರು. ಆಗ ಭೀಮಾನಾಯಕ್ ಅವರನ್ನು ಕೈಬಿಟ್ಟ ಆನಂದ್ ಸಿಂಗ್, ಗಣೇಶ್ ಅವರನ್ನು ಹಿಡಿದು,”ಅವನು ಕ್ಷಮೆ ಕೇಳಿದ್ದಾನೆ. ಈಗ ನೀನು ಕೇಳಬೇಕು” ಎಂದು ಹೇಳಿ ಹಲ್ಲೆಗೆ ಮುಂದಾದರು.

“ಮುಂದಿನ ವಿಧಾನಸಭಾ ಚುನಾವಣೆಗೆ ನಿನ್ನ ಕ್ಷೇತ್ರದಿಂದ ಸಂದೀಪ್ ಸಿಂಗ್ ನನ್ನು ಕಣಕ್ಕೆ ಇಳಿಸುತ್ತೇನೆ” ಎಂದು ಆನಂದ್ ಸಿಂಗ್ ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಗಣೇಶ್ ಅವರು,”ಅಣ್ಣಾ ಬೇಕು ಅಂದ್ರೆ ನಿಮ್ಮ ಮಗನನ್ನು ನಿಲ್ಲಿಸಿ, ಇಲ್ಲವೇ ನೀವೇ ನಿಂತರೂ ನಾನು ಪ್ರೋತ್ಸಾಹ ಕೊಡುತ್ತೇನೆ. ಆದರೆ ಸಂದೀಪ್ ಸಿಂಗ್ ಮಾತ್ರ ಬೇಡ” ಅಂತ ಕೇಳಿಕೊಂಡರು. ಆದರೂ ಪಟ್ಟು ಬಿಡದ ಆನಂದ್ ಸಿಂಗ್,”ಸಂದೀಪ್‍ನನ್ನೇ ನಿನ್ನ ವಿರುದ್ಧ ನಿಲ್ಲಿಸಿ, ಗೆಲ್ಲಿಸುತ್ತೇನೆ” ಅಂತ ಹೇಳುತ್ತಲೇ ಹೆಡ್ ಲ್ಯಾಪ್ ಎತ್ತಿಕೊಂಡು ಶಾಸಕ ಗಣೇಶ್ ಅವರ ಮೇಲೆ ಹಲ್ಲೆ ಮಾಡಿದರು. ಬಳಿಕ ಗಣೇಶ್, ಆನಂದ್ ಸಿಂಗ್ ಅವರನ್ನು ದೂಡಿದರು. ಬಳಿಕ ಎದ್ದು ನಿಂತ ಆನಂದ್ ಸಿಂಗ್ ಟಿವಿ ಎತ್ತಿಕೊಂಡು ಎಸೆಯಲು ಮುಂದಾದರು. ಈ ವೇಳೆ ಇಬ್ಬರು ಹೊಡೆದಾಡಿಕೊಂಡಿದ್ದಾರೆ ಎಂದು ಶರಣಪ್ಪ ವಿವರಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *