Connect with us

Latest

47ನೇ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾ.ಎಸ್.ಎ.ಬೋಬ್ಡೆ

Published

on

ನವದೆಹಲಿ: ಸುಪ್ರೀಂಕೋರ್ಟಿನ 47ನೇ ಮುಖ್ಯ ನ್ಯಾಯಾಧೀಶರಾಗಿ ಶರದ್ ಅರವಿಂದ್ ಬೋಬ್ಡೆ ಪ್ರಮಾಣ ವಚನ ಸ್ವೀಕರಿಸಿದರು. ನ್ಯಾ.ಬೋಬ್ಡೆ ಅವರಿಗೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಪ್ರಮಾಣ ವಚನ ಬೋಧಿಸಿದರು. 23 ಏಪ್ರಿಲ್ 2021ರವರೆಗೆ ಬೋಬ್ಡೆ ಅವರು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಲಿದ್ದಾರೆ.

ಅಯೋಧ್ಯೆ ತೀರ್ಪು ನೀಡಿದ ಸಾಂವಿಧಾನಿಕ ಪೀಠದ ಐವರು ನ್ಯಾಯಾಧೀಶರಲ್ಲಿ ಬೋಬ್ಡೆ ಅವರು ಒಬ್ಬರಾಗಿದ್ದರು. ಮುಖ್ಯ ನ್ಯಾಯಮೂರ್ತಿಗಳಾಗಿದ್ದ ರಂಜನ್ ಗೋಗೋಯ್, ನ್ಯಾಯಮೂರ್ತಿ ಎಸ್‍ಎ ಬೋಬ್ಡೆ, ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ಕರ್ನಾಟಕ ಮೂಲದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಮತ್ತು ನ್ಯಾಯಮೂರ್ತಿ ಅಶೋಕ್ ಭೂಷಣ್ ಪೀಠ ಅಯೋಧ್ಯೆ ತೀರ್ಪು ಪ್ರಕಟಿಸಿತ್ತು.

ರಂಜನ್ ಗೋಗೊಯ್ ಅವರ ನಿವೃತ್ತಿ ಬಳಿಕ ನ್ಯಾ. ಶರದ್ ಅರವಿಂದ್ ಬೋಬ್ಡೆ ಮುಖ್ಯ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 2000ರಲ್ಲಿ ಬಾಂಬೆ ಹೈಕೋರ್ಟ್ ನಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ಬೋಬ್ಡೆ ಅವರು ನೇಮಕಗೊಂಡರು. ಮಧ್ಯಪ್ರದೇಶದ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಮಹಾರಾಷ್ಟ್ರ ಮೂಲದವರಾಗಿರುವ ಬೋಬ್ಡೆ ಅವರು ಏಪ್ರಿಲ್ 2013ರಲ್ಲಿ ಸುಪ್ರಿಂಕೋರ್ಟಿಗೆ ಬಡ್ತಿ ಪಡೆದರು. 63 ವರ್ಷದ ಬೋಬ್ಡೆ ಸಿಜೆಐ ಆಗಿ 18 ತಿಂಗಳು ಕಾರ್ಯ ನಿರ್ವಹಿಸಲಿದ್ದಾರೆ.