Thursday, 14th November 2019

ಬಯೋಮೆಟ್ರಿಕ್ ಕೆಟ್ಟಿದ್ದಕ್ಕೆ 3 ತಿಂಗಳು ರೇಷನ್ ಕೊಡ್ಲಿಲ್ಲ: ಹಸಿವಿನಿಂದ ವೃದ್ಧ ಸಾವು

ರಾಂಚಿ: ಹಸಿವಿನಿಂದ ಬಳಲಿ ವೃದ್ಧರೊಬ್ಬರು ಮೃತಪಟ್ಟ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ.

ಜಾರ್ಖಂಡ್ ಸಮೀಪ ಲಾತೆಹರ್ ಗ್ರಾಮದ ನಿವಾಸಿ ರಾಂಚರಣ್ ಮುಂಡಾ (65) ಮೃತ ವೃದ್ಧ. ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ಯಂತ್ರ ಕೆಟ್ಟಿತ್ತು. ಹೀಗಾಗಿ ಕಳೆದ ಮೂರು ತಿಂಗಳುಗಳಿಂದ ಯಾವುದೇ ಆಹಾರ ಪದಾರ್ಥ ವಿತರಣೆ ಮಾಡಿರಲಿಲ್ಲ. ಹೀಗಾಗಿ ಹಸಿವಿನಿಂದ ಬಳಲಿ ರಾಂಚರಣ್ ಪ್ರಾಣ ಬಿಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ರಾಂಚರಣ್ ಮುಂಡಾ ಅವರ ಮನೆಯಲ್ಲಿ ಕಳೆದ ಮೂರು ದಿನಗಳಿಂದ ಅಡುಗೆ ಮಾಡಿರಲಿಲ್ಲ. ನ್ಯಾಯಬೆಲೆ ಅಂಗಡಿಯಲ್ಲಿ ಕಳೆದ ಮೂರು ತಿಂಗಳಿನಿಂದ ಆಹಾರ ಪದಾರ್ಥ ವಿತರಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೇವು. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಪತ್ನಿ ಹಾಗೂ ಮಗಳ ಜೊತೆಗೆ ವಾಸಿಸುತ್ತಿದ್ದ ವೃದ್ಧ ರಾಂಚರಣ್ ಮುಂಡಾ ಅವರು ಕೂಲಿ ಕೆಲಸ ಮಾಡಿ, ಜೀವನ ನಡೆಸುತ್ತಿದ್ದರು. ಘಟನೆಯ ಕುರಿತು ಮಾಹಿತಿ ಸಿಗುತ್ತಿದ್ದಂತೆ ಆಹಾರ ಹಾಗೂ ನಾಗರಿಕ ಸರಬರಾಜು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *