Connect with us

Bengaluru City

ದಿನಸಿ ಕಿಟ್ ವಿತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಗೋಪಾಲಯ್ಯ

Published

on

Share this

ಬೆಂಗಳೂರು: ಸಂಕಷ್ಟದಲ್ಲಿರುವ ಶಿಕ್ಷಕರಿಗೆ ದಿನಸಿ ಕಿಟ್‍ಗಳನ್ನು ವಿತರಿಸುವ ಮೂಲಕವಾಗಿ ಅಬಕಾರಿ ಸಚಿವ ಹಾಗೂ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಗೋಪಾಲಯ್ಯ ಅವರು ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ. ಇದನ್ನೂ ಓದಿ:  ಧೋನಿ ಮಾಸ್ ಮೀಸೆಗೆ ಅಭಿಮಾನಿಗಳು ಫಿದಾ

ರಾಜ್ಯದಲ್ಲಿ ಎರಡನೆ ಕೊರೊನಾ ಅಲೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿ ಸಾವು-ನೋವು ಸಂಭವಿಸಿದ್ದರಿಂದ ಹುಟ್ಟುಹಬ್ಬ ಆಚರಿಸಿಕೊಳ್ಳದೆ ಸುಮಾರು 2 ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ದಿನಸಿ ಕಿಟ್‍ಗಳನ್ನು ವಿತರಿಸಿ ಮಾನವೀಯತೆ ಮೆರೆದರು. ಮಹಾಲಕ್ಷ್ಮಿಪುರಂನ ನಾಗಪುರ ವಾರ್ಡ್‍ನಲ್ಲಿರುವ ಬಿಜಿಎಸ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಸೇರಿದಂತೆ ಬೆಂಬಲಿಗರು, ಹಿತೈಷಿಗಳ ಸಮ್ಮುಖದಲ್ಲಿ ಶಿಕ್ಷಕರಿಗೆ ದಿನಸಿ ಕಿಟ್‍ಗಳನ್ನು ವಿತರಣೆ ಮಾಡಲಾಯಿತು.

ಮಾಧ್ಯಮದವರೊಂದಿಗೆ ಮಾತನಾಡಿದ ಡಾ.ಅಶ್ವತ್ಥ ನಾರಾಯಣ್, ಕೊರೊನಾ ಸಂಕಷ್ಟದಲ್ಲಿ ಅಬಕಾರಿ ಸಚಿವರೂ ಆಗಿರುವ ಗೋಪಾಲಯ್ಯ ಅವರು ತಮ್ಮ ಕ್ಷೇತ್ರದಲ್ಲಿ ಮಾಡಿರುವ ಸಾಮಾಜಿಕ ಸೇವೆಗಳು ನಮಗೆಲ್ಲರಿಗೂ ಮಾದರಿಯಾಗಿದ್ದಾರೆ. ಕ್ಷೇತ್ರದಲ್ಲಿರುವ ಪ್ರತಿಯೊಬ್ಬರಿಗೂ ಜಾತಿ, ಮತ, ಭೇದ ಯಾವುದನ್ನೂ ನೋಡದೆ ಸಂಕಷ್ಟದಲ್ಲಿರುವ ಜನರಿಗೆ ಔಷಧೋಪಚಾರ, ದಿನಸಿ ಕಿಟ್‍ಗಳು, ಆರ್ಥಿಕ ನೆರವು, ಕೊರೊನಾ ಸೋಂಕು ತಗುಲಿದವರಿಗೆ ಆಕ್ಸಿಜನ್, ವೆಂಟಿಲೇಟರ್ ಸೌಲಭ್ಯ, ಸಮುದಾಯ ಭವನ ನಿರ್ಮಾಣ ಸೇರಿದಂತೆ ಹಲವು ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಣ, ಆರೋಗ್ಯ, ಅನ್ನ, ವಸತಿ ಕ್ಷೇತ್ರಗಳಿಗೆ ವಿಶೇಷವಾಗಿ ಗಮನ ಹರಿಸಿರುವ ಅವರು, ಕ್ಷೇತ್ರದಲ್ಲಿ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲೆಂದು ಮೂರು ಮಾದರಿ ಸರ್ಕಾರಿ ಶಾಲೆಗಳನ್ನು ನಿರ್ಮಿಸಿದ್ದಾರೆ. ಒಂದೊಂದು ಶಾಲೆಯಲ್ಲಿ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡಬಹುದು. ಭಗವಂತ ಅವರಿಗೆ ಇನ್ನಷ್ಟು ಸಮಾಜಸೇವೆ ಮಾಡುವ ಅವಕಾಶ ನೀಡಲಿ ಎಂದಿದ್ದಾರೆ.

ಗೋಪಾಲಯ್ಯ ಮಾತನಾಡಿ, ಕೊರೊನಾ ಬಂದ ಸಂದರ್ಭದಲ್ಲಿ ನಾನು ಹುಟ್ಟುಹಬ್ಬ ಆಚರಿಸಬಾರದೆಂದು ನನ್ನ ಕ್ಷೇತ್ರದ ಜನತೆ, ಸಾರ್ವಜನಿಕರು, ಹಿತೈಷಿಗಳು, ಪಕ್ಷದ ಮುಖಂಡರಿಗೆ ಮನವಿ ಮಾಡಿಕೊಂಡಿದ್ದೆ. ಹಾರ, ತುರಾಯಿ, ಶಾಲು ಹಾಕಿಕೊಂಡರೆ ಅರ್ಥ ಬರುವುದಿಲ್ಲ. ಇದರ ಬದಲಿಗೆ ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಕಿಟ್‍ಗಳನ್ನು ನೀಡಬೇಕೆಂದು ತೀರ್ಮಾನಿಸಿದ್ದೆನೆ. ಈಗಾಗಲೇ ಕ್ಷೇತ್ರದಲ್ಲಿ ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುವಂತೆ ದೆಹಲಿಯಲ್ಲಿರುವ ಶಾಲೆಗಳಿಗಿಂತಲೂ ಉತ್ತಮ ಮೂಲಭೂತ ಸೌಕರ್ಯಗಳುಳ್ಳ ಮೂರು ಶಾಲೆಗಳನ್ನು ನಿರ್ಮಿಸಲಾಗಿದೆ. ಕೊರೊನಾ ಕಾರಣದಿಂದ ಅದು ಉದ್ಘಾಟನೆಯಾಗಲಿಲ್ಲ. ಶೀಘ್ರದಲ್ಲೇ ಶ್ರೀಗಳ ಆಶೀರ್ವಾದದೊಂದಿಗೆ ಪ್ರಾರಂಭಿಸುತ್ತೇವೆ ಎಂದಿದ್ದಾರೆ.

ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಕೊರೊನಾ ಬಂದಾಗ ಜನಪ್ರತಿನಿಗಳು ಜನರನ್ನು ಮರೆಯುವುದೇ ಹೆಚ್ಚು. ಆದರೆ, ಇದಕ್ಕೆ ವ್ಯತಿರಿಕ್ತವೆಂಬಂತೆ ತಮ್ಮ ಪ್ರಾಣ, ಕುಟುಂಬದ ಸದಸ್ಯರನ್ನೂ ಲೆಕ್ಕಿಸದೆ ಗೋಪಾಲಯ್ಯನವರು ಕ್ಷೇತ್ರದ ಜನತೆಗೆ ಸಂಜೀವಿನಿಯಾಗಿ ಪರಿಣಮಿಸಿದ್ದಾರೆ. ದೇವರು ಅವರಿಗೆ ಇನ್ನಷ್ಟು ಶಕ್ತಿಯನ್ನು ನೀಡಿ ಜನಸೇವೆ ಮಾಡುವ ಅವಕಾಶ ಕೊಡಲಿ. ಅದೇ ರೀತಿ ಕೊರೊನಾವೂ ನಮ್ಮಿಂದ ದೂರವಾಗಲಿ ಎಂದು ಶ್ರೀಗಳು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಒಬಿಸಿ ಅಧ್ಯಕ್ಷ ನೆ ಲ ನರೇಂದ್ರ ಬಾಬು ಮಾಜಿ ಉಪ ಮೇಯರ್ ಗಳಾದ ಹೇಮಲತ ಗೋಪಾಲಯ್ಯ ಹರೀಶ್ ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಜಯರಾಮಯ್ಯ ಸೇರಿದಂತೆ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Advertisement