Connect with us

Crime

ತಾಯಿಯ ವೇತನ ಕೇಳಲು ಬಂದಿದ್ದ ಮಗನಿಗೆ ಬೆಂಕಿ ಇಟ್ಟು ಕೊಂದ್ರು!

Published

on

ರಾಂಚಿ: ತಾಯಿಯ ವೇತನ ಕೇಳಲು ಬಂದಿದ್ದ ವ್ಯಕ್ತಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಅಮಾನವೀಯ ಘಟನೆ ಜಾರ್ಖಂಡ್‍ನ ಹಜಾರಿಬಾಗ್ ಜಿಲ್ಲೆಯಲ್ಲಿ ನಡೆದಿದೆ.

ಪನ್ನೂಲಾಲ್ ಸಾವೋ (38) ಕೊಲೆಯಾದ ವ್ಯಕ್ತಿ. ರವೀಂದ್ರ ಕುಮಾರ್ ಮೆಹ್ತಾ ಕೊಲೆ ಮಾಡಿದ ಆರೋಪಿ. ಡುಮರಾನ್ ಗ್ರಾಮದಲ್ಲಿ ಗುರುವಾರ ಘಟನೆ ನಡೆದಿದೆ.

ಆರೋಪಿ ರವೀಂದ್ರ ಕುಮಾರ್ ಮೆಹ್ತಾ ಒಡೆತನದ ಸಿಜುವಾ-ಹದಾರಿ ಕಲ್ಲಿನ ಕ್ರಷರ್ ಘಟಕದಲ್ಲಿ ಪನ್ನೂಲಾಲ್ ತಾಯಿ ಕೆಲಸ ಮಾಡುತ್ತಿದ್ದಳು. ಆದರೆ ಕೆಲ ದಿನಗಳಿಂದ ಕೂಲಿ ನೀಡಿರಲಿಲ್ಲ. ಹೀಗಾಗಿ ಪನ್ನೂಲಾಲ್ ಕೂಲಿಯ ಹಣವನ್ನು ಕೊಡುವಂತೆ ಕೇಳಲು ಹೋಗಿದ್ದ.

ರವೀಂದ್ರ ಹಾಗೂ ಪನ್ನೂಲಾಲ್ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಕೋಪಗೊಂಡ ರವೀಂದ್ರ, ಪನ್ನೂಲಾಲ್ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡು ಬಿದ್ದಿದ್ದ ಆತನನ್ನು ಸಮೀಪದ ಬೇಲಿಯಲ್ಲಿ ಎಸೆದಿದ್ದಾರೆ ಎಂದು ಹಜಾರಿಬಾಗ್‍ನ ಗ್ರಾಮೀಣ ಪೊಲೀಸ್ ಉಪ ಅಧೀಕ್ಷಕ ವಿವೇಕಾನಂದ್ ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡು ನರಳುತ್ತಿದ್ದ ಪನ್ನೂಲಾಲ್ ನೋಡಿದ ಕೆಲ ಸ್ಥಳೀಯರು, ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪನ್ನೂಲಾಲ್ ಮೃತಪಟ್ಟಿದ್ದಾನೆ.

ಮೃತನ ಸಂಬಂಧಿಕರು ನೀಡಿದ ದೂರಿನಲ್ಲಿ ರವೀಂದ್ರ ಸೇರಿದಂತೆ ಮೂವರು ಪನ್ನೂಲಾಲ್‍ನನ್ನು ಕಟ್ಟಿ ಹಾಕಿ ಬಳಿಕ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಹೀಗಾಗಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.