Connect with us

ಹಿರಿಯ ಪತ್ರಕರ್ತ ನವೀನ್ ಚಂದ್ರಪಾಲ್ ಇನ್ನಿಲ್ಲ

ಹಿರಿಯ ಪತ್ರಕರ್ತ ನವೀನ್ ಚಂದ್ರಪಾಲ್ ಇನ್ನಿಲ್ಲ

ಮಂಗಳೂರು: ಹಿರಿಯ ಪತ್ರಕರ್ತ, ರಂಗಭೂಮಿ ಕಲಾವಿದ ನವೀನ್ ಚಂದ್ರಪಾಲ್ (93) ಜೂ.5ರಂದು ವಿಧಿವಶರಾಗಿದ್ದಾರೆ.

ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪತ್ರಿಕೋದ್ಯಮ ಡಿಪ್ಲೊಮಾದ ಸಾಧನೆಗಾಗಿ ಚಿನ್ನದ ಪದಕವನ್ನು ಪಡೆದಿದ್ದ ಇವರು, ಸಮಾಜವಾದಿ ಚಿಂತನೆಯ ಪ್ರತಿಪಾದಕರಾಗಿದ್ದರು. 1948ರಲ್ಲಿ ಸಂಗಾತಿ ಪಾಕ್ಷಿಕ ಪತ್ರಿಕೆಯನ್ನು ಪ್ರಾರಂಭಿಸಿ, 1950ರಲ್ಲಿ ವಾರಪತ್ರಿಕೆಯಾಗಿ ಮಾರ್ಪಡಿಸಿದ್ದರು. ಅರುಣೋದಯ ಪತ್ರಿಕೆಯ ಸಂಪಾದಕರಾಗಿದ್ದ ಇವರು, ಮುಂಬೈಯಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ದೈನಿಕದ ಸಂಪರ್ಕಾಧಿಕಾರಿ, ಸೀನಿಯರ್ ಎಕ್ಸಿಕ್ಯೂಟಿವ್, ಎನ್‍ಲೈಟ್ ವಾರಪತ್ರಿಕೆಯಲ್ಲಿ ಸಹ ಸಂಪಾದಕ, ಕಾಮರ್ಸ್ ವಾರಪತ್ರಿಕೆಯ ಸಹ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು.

ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ನಾಯಕರಾಗಿದ್ದ ಇವರು, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದರು. ಬಳಿಕ 1957ರಲ್ಲಿ ಕಾಪು ಕ್ಷೇತ್ರದಿಂದ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ ವಿಧಾನಸಭೆಗೆ ಸ್ಪರ್ಧಿಸಿದ್ದರು. ಸ್ವಾತಂತ್ರ್ಯ ಯೋಧ ಸಮಾಜವಾದಿ ಅಮ್ಮೆಂಬಳ ಬಾಳಪ್ಪರ ನಿಕಟವರ್ತಿಯಾಗಿದ್ದರು.

ಸಾಮಾಜಿಕ, ಶೈಕ್ಷಣಿಕವಾಗಿ ತೊಡಗಿಸಿಕೊಂಡಿದ್ದ ಇವರ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಗೌರವಿಸಿದ್ದು, ಯುವ ವಾಹಿನಿ ಕೇಂದ್ರ ಸಮಿತಿಯಿಂದ ವಿಶು ಕುಮಾರ್ ಪ್ರಶಸ್ತಿ, 2013ರಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಕ್ ಟ್ರಸ್ಟ್ ಬಿಜೈ ನಿಂದ ಆತ್ಮಶಕ್ತಿ ದಶಮ ಸಂಭ್ರಮದ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಡಾ.ನಾ.ಮೊಗಸಾಲೆ ಗೌರವ ಸಂಪಾದಕತ್ವದಲ್ಲಿ, ಡಾ.ಬಿ.ಜನಾರ್ಧನ ಭಟ್ ಸಂಪಾದಕತ್ವದಲ್ಲಿ ಶ್ರೀರಾಮ ದಿವಾಣರು ಸಮಾಜವಾದಿ ಪತ್ರಕರ್ತ ನವೀನ್ ಚಂದ್ರ ಪಾಲ್ ಅವರ ವ್ಯಕ್ತಿ ಪರಿಚಯವನ್ನು ಪ್ರಕಟಿಸಿದ್ದರು.

Advertisement
Advertisement