Tuesday, 21st May 2019

Recent News

ಎಚ್‍ಡಿ ರೇವಣ್ಣ ಸಿಎಂ ಆಗ್ತಾರೆ – ಶ್ರೀ ಶರಣಬಸಪ್ಪ ಅಪ್ಪಾರಿಂದ ಆಶೀರ್ವಾದ

ಕಲಬುರಗಿ: ಭವಿಷ್ಯದಲ್ಲಿ ಲೋಕೋಪಯೋಗಿ ಸಚಿವ ರೇವಣ್ಣ ಕೂಡ ಸಿಎಂ ಆಗಲಿ ಎಂದು ಕಲಬುರಗಿಯ ಐತಿಹಾಸಿಕ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶ್ರೀ ಶರಣಬಸಪ್ಪ ಅಪ್ಪಾ ಅವರು ಆಶೀರ್ವಾದ ಮಾಡಿದ್ದಾರೆ.

ಸಮ್ಮಿಶ್ರ ಸರ್ಕಾರ ರಚನೆ ಆದ ಬಳಿಕ ಮೊದಲ ಬಾರಿಗೆ ರೇವಣ್ಣ ಅವರು ಕಲಬುರಗಿಗೆ ಭೇಟಿ ನೀಡಿದ್ದರು. ಈ ವೇಳೆ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶ್ರೀ ಶರಣಬಸಪ್ಪ ಅಪ್ಪಾ ಅವರು ಭೇಟಿ ಮಾಡಿ ಆಶೀರ್ವಾದ ಪಡೆದರು.

ಶ್ರೀಗಳ ಆಶೀರ್ವಾದ ಪಡೆಯುವ ಸಂದರ್ಭದಲ್ಲಿ ರೇವಣ್ಣ ಅವರನ್ನು ಸಿಎಂ ಆಗುವಂತೆ ಆಶೀರ್ವಾದ ಮಾಡಿ ಎಂದು ಪಕ್ಕದಲ್ಲಿದ್ದವರು ಶ್ರೀಗಳಿಗೆ ಕೇಳಿದರು. ಆ ವೇಳೆ ಶ್ರೀಗಳು ಆಯ್ತು ನೀನು ಮುಖ್ಯಮಂತ್ರಿ ಆಗುತ್ತಿಯಾ ಆಶೀರ್ವಾದಿಸಿದರು.

ಶ್ರೀಗಳ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರೇವಣ್ಣ ಅವರು, ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ ಹೀಗಿರುವಾಗ ಲೋಕಸಭಾ ಚುನಾವಣೆಯಲ್ಲಿ ಆ ಕ್ಷೇತ್ರ ಹೇಗೆ ಬಿಟ್ಟುಕೊಡುವುದು ಎಂದು ಪ್ರಶ್ನೆ ಮಾಡಿದರು. ಈ ಮೂಲಕ ಮಂಡ್ಯ ಕ್ಷೇತ್ರದ ಮೇಲೆ ಕಣ್ಣಿಟ್ಟಿದ ‘ಕೈ’ ನಾಯಕರಿಗೆ ಪರೋಕ್ಷವಾಗಿ ರೇವಣ್ಣ ಟಾಂಗ್ ನೀಡಿದರು.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಸ್ಪರ್ಧೆ ವಿಚಾರ ನನಗೆ ಮಾಹಿತಿ ಇಲ್ಲ. ಸದ್ಯ ರಾಜ್ಯದಲ್ಲಿ ಬಿಜೆಪಿ ನಾಯಕರಿಗೆ ರಾಜ್ಯದ ಹಿತಕ್ಕಿಂತ ಅಧಿಕಾರ ಮುಖ್ಯವಾಗಿದೆ. ಮಹಾರಾಷ್ಟ್ರದಲ್ಲಿ ಬರದ ಕಾಮಗಾರಿ ನಡೆಸಲು ಕೇಂದ್ರ ಸರ್ಕಾರ ನಾಲ್ಕೂವರೆ ಸಾವಿರ ಕೋಟಿ ರೂ. ಕೊಟ್ಟಿದೆ. ಆದರೆ ರಾಜ್ಯಕ್ಕೆ 932 ಕೋಟಿ ರೂ. ಮಾತ್ರ ನೀಡಿದೆ. ಇದರಿಂದ ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು. ಈ ವೇಳೆ ಸಚಿವರಿಗೆ ಮಾಜಿ ಸಚಿವ ರೇವುನಾಯಕ್ ಬೆಳಮಗಿ ಸಾಥ್ ನೀಡಿದರು.

ಇದೇ ವೇಳೆ ತಮ್ಮ ಭೇಟಿ ಕುರಿತು ಮಾಹಿತಿ ನೀಡಿದ ಸಚಿವರು, ಲೋಕೋಪಯೋಗಿ ಇಲಾಖೆಯ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಲು ಆಗಮಿಸಿದ್ದೇನೆ. ಒಂದೂವರೆ ಸಾವಿರ ಕೋಟಿ ರೂ. ವೆಚ್ಚದಲ್ಲಿ ಹೈ-ಕ ವ್ಯಾಪ್ತಿಯ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಮಾಡಲಿದ್ದೇವೆ ಎಂದರು. ಅಲ್ಲದೇ ರಾಜ್ಯದಲ್ಲಿ ಒಂದು ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆ ತಗೆಯಬೇಕೆಂದು ನಾನು ಒತ್ತಾಯಿಸುತ್ತೇನೆ. ಬಡವರ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದಬೇಕೆಂಬುದು ನಮ್ಮ ನಿಲುವು ಎಂದು ಸ್ಪಷ್ಟಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *