Thursday, 5th December 2019

Recent News

ಶಾಸಕರು ರಾಜೀನಾಮೆ ಕೊಡಲ್ಲ, ಕೊಟ್ರೆ ಮತ್ತೆ ಗೆದ್ದು ಬರಲ್ಲ- ಹೊರಟ್ಟಿ

ಬೆಂಗಳೂರು: ಸರ್ಕಾರಕ್ಕೆ ಏನೂ ಆಗಲ್ಲ. ಯಾವ ಶಾಸಕರು ಕೂಡ ರಾಜೀನಾಮೆ ಕೊಡಲ್ಲ. ರಾಜೀನಾಮೆ ಕೊಟ್ಟರೆ ಮತ್ತೆ ಶಾಸಕರು ಗೆಲ್ತಾರಾ ಎಂದು ಅವರಿಗೇ ನಂಬಿಕೆಯಿಲ್ಲ. ಹೀಗಾಗಿ ಯಾವ ಶಾಸಕರು ರಾಜೀನಾಮೆ ಕೊಡೋಕೆ ತಯಾರಿಲ್ಲ ಎಂದು ಮಾಜಿ ಸಚಿವ, ಜೆಡಿಎಸ್ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಸಿಗದ ವಿಚಾರದ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳೀಗೆ ಪ್ರತಿಕ್ರಿಯಿಸಿದ ಅವರು, ಸುಮ್ಮನೆ ಬಿಜೆಪಿ ಅವರು ಆಸೆ ಬೀಳುತ್ತಿದ್ದಾರೆ ಅಷ್ಟೆ. ಬಿಜೆಪಿ ಅವರ ಆಸೆ ಈಡೇರುವುದಿಲ್ಲ. ಲೋಕಸಭಾ ಚುನಾವಣೆ ಬೇರೆ, ವಿಧಾನಸಭೆ ಚುನಾವಣೆಯೇ ಬೇರೆ, ಸ್ಥಳೀಯ ಚುನಾವಣೆಯೇ ಬೇರೆ. ಇಲ್ಲಿ ಯಾರಿಗೂ ಗೆಲ್ಲುವ ವಿಶ್ವಾಸ ಇಲ್ಲ. ಹೀಗಾಗಿ ಯಾವ ಶಾಸಕರೂ ಸದ್ಯಕ್ಕೆ ರಾಜೀನಾಮೆ ಕೊಡೋದಿಲ್ಲ. ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈತ್ರಿ ಸರ್ಕಾರದಲ್ಲಿ ಸಿಎಂ ಅವರಿಗೆ ಸ್ವಲ್ಪ ಕಷ್ಟ ಇದೆ. ಈ ಸಂದರ್ಭದಲ್ಲಿ ನಾವು ಹಿರಿಯರಾಗಿ ತಾಳ್ಮೆಯಿಂದ ಇರಬೇಕು. ಈಗ ಸರ್ಕಾರ ರಕ್ಷಣೆ ಮಾಡುವುದು ಮುಖ್ಯ. ಹಾಗಾಗಿ ಈಗ ಸಿಎಂ ಆ ಕೆಲಸ ಮಾಡುತ್ತಾ ಇದ್ದಾರೆ. ಹಾಗಾಗಿ ನಾವೆಲ್ಲ ತಾಳ್ಮೆಯಿಂದ ಇದ್ದೇವೆ. ಸಮ್ಮಿಶ್ರ ಸರ್ಕಾರ ಇರೋದರಿಂದ ನಾವು ಹೆಚ್ಚು ಒತ್ತಡ ಹಾಕೋದಿಲ್ಲ ಎಂದರು.

ಎಲ್ಲಾ ಎಂಎಲ್‍ಎಗಳು ಸಚಿವರಾಗಬೇಕು ಅಂತಾರೆ. ಸರ್ಕಾರ ಉಳಿಸಲು ನಾವು ಸಮಾಧಾನವಾಗಿ ಇರಬೇಕು. ಹೀಗಾಗಿ ನಾವು ಒತ್ತಡ ಹಾಕೊಲ್ಲ ಎಂದ ಅವರು ಎಚ್ ವಿಶ್ವನಾಥ್ ಅವರು ಬಿಜೆಪಿಯ ಶ್ರೀನಿವಾಸ್ ಪ್ರಸಾದ್ ಭೇಟಿ ವಿಚಾರದ ಕುರಿತು ಮಾತನಾಡಿ, ವಿಶ್ವನಾಥ್ ಬೆಳಗ್ಗೆ ನನ್ನನ್ನು ಭೇಟಿಯಾಗಿದ್ದರು. ಆಮೇಲೆ ಶ್ರೀನಿವಾಸ್ ಪ್ರಸಾದ್ ಭೇಟಿ ಆಗುತ್ತೇನೆ ಎಂದು ಹೋದರು. ಅವರು 35 ವರ್ಷದಿಂದ ಸ್ನೇಹಿತರು ವೈಯಕ್ತಿಕ ಕೆಲಸಕ್ಕೆ ಹೋಗಿದ್ದಾರೆ. ವಿಶ್ವನಾಥ್ ಪಕ್ಷ ಬಿಡೋದಿಲ್ಲ ಎಂದು ಹೊರಟ್ಟಿ ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *