Saturday, 14th December 2019

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್. ವಿಶ್ವನಾಥ್ ರಾಜೀನಾಮೆ? – ಕುತೂಹಲ ಮೂಡಿಸಿದ ಪತ್ರಿಕಾಗೋಷ್ಠಿ

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ್ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದ್ದು, ಬೆಂಗಳೂರಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ವಿಶ್ವನಾಥ್ ಸುದ್ದಿಗೋಷ್ಠಿ ಕರೆದಿದ್ದಾರೆ.

ವಿಶೇಷ ಎಂದರೆ ವಿಶ್ವನಾಥ್ ಅವರು ಜೆಡಿಎಸ್ ಲೆಟರ್‍ಹೆಡ್ ಬದಲು ಶಾಸಕರ ಲೆಟರ್‍ಹೆಡ್‍ನಲ್ಲಿ ಮಾಧ್ಯಮಗಳಿಗೆ ಆಹ್ವಾನ ನೀಡಿದ್ದಾರೆ. ಸಿಎಂ ಕುಮಾರಸ್ವಾಮಿ ಭೇಟಿ ಬೆನ್ನಲ್ಲೇ ವಿಶ್ವನಾಥ್ ಪತ್ರಿಕಾಗೋಷ್ಠಿ ತೀರ್ಮಾನ ಕೈಗೊಂಡಿದ್ದಾರೆ. ಸಿಎಂ ಭೇಟಿ ವೇಳೆ, ಸಾ.ರಾ ಮಹೇಶ್ ವಿರುದ್ಧ ದೂರಿನ ಸುರಿಮಳೆಗೈದಿದ್ದಾರೆ ಎನ್ನಲಾಗಿದೆ.

ಇತ್ತ ಮೈಸೂರಲ್ಲಿ ಮಾತನಾಡಿದ ಸಚಿವ ಸಾರಾ ಮಹೇಶ್, ವಿಶ್ವನಾಥ್ ಅವರಿಗೆ ಸ್ವಲ್ಪ ಆರೋಗ್ಯದ ಸಮಸ್ಯೆ ಇದೆ. ಆ ಕಾರಣದಿಂದ ರಾಜೀನಾಮೆ ತೀರ್ಮಾನ ಕೈಗೊಂಡಿದ್ದಾರೆ ಅನ್ನಿಸುತ್ತದೆ ಅಂದಿದ್ದಾರೆ. ಆದರೆ, ವಿಶ್ವನಾಥ್ ಅವರನ್ನು ನಿಖಿಲ್ ಭೇಟಿಯಾಗಿ ಮನವೊಲಿಕೆಗೆ ಯತ್ನಿಸಿದ್ದಾರೆ.

ವಿಶ್ವನಾಥ್ ಅವರ ಭೇಟಿ ಬಳಿಕ ಫೇಸ್‍ಬುಕ್ ಖಾತೆಯಲ್ಲಿ ಫೋಟೋ ಶೇರ್ ಮಾಡಿರುವ ನಿಖಿಲ್ ಅವರು, ಅನುಭವಿ ನಾಯಕರು, ಜೆಡಿಎಸ್ ರಾಜ್ಯಾಧ್ಯಕ್ಷರಾದ ಶ್ರೀ ಹೆಚ್.ವಿಶ್ವನಾಥ್ ರವರನ್ನು ಇಂದು ಭೇಟಿಯಾಗಿ ಮಾರ್ಗದರ್ಶನ ಪಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಹಿರಿಯ ನಾಯಕರು, ರಾಜಕಾರಣದ ಒಳ-ಹೊರಗನ್ನು ಚೆನ್ನಾಗಿ ತಿಳಿದುಕೊಂಡಿರುವ ನಮ್ಮ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಹೆಚ್.ವಿಶ್ವನಾಥ್ ಅವರನ್ನು ಇವತ್ತು ಭೇಟಿ ಮಾಡಿ ಹಲವಾರು ವಿಷಯಗಳನ್ನು ಚರ್ಚಿಸಿ, ಅವರಿಂದ ಮಾರ್ಗದರ್ಶನ ಪಡೆದುಕೊಂಡೆ. ರಾಜಕಾರಣದಲ್ಲಿ ಈಗ ತಾನೆ ಕಾಲಿಡುತ್ತಿರುವ ನನ್ನಂಥ ಯುವ ಕಾರ್ಯಕರ್ತರಿಗೆ, ಪಕ್ಷದ ಎಲ್ಲ ಹಿರಿಯರ, ನಾಯಕರ ಸಲಹೆ, ಸೂಚನೆಗಳು, ಆಶೀರ್ವಾದ, ಮಾರ್ಗದರ್ಶನ ಅತ್ಯವಶ್ಯಕವಾಗಿದೆ ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *