Chamarajanagar
ಜೋಡೆತ್ತುಗಳು ಒಂಟೆತ್ತುಗಳಾಗಿವೆ, ಒಂದು ಮತ್ತೊಂದನ್ನು ಅಟ್ಟಾಡಿಸುತ್ತಿದೆ: ಕಟೀಲ್ ವ್ಯಂಗ್ಯ

ಚಾಮರಾಜನಗರ: ಸಮ್ಮಿಶ್ರ ಸರ್ಕಾರದಲ್ಲಿದ್ದ ಜೋಡೆತ್ತುಗಳು ಈಗ ಒಂಟೆತ್ತುಗಳಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗವಾಡಿದ್ದಾರೆ.
ನಗರದಲ್ಲಿ ಇಂದು ಮಾತನಾಡಿದ ಅವರು, ಎರಡೂ ಎತ್ತುಗಳು ಬೇರೆ ಬೇರೆ ದಾರಿ ಹುಡುಕಿಕೊಂಡು ಬೇರೆ ಬೇರೆ ಆಗಿವೆ. ಒಂದು ಎತ್ತನ್ನು ಮತ್ತೊಂದು ಎತ್ತು ಓಡಿಸಿಕೊಂಡು ಊರೆಲ್ಲಾ ತಿರುಗ್ತಾ ಇರುತ್ತವೆ. ನಾವು ಉಪಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್-ಬಿಜೆಪಿ ಮೈತ್ರಿ ಮಾಡಿಕೊಂಡಿವೆ ಎಂದು ಆರೋಪಿಸಿದ್ದ ಎಚ್ಡಿ ರೇವಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜಕಾರಣದಲ್ಲಿ ಯಾರು ಯಾರ ಜೊತೆ ಇರ್ತಾರೆ ಅನ್ನೋದು ಎಲ್ಲರಿಗೆ ಗೊತ್ತಿದೆ. ಅಪ್ಪ ಯಾರ ಕಡೆ, ಮಗ ಯಾರ ಕಡೆ ಇರ್ತಾರೆ ಅನ್ನೋದು ಸಹ ಗೊತ್ತಿದೆ ಎಂದು ತಿರುಗೇಟು ನೀಡಿದರು.
ಇದೇ ವೇಳೆ ಆರ್.ಆರ್ ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಎಲ್ಲವನ್ನು ರಾಜಕಾರಣ ದೃಷ್ಟಿಯಿಂದ ನೋಡಬಾರದು. ಸಿಬಿಐ ವಿಚಾರಣೆ ನಡೆದರೆ ರಾಜಕಾರಣ ಅಂತಾರೇ, ಐಟಿ ದಾಳಿಯಾದರೆ ರಾಜಕಾರಣ ಅಂತಾರೇ. ಕಾಮಾಲೆ ದೃಷ್ಟಿಯಿಂದ ನೋಡಿದರೆ ಇದೇ ರೀತಿ ಕಾಣೋದು ಎಂದರು.
ಬಿಜೆಪಿ ಸರ್ಕಾರ, ಲೂಟಿ ಸರ್ಕಾರ ಎಂಬ ಸಿದ್ದರಾಮಯ್ಯ ಹೇಳಿಕೆ ತಿರುಗೇಟು ನೀಡಿದ ಕಟೀಲ್ ಅವರು, ಅರ್ಕಾವತಿ ಪ್ರಕರಣ ಸಿದ್ದರಾಮಯ್ಯ ಕಾಲದಲ್ಲೇ ನಡೆದಿದೆ. ಪಿಡಬ್ಲ್ಯುಡಿಯಲ್ಲಿ ಎಷ್ಟು ಪರ್ಸೇಂಟೇಜ್ ತೆಗೆದುಕೊಂಡಿದ್ದಾರೆ ಎಂಬುವುದು ಗೊತ್ತಿದೆ. ಸಿದ್ದರಾಮಣ್ಣ ಸರ್ಕಾರ ಲೂಟಿ ಸರ್ಕಾರ ಎಂಬುದು ಜಗಜ್ಜಾಹೀರಾಗಿದೆ ಎಂದು ಆರೋಪಿಸಿದರು.
