Monday, 24th June 2019

ರಸ್ತೆ ಪಕ್ಕದಲ್ಲಿ ನಿಂತಿದ್ದ ಜನರ ಮೇಲೆ ಹರಿದ ಲಾರಿ: ಮೂವರು ಸಾವು

ಕಲಬುರಗಿ: ರಸ್ತೆ ಪಕ್ಕದಲ್ಲಿಯೇ ನಿಂತಿದ್ದ ಜನರ ಮೇಲೆ ಲಾರಿಯೊಂದು ಹರಿದು, ಮೂವರು ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದ ಬಳಿ ನಡೆದಿದೆ.

ಮೃತ ದುರ್ದೈವಿಗಳನ್ನು ಜೇರಟಗಿ ಗ್ರಾಮದ ಯುವಕರಾದ ಶ್ರೀಕಾಂತ್ ಬಡಿಗೇರ್ (25), ಮೋಹಿದ್ (18) ಹಾಗೂ ಉತ್ತರ ಪ್ರದೇಶ ಮೂಲದ ಪಾನಿಪುರಿ ವ್ಯಾಪಾರಿ ಎಂದು ಗುರುತಿಸಲಾಗಿದೆ. ಜನರು ರಸ್ತೆ ಪಕ್ಕದಲ್ಲಿ ನಿಂತಿದ್ದರು. ಈ ವೇಳೆ ಏಕಾಏಕಿ ಬಂದ ಲಾರಿ ಅವರ ಮೇಲೆ ಹರಿದಿದೆ.

ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ವಿಜಯಪುರದ ಸಿಂದಗಿ ತಾಲೂಕಿನ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳುಗಳಲ್ಲಿ ಓರ್ವನ ಎಡರೂ ಕಾಲುಗಳು ಕಟ್ ಆಗಿವೆ ಎಂಬುದಾಗಿ ತಿಳಿದುಬಂದಿದೆ.

ಇತ್ತೀಚೆಗಷ್ಟೇ ರಸ್ತೆ ಅಗಲಿಕರಣಕ್ಕಾಗಿ ಅಲ್ಲಿನ ಬಸ್ ನಿಲ್ದಾಣ ತೆರವು ಮಾಡಿದ್ದು, ಜನ ರಸ್ತೆಯ ಪಕ್ಕದಲ್ಲಿ ನಿಂತು ಬಸ್‍ಗಾಗಿ ಕಾಯುತ್ತಿರುವಾಗ ಈ ಘಟನೆ ನಡೆದಿದೆ. ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕನ ನಿರ್ಲಕ್ಷ್ಯವನ್ನು ಖಂಡಿಸಿ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *