Crime
ಡ್ರಗ್ಸ್ ದಂಧೆ ಬಗ್ಗೆ ವರದಿ ಮಾಡಿದ್ದಕ್ಕೆ ಪತ್ರಕರ್ತನ ಕೊಲೆ- ಕತ್ತು ಹಿಸುಕಿ ಹತ್ಯೆಗೈದ ಆರೋಪಿಗಳು

– ತಮಿಳುನಾಡಿನಲ್ಲಿ ಭದ್ರತೆ ಸಿಗುತ್ತಿಲ್ಲ ಎಂದು ಪತ್ರಕರ್ತರು ಆಕ್ರೋಶ
ಚೆನ್ನೈ: ಡ್ರಗ್ಸ್ ದಂಧೆಯನ್ನು ಬಯಲಿಗೆಳೆಯುತ್ತಾನೆ ಎಂದು ಟಿವಿ ಪತ್ರಕರ್ತನನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಡ್ರಗ್ ಡೀಲರ್ಗಳ ಕುರಿತು ಪೊಲೀಸರಿಗೆ ಮಾಹಿತಿ ನೀಡುತ್ತಾನೆ ಎಂಬ ಭಯದಲ್ಲಿ ಗ್ಯಾಂಗ್ ಪತ್ರಕರ್ತನನ್ನು ಹತ್ಯೆ ಮಾಡಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇಸ್ರೇವೆಲ್ ಮೋಸಸ್(27) ಕೊಲೆಯಾದ ಪತ್ರಕರ್ತ, ಭಾನುವಾರ ಸಂಜೆ ಅವರನ್ನು ಮನೆಯಿಂದ ಹೊರಗೆ ಕರೆದೊಯ್ದು, ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ. ದಾಳಿ ಮಾಡಿದವರು ಆತನ ಸ್ನೇಹಿತರೇ ಇರಬೇಕು ಎಂದು ಆರಂಭದಲ್ಲಿ ಕುಟುಂಬಸ್ಥರು ಅಂದುಕೊಂಡಿದ್ದರು.
ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಅತಿಕ್ರಮಣ ಮಾಡಿದ ಭೂಮಿಯನ್ನು ಮಾರಾಟ ಮಾಡುವುದು ಹಾಗೂ ಸ್ಥಳೀಯ ಕೆರೆಯ ಸುತ್ತ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಸೆಸ್ ಯಾವುದೇ ರೀತಿಯ ಸುದ್ದಿಯನ್ನು ಬಿತ್ತರಿಸಿರಲಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಪ್ರಕರಣದ ಕುರಿತು ಮೋಸೆಸ್ ತಂದೆ ಜ್ಞಾನರಾಜ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ನನ್ನ ಮಗ ದೂರು ನೀಡಿದ ಬಳಿಕ ಜಿಲ್ಲಾ ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ ಅವರ ಜೀವ ಅಪಾಯದಲ್ಲಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದು, ಮೋಸೆಸ್ ನಮಗೆ ಯಾವುದೇ ರೀತಿಯ ಮಾಹಿತಿಯನ್ನು ನೀಡಿಲ್ಲ. ಈ ಕೊಲೆ ಭೂಮಿ ವಿಚಾರವಾಗಿ ವೈಯಕ್ತಿಕ ಪ್ರತಿಕಾರ ತೀರಿಸಿಕೊಳ್ಳಲು ನಡೆದಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಡಿ.ಶಣ್ಮುಗಪ್ರಿಯ ತಿಳಿಸಿದ್ದಾರೆ. ಆದರೆ ಪೊಲೀಸರ ಈ ವಾದವನ್ನು ಹಿರಿಯ ಪತ್ರಕರ್ತೆ ಭಾರತಿ ತಮಿಝಾನ್ ಅಲ್ಲಗಳೆದಿದ್ದಾರೆ.
ಸೋಮಂಗಲಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳ ಮಾರಾಟದ ಬಗ್ಗೆ ಮೋಸೆಸ್ ವರದಿ ಮಾಡಿದರ್ದು. ಬಳಿಕ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದವು. ಮೋಸೆಸ್ ನೀಡಿದ ದೂರಿನ ಕುರಿತು ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಳ್ಳದ ಹಿನ್ನೆಲೆ ಅವರ ಕೊಲೆ ನಡೆದಿದೆ. ಸುದ್ದಿ ಮಾಡಿದ್ದಕ್ಕಾಗಿ ಈ ಹತ್ಯೆ ನಡೆದಿದೆ, ತಮಿಳುನಾಡಿನಲ್ಲಿ ಪತ್ರಕರ್ತರಿಗೆ ಭದ್ರತೆ ಸಿಗುತ್ತಿಲ್ಲ ಎಂಬುದು ನಾಚಿಕೆಗೇಡಿನ ವಿಚಾರ ಎಂದು ಹಿರಿಯ ಪತ್ರಕರ್ತೆ ಕಿಡಿಕಾರಿದ್ದಾರೆ.
