Wednesday, 13th November 2019

Recent News

ಮಹಾರಾಷ್ಟ್ರಕ್ಕೆ ಕರ್ನಾಟಕದ ನೀರು – ಸಿಎಂ ಬಿಎಸ್‍ವೈ ಸ್ಪಷ್ಟನೆ

ಕಲಬುರಗಿ: ಮಹಾರಾಷ್ಟ್ರಕ್ಕೆ ಕರ್ನಾಟಕದಿಂದ ನೀರು ಹರಿಸಲಾಗುವುದು ಎಂದು ಹೇಳಿದ್ದ ಸಿಎಂ ಯಡಿಯೂರಪ್ಪ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಮಹಾರಾಷ್ಟ್ರಕ್ಕೆ ನೀರು ಬಿಡುವ ವಿಚಾರಕ್ಕೆ ರಾಜ್ಯದಲ್ಲಿ ವಿರೋಧ ವ್ಯಕ್ತವಾಗುತ್ತಿದಂತೆ ಎಚ್ಚೆತ್ತ ಸಿಎಂ ಬಿ.ಎಸ್.ಯಡಿಯೂರಪ್ಪ, ಕಲಬುರಗಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಮಹಾರಾಷ್ಟ್ರ ನಮಗೆ ಬೇಸಿಗೆ ದಿನದಲ್ಲಿ ಕೃಷ್ಣಾ ಮತ್ತು ಭೀಮಾ ನದಿಗೆ ನಾಲ್ಕು ಟಿಎಂಸಿ ನೀರನ್ನು ಬಿಡುಗಡೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಈ ನೀರಿನ ಬದಲಾಗಿ ನಮ್ಮಲ್ಲಿ ಹೆಚ್ಚುವರಿ ನೀರನ್ನು ತುಬಚಿ-ಬಬಲೇಶ್ವರ ಏತನೀರಾವರಿ ಮೂಲಕ ಮಹಾರಾಷ್ಟ್ರಕ್ಕೆ ಹರಿಸುವುದ್ದಾಗಿ ಹೇಳಿದ್ದೇನೆ. ಹೀಗಾಗಿ ಇದನ್ನು ಅಪಾರ್ಥ ಮಾಡಿಕೊಳ್ಳುವುದು ಬೇಡ. ವಿರೋಧ ಪಕ್ಷದವರು ಇದು ಚುನಾವಣಾ ಗಿಮಿಕ್ ಎಂದು ಆರೋಪಿಸುತ್ತಿದ್ದಾರೆ. ನಾನು ನನ್ನ ಜೀವನದಲ್ಲಿ ಚುನಾವಣೆ ಗಿಮಿಕ್ ಮಾಡಿಲ್ಲ, ಮಹಾರಾಷ್ಟ್ರ ಮತ್ತು ಕರ್ನಾಟಕ ಏನ್ ದಾಯಾದಿಗಳಲ್ಲಾ ಒಟ್ಟಾಗಿ ಕುಳಿತು ಚರ್ಚೆ ಮಾಡೋದಾಗಿ ಹೇಳಿದ್ದೇನೆ.

ಬಿಎಸ್‍ವೈ ಹೇಳಿದ್ದೇನು?
ಮಹಾರಾಷ್ಟ್ರಕ್ಕೆ ಚುನಾವಣಾ ಪ್ರಚಾರಕ್ಕೆ ಹೋಗಿದ್ದ ಬಿಎಸ್‍ವೈ, ಜತ್ ತಾಲೂಕಿನ ಹೆಚ್ಚು ಜನರು ಕನ್ನಡ ಭಾಷಿಕರು. ಕೃಷಿ ಮತ್ತು ಕುಡಿಯುವ ನೀರಿನ ಅಭಾವ ತೀವ್ರವಾಗಿರುವಂತದ್ದು. ಇವತ್ತು ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮಕ್ಕೆ ತಲುಪಿದೆ. ಈ ಗ್ರಾಮದಿಂದ 8-10 ಕಿಮೀ ದೂರದಲ್ಲಿ ಹರಿಯುತ್ತಿರುವ ಬೋರಾ ನದಿಗೆ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಹರಿಸುವುದರಿಂದ 30-40 ಗ್ರಾಮಗಳಿಗೆ 1 ಲಕ್ಷಕ್ಕೂ ಹೆಚ್ಚು ಜನರಿಗೆ ಇದರಿಂದ ಅನುಕೂಲ ಆಗುತ್ತೆ ಅನ್ನೋದನ್ನು ಕೇಳಿದ್ದೇವೆ.

ನಮ್ಮ ಅಧಿಕಾರಿಗಳೊಂದಿಗೆ ಚರ್ಚಿಸಿ, ಮಹಾರಾಷ್ಟ್ರ ಸಿಎಂ ಘಡ್ನವೀಸ್ ಜೊತೆಗೂ ಚರ್ಚೆ ಮಾಡುತ್ತೇನೆ. ಮಹಾರಾಷ್ಟ್ರ ಬೇರೆ, ಕರ್ನಾಟಕ ಬೇರೆಯಲ್ಲ. ನೀರಿಲ್ಲದಿದ್ದರೆ ಬದುಕಲು ಆಗಲ್ಲ. ರೈತರ ಹೊಲಕ್ಕೆ ನೀರು ಬೇಕು, ರೈತರ ಬೆಳೆದಂತಹ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು. ರೈತರ ಉತ್ಪನ್ನ 2 ಪಟ್ಟು ಹೆಚ್ಚಾಗಬೇಕು ಅಂತಾ ಪ್ರಧಾನಿ ಮೋದಿ ಅಪೇಕ್ಷೆ ಇದೆ. ಇದನ್ನು ಪೂರೈಸಲು ನಮ್ಮ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ನಿಮಗೆ ಯಾವ ರೀತಿ ಅನುಕೂಲ ಮಾಡಕ್ಕೆ ಸಾಧ್ಯ ಇದೆಯೋ, ಚರ್ಚೆ ಮಾಡಿ ಸಹಕಾರ ಕೊಡುತ್ತೇನೆ. ಯಡಿಯೂರಪ್ಪ ಬಂದಿದ್ದಕ್ಕೆ, ಇಲ್ಲಿ ಮಾತನಾಡಿದ್ದಕ್ಕೆ ಹಿಂದಿನ ಬಾರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಡಬೇಕು ಎಂದು ಮತದಾರರಲ್ಲಿ ಸಿಎಂ ಮನವಿ ಮಾಡಿಕೊಂಡಿದ್ದರು.

Leave a Reply

Your email address will not be published. Required fields are marked *